ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶಿವಣ್ಣ ಬಿರಾದಾರ ಅವರ ಪರಿಚಯ-ಗೊರೂರು ಅನಂತರಾಜು

ಡಾ.  ಸಿಂಪಿಲಿಂಗಣ್ಣನವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲ ತಿಳಿದ ವಿಷಯ.   ಇವರು ಜನಿಸಿದ್ದು ಉತ್ತರ ಕರ್ನಾಟಕದ ಗಡಿನಾಡು ಪ್ರದೇಶ ಚಡಚಣದಲ್ಲಿ. ಇದೇ ಗ್ರಾಮದ ಶ್ರೀ ಶಿವಣ್ಣ  ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮುವಾರ (10-2-2024)ಪ್ರಶಸ್ತಿ ಸ್ವೀಕರಿಸಿದರು.  ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಶ್ರೀ ಶಾರದ ಕಲಾ ಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಇವರ ಪರಿಚಯವಾಯ್ತು.  ಇವರ ಜೊತೆಗೆ ಶ್ರೀ ಲಕ್ಷ್ಮಿ ಅಕ್ಕನ ಬಳಗ, ಚಡಚಣದ ಮಹಿಳಾ ಕಲಾವಿದರು  ಬಂದಿದ್ದರು. ಇವರು  ಸೋಬಾನೆ ಪದ, ತತ್ವಪದಗಳ ಹಾಡುಗಾರಿಕೆ ಪ್ರಸ್ತುತಿ ಪಡಿಸಿದರು.   ಕಾಯ೯ಕ್ರಮ ನಿರೂಪಣೆ ಮಾಡುತ್ತಿದ್ದ   ನಾನು ಬೇರೆ ಯಾವುದಾದರೂ ಜಾನಪದ ಕಲೆ ತಮ್ಮಲಿದ್ದರೆ ಪ್ರದರ್ಶನ ನೀಡುವಂತೆ  ತಿಳಿಸಿದೆ. ಆಗ ಅವರು ಬಯಲಾಟ ಕಲೆ ಇದೆ. ಆದರೆಈಗ ನಾವು  ಕೇವಲ  ಮೂರು ಜನ  ಬಂದಿದ್ದೇವೆ. ಬಯಲಾಟ ಕಲೆಯ ಪ್ರದರ್ಶನ ನೀಡಬೇಕಾದರೆ ಗಾಯನ ಕಲೆಗಾರರು ಬೇಕಾಗುತ್ತದೆ. ಅಂದರೇನೆ ನಮ್ಮ ಕಲೆಯನ್ನು ಯೋಗ್ಯ ಪ್ರದಶಿ೯ಸಲು ಸಾಧ್ಯ ಎಂದರು.  ಆಗ ನಾನು ಪರ್ವಾಗಿಲ್ಲ ನೀವು ಮೂರು ಜನ ಮಾತ್ರವೇನಿಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ನೀಡಿರಿ ಎಂದೆ. ಅವರು ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಒಬ್ಬರು ಸಾರಥಿ, ಒಬ್ಬರು ಕೃಷ್ಣನ ಪಾತ್ರ, ಇನ್ನೊಬ್ಬರು ದುರ್ಯೋಧನನ ಪಾತ್ರ ನಿರ್ವಹಿಸಿ ಒಂದು ಸಣ್ಣ ಪ್ರಸಂಗವನ್ನು ಆಯ್ಕೆ ಮಾಡಿ ಕೋಡು ಯಶಸ್ವಿಯಾಗಿ ಪ್ರದರ್ಶಿಸಿದರು.. ಕೇವಲ 10 ನಿಮಿಷದ ಈ ಪ್ರದರ್ಶನವು ಉತ್ತರ ಕರ್ನಾಟಕ ರಂಗಕಲೆಯ ಸೊಗಡನ್ನು ಬಿ೦ಬಿಸಿತು.ನಂತರ ಊಟ ಮಾಡುವಾಗ ನಾನು ಶಿವಣ್ಣರನ್ನು ವಿಚಾರಿಸಲು ಅವರು ತಮ್ಮ ರಂಗ ಅನುಭವವನ್ನು ಬಿಚ್ಚಿಟ್ಟರು. 1951 ರಲ್ಲಿ ಜನಿಸಿದ ಇವರ ತಂದೆಯವರಾದ ದಿವಂಗತ ಮಾಧುರಾಯಗೌಡ್ರು ಮೂಲತ: ಬೈಲಾಟ ಕಲಾವಿದರು. ಇವರ ವಿದ್ಯಾಭ್ಯಾಸ ಕೇವಲ ನಾಲ್ಕನೆಯ ತರಗತಿ ಆದರೂ  ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವ ನಾಣ್ಣುಡಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಾಮಾಜಿಕ ಧಾರ್ಮಿಕ ರಾಜಕೀಯ ಜಾನಪದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಗ್ರಾಮದ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇಂತಹ ಒಳ್ಳೆಯ ತಂದೆಯ ಮಗನಾಗಿ ಈ ಸಮಾಜಕ್ಕೆ ತಾವು ಕೂಡ ಒಳ್ಳೆಯ  ಕಾರ್ಯವನ್ನು ಮಾಡಿ ತಂದೆಗೆ ತಕ್ಕ ಮಗ ಎನಿಸಿಕೊಂಡು ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಮನೋಭಿಲಾಶೆಯಿಂದ  ಇವರು ತಂದೆಯವರು ಅತಿ ಪ್ರೀತಿಯಿಂದ ಅಪ್ಪಿಕೊಂಡ  ಬಯಲಾಟ ಕಲೆಯನ್ನು ಒಪ್ಪಿಕೊಂಡರು. ಇದೀಗ ಈ ಕಲೆ ನಶಿಸುತ್ತಿದೆ.   ಇದಕ್ಕೆ ಮರು ಜೀವ ತುಂಬಲು ಪ್ರಯತ್ನ ಮಾಡುವ ಹಂಬಲದಿಂದ ಇವರು  ಈ ಕ್ಷೇತ್ರದಲ್ಲಿ ಪ್ರಯತ್ನಶೀಲರು.  ತಮ್ಮ ಗ್ರಾಮದಲ್ಲಿ ಲಕ್ಷ್ಮಿ ದೊಡ್ಡಾಟ ಸಂಘವನ್ನು ಕಟ್ಟಿ ಬಾಣಸುರ ಕಥೆ, ಚಿತ್ರಸೇನ ಗಂಧರ್ವ,  ಇಂದ್ರಜಿತ ಕಾಳಗ, ಧರ್ಮ ವಿಜಯ ಎಂಬ ಬಯಲಾಟಗಳನ್ನು ಕಲಿಸಿ ಆಡಿಸಿದ್ದಾರೆ. ಈ ಧರ್ಮ ವಿಜಯ ಬಯಲಾಟದ ಕಥೆಯು ಬಹಳ ಚೆನ್ನಾಗಿದ್ದು ಪದ್ಯಗಳು ಕೂಡ ರಾಗ ತಾಳಗಳಲ್ಲಿ ಸುಮಧುರವಾಗಿವೆ. ಈ ಕತೆಯನ್ನು ಕೇವಲ 6ನೇ ತರಗತಿ ಕಲಿತ ಇಸ್ಲಾಂ ಧರ್ಮದ ವ್ಯಕ್ತಿ ಓರ್ವರು ಬರೆದಿದ್ದಾರೆ. ಇವರ ಹೆಸರು ಅಬ್ದುಲ್ ಮೇಸ್ತ್ರಿ. ಗ್ರಾಮ ಹಾವಿನಾಳ ಎಂದರು. ಈ ಕಲೆಯ ಬಗ್ಗೆ ಹೇಳುವುದು ಸಾಕಷ್ಟು ಇದೆ. ಕಲೆಯು ಯಾಕೆ ನಶಿಸುತ್ತಿದೆ ? ಕಲಾವಿದರ ಸಮಸ್ಯೆಗಳೇನು? ಯಕ್ಷಗಾನಕ್ಕೂ ಬಯಲಾಟಕ್ಕೂ ಇರುವ ಸಾಮ್ಯತೆಗಳು ಏನು?  ವೈವಿಧತೆಗಳು ಏನು? ಮುಂತಾದ ವಿಷಯಗಳ ಬಗ್ಗೆ ತಾವು  ಅಭ್ಯಾಸ ಮಾಡುತ್ತಲಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ಲೇಖನ ಸಿದ್ಧಪಡಿಸುವದಾಗಿ  ಹೇಳಿದರು.   ನಾನು ಬರೆದ ಭೀಮಾ ತೀರದ ಬಯಲಾಟ  ಕೃತಿಯು ಮುದ್ರಣವಾಗುತ್ತಿದೆ ಎಂದರು.    ಪಂಪ ಮಹಾಕವಿ ಹೇಳಿದ ಆರಂಕುಶ ವಿಟ್ಟೊಡೆ0 ನೆನೆಯುದಂ ಎನ್ನ ಮನ ಬನವಾಸಿ ದೇಶವಂ ಇದನ್ನು ಇವರು ನೆನೆಯುವುದೆನ್ನ ಮನ ಬಯಲಾಟ ಕಲೆಯು ಎಂದು ಪರಿವರ್ತಿಸಿಕೊಂಡು ಸಾಗಿದ್ದಾರೆ.  ಕಲೆ ಬಗ್ಗೆ ಆಸಕ್ತಿವುಳ್ಳ  ವಿದ್ವಾಂಸರ ತಜ್ಞರ  ಸಂಪರ್ಕದಲ್ಲಿ ಶಿವಣ್ಣರವರು  ತಮ್ಮ ಜ್ಞಾನ ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳುವ ದಿಶೆಯಲ್ಲಿ ಸದಾ ತಲ್ಲಿನರು. ಇಂದು ಪೊನ್ ಗೆ ಸಿಕ್ಕಿ ಸನ್ಮಾನದ ಪೋಟೋ ಕಳಿಸಿ, ನಿಮ್ಮ ಕಡೆ ನಮ್ಮ ಕಲೆಯ ಪ್ರದರ್ಶನಕ್ಕೆ ಒಮ್ಮೆ ಅವಕಾಶ ಮಾಡಿ, ನಾವು ಒಂದು ತಂಡ ಬರುತ್ತೇವೆ ಎ೦ದರು. ಸರಿ, ಬಯಲಾಟ ಅಕಾಡೆಮಿ ಸದಸ್ಯರು ಡಾ.ಚಂದ್ರು ಕಾಳೇನಹಳ್ಳಿಯವರು ಈ ದಿಶೆಯಲ್ಲಿ ಪ್ರಯತ್ನಿಸಿದರೆ ನಮ್ಮ ಕಡೆಯ ಸಹಕಾರ ಇರುತ್ತದೆ ಎಂದು ಶಿವಣ್ಣ ಬಿರಾದಾರರಿಗೆ ಅಭಿನಂದನೆ ಹೇಳಿದೆ..


Leave a Reply

Back To Top