ಮತ್ತೆ ಮಳೆಯಾಗಿದೆ
ನಿನ್ನೊಲವಿನ ವರ್ಷಧಾರೆಗೆ
ನನ್ನೊಳಗಿನ ನವಿಲು
ಗರಿದೆದರಿ ನರ್ತಿಸುತಿದೆ
ಖುಷಿಗೆ ಪಾರವೇ ಇಲ್ಲದಂತೆ !
ಮತ್ತೆ ಮಳೆಯಾಗಿದೆ
ಕನಸು ಹೊಸದಾಗಿದೆ..
ಫಸಲಿಲ್ಲದ ಬಂಜರುಭೂಮಿ
ಮುಂಗಾರಿನ ಸ್ಪರ್ಶಕೆ ತಾ ಚಿಗುರೊಡೆದಿದೆ
ಒಡಲಕಾವ ತಣಿಸಿ ಹನಿಯ ಸಿಂಚನಕೆ
ಬೀಜ ಮೊಳೆತು ಜೀವ ಅಂಕುರಿಸಿದೆ
ಸತ್ತಬೇರುಗಳೆಲ್ಲ ಉಕ್ಕಿ ಮರುಕನಸು
ಸುಪ್ತ ಚೇತನದಲ್ಲಿ ಜಾಗೃತವಾಗಿದೆ
ನಿಸ್ತೇಜದಿ ಜಡವಾಗಿದ್ದ ಬೇರು
ವರ್ಷ ಪೋಷಕಕ್ಕಾಗಿ ಹಂಬಲಿಸಿದೆ
ಬೆಳೆದು ವೃಕ್ಷವಾಗಲೀಗ ಅದಕೊಂದು
ದೃಢರಕ್ಷಣೆಯ ಆಸರೆ ದೊರೆತಿದೆ
ಜಾತಿಮತದಾಚೆಗಿನ ಸಹಬಾಳ್ವೆಯಲಿ ತಾನು
ಬೆಳೆದು ಹೆಮ್ಮರವಾಗ ಹೊರಟಿದೆ.
*****
ಹೆಚ್.ಡಿ.ತೇಜಾವತಿ