ಲೇಖನ ಸಂಗಾತಿ
ಶಮಾ ಜಮಾದಾರ
ಮರಳಿ ಬಾ ಮಣ್ಣಿಗೆ
![](https://sangaati.in/wp-content/uploads/2025/02/download-2-3.jpg)
ಕಣ್ಣ ತುಂಬಾ ಹೊನ್ನ ಕನಸುಗಳ ಮೂಟೆ ಹೊತ್ತು, ಬದುಕಿನ ಹೊಸ್ತಿಲು ಮೆಟ್ಟುವ ಮನುಷ್ಯನ ಜೀವನ ಇಂದು ಎತ್ತ ಸಾಗುತಿದೆ ಎಂಬುದನ್ನು ಒಮ್ಮೆ ಹೊರಳಿ ನೋಡಿದರೆ, ಆಘಾತವಾಗುವುದು ಖಚಿತ.
ಅಭಿವೃದ್ಧಿಯ ಹೆಸರಿನಲ್ಲಿ ಬರಬಾದಿಯತ್ತ ನಮ್ಮ ಬದುಕು ಸಾಗಿದೆ. ಪೂರ್ವಜರ ಕಾಲದ ಆ ಶಾಂತಿ ನೆಮ್ಮದಿಗಳು ಕನಸಿನ ಮಾತಾಗಿವೆ. ಎಷ್ಟೇ ಸಂಪತ್ತು ತುಂಬಿ ತುಳುಕುತ್ತಿದ್ದರೂ.. ಆರೋಗ್ಯ ಸಮಸ್ಯೆಗಳು ಮೈಮನಸುಗಳ ಸುತ್ತ ತಳಕುಹಾಕಿ ವಯಸ್ಸಲ್ಲದ ವಯಸ್ಸಿನಲ್ಲಿ ಮಸಣದ ದಾರಿಯನ್ನು ತೋರುತ್ತಿವೆ.
ಇದಕ್ಕೆ ಕಾರಣಗಳನ್ನು ಹುಡುಕಹೊರಟಾಗ ನಮಗೆ ಕಂಡುಬರೋದು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ. ಎಲ್ಲದರಲ್ಲೂ ಹೊಸತನವನ್ನು ಅಪೇಕ್ಷಿಸುವ ನಾವು, ನಾಲಿಗೆಯ ರುಚಿಗಾಗಿ ವಿಷವನ್ನೇ ಸೇವಿಸುತ್ತಿದ್ದೇವೆ. ಮಾರಕ ರೋಗಗಳಿಗೆ ನಾವೇ ಆಮಂತ್ರಣ ಕೊಡುತ್ತಿದ್ದೇವೆ. ಶುಚಿತ್ವ ಶುದ್ಧತೆಗೆ ಈಗ ಕಾಲವಲ್ಲ, ಏಕೆಂದರೆ ಸಮಯದ ಕೊರತೆ ಕಾಡುತ್ತಿದೆ. ಹೊರಗಿನ ಕೆಲಸ ಮುಗಿಸಿ ಬರುವಾಗ ತಮ್ಮ ಯೋಗ್ಯತೆಗೆ ಅನುಗುಣವಾಗಿ ಏನಾದರೂ ತಿಂದು, ಅಥವಾ ಆನ್ಲೈನ್ ಆರ್ಡರ್ ಮಾಡಿ ಇಷ್ಟದ ಊಟ ತರಸಿ.. ತಿನ್ನುವುದೇ ಬಹುತೇಕರ ದಿನಚರಿಯಾಗಿದೆ. ಮೊಬೈಲ್ ಕೈಯಲ್ಲಿ ಹಿಡಿದು ಕುಳಿತರೆ, ತಡರಾತ್ರಿಯವರೆಗೂ ಅದರಲ್ಲೇ ಮುಳುಗಿ, ಮಲಗಿದರೆ.. ಮತ್ತೆ ಬೇಗ ಎದ್ದು ಕೆಲಸಕ್ಕೆ ಓಡುವ ಧಾವಂತ..ಸದಾ ಓಡುತ್ತಿರುವುದೇ ಬದುಕಾಗಿದೆ ಈಗ. ಸರಿಯಾದ ನಿದ್ರೆ ಆಹಾರ ಇರದೇ.. ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡದೇ ಇದ್ದೀತೇ..??
![](https://sangaati.in/wp-content/uploads/2025/02/download-3-3.jpg)
ಹಳ್ಳಿಗಳ ಪ್ರಶಾಂತ ಮತ್ತು ಸ್ವಚ್ಛ ವಾತಾವರಣ ಕೂಡ ಇಂದು, ಕಲುಷಿತಗೊಂಡಿದೆ. ವ್ಯವಸಾಯದಲ್ಲಿ ಅಭಿರುಚಿ ಕಳೆದು ಕೊಂಡಿರುವ ರೈತರು, ಒಮ್ಮೆಲೇ ಶ್ರೀಮಂತರಾಗುವ ಆಶೆಗೆ ತಮ್ಮ ಜಮೀನುಗಳನ್ನು ಪ್ಲಾಟ್ ಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾ…ಉತ್ತುವ ಬಿತ್ತುವ ಕೆಲಸಕ್ಕೆ ರಾಜೀನಾಮೆ ನೀಡಿ, ನಗರ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಲಾಭದಾಸೆಗೆ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸಿ, ಸತ್ವರಹಿತ ಬೆಳೆಗಳನ್ನು ಬೆಳೆದು, ಸಾರ್ವಜನಿಕರ ಆರೋಗ್ಯದ ಮೇಲೆ ನಿತ್ಯ ದುಷ್ಪರಿಣಾಮ ಬೀರಲು ಕಾರಣರಾಗುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ, ಮೊದಲು ಎಷ್ಟು ಚೆಂದವಿತ್ತು ನಮ್ಮ ಸಮಾಜ ಎನಿಸದೇ ಇರದು. ಗುಡಿ ಕೈಗಾರಿಕೆಗಳು, ದನಗಳ ಶೆಗಣಿಯ ಗೊಬ್ಬರ, ಆಕಳು ಎಮ್ಮೆಗಳ ಹಾಲು, ಹೈನುಗಾರಿಕೆ.. ಕಲಬೆರಕೆ ರಹಿತ ಆಹಾರ ಪದಾರ್ಥಗಳು..ಮಾನವನ ಬದುಕನ್ನು ಬಂಗಾರವಾಗಿಸಿದ್ದವು. ಅಂದು ಲಾಭ ಬಡುಕರಿರಲಿಲ್ಲ..ಬರೀ ಮನುಷ್ಯರಿದ್ದರು. ಒಬ್ಬರು ಇನ್ನೊಬ್ಬರಿಗಾಗಿ ಬದುಕು ನಡೆಸುತ್ತಿದ್ದರು. ತಮ್ಮಲ್ಲಿರುವ ಪದಾರ್ಥಗಳನ್ನು ಕೊಟ್ಟು, ಅವರಲ್ಲಿರುವ ಪದಾರ್ಥಗಳನ್ನು ಪಡೆದು..ಜೀವನ ನಡೆಸುತ್ತಿದ್ದರು. ಕಂಬಾರಿಕೆ, ಕುಂಬಾರಿಕೆ, ನೇಕಾರಿಕೆ, ಮೇದಾರಿಕೆ..ಚಂಬಾರಿಕೆ, ಈ ಎಲ್ಲ ಕುಲ ಕಸುಬುಗಳನ್ನು ಆ ಮನೆತನಗಳು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿದ್ದವು. ಅವರಿಗೆ ರೈತರು ವರ್ಷಕ್ಕೊಮ್ಮೆ ಕಾಳು ಕಡಿಗಳನ್ನು ಕೊಟ್ಟು ವರ್ಷಾನುಗಟ್ಟಲೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ, ಇಂದು..ಆ ಸಹಕಾರಿ ಮನೋಭಾವದ ಸಮಾಜ ಕಾಣೆಯಾಗಿದೆ. ಗುಡಿ ಕೈಗಾರಿಕೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಅದನ್ನೇ ನೆಚ್ಚಿಕೊಂಡು ಬಾಳುತ್ತಿದ್ದ ಕುಟುಂಬಗಳು.. ಅಕ್ಷರಶಃ ಶೋಚನೀಯ ಸ್ಥಿತಿಯಲ್ಲಿ ಇದ್ದಾರೆ. ರೈತಾಪಿ ಕುಟುಂಬಗಳು ಕಡಿಮೆಯಾಗಿ, ಅವರ ಕೆಲಸಗಳಿಗೆ ಸಂಚಕಾರ ಬಂದೊದಗಿದೆ. ಮತ್ತು ಇಂದು ಸಂತೆಗಳಲ್ಲಿ ಸುಲಭವಾಗಿ ಸಿಗುವ ರೆಡಿಮೇಡ್ ವಸ್ತುಗಳತ್ತ ಜನರು ಆಕರ್ಷಿತರಾಗಿರುವುದರಿಂದ.. ದುಡಿದು ತಿನ್ನುವ ಬಡ ಕರಕುಶಲಗಾರರು ಮೂಲೆ ಗುಂಪಾಗಿದ್ದಾರೆ. ಥಳಥಳ ಹೊಳೆಯುವ ಸ್ಟೀಲ್ ಪಾತ್ರೆಗಳ ಮುಂದೆ, ಮಂಕಾದ ಮಣ್ಣಿನ ಮಡಿಕೆಗಳು ಮಮ್ಮಲ ಮರುಗುತಿವೆ. ನಾವು ಚಿಕ್ಕವರಿದ್ದಾಗ ಬಳಸುತ್ತಿದ್ದ ತಾಮ್ರದ ಹಿತ್ತಾಳೆಯ ಪಾತ್ರೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವಂತಾಗಿದೆ. ಕಲಾಯಿ ಮಾಡುವ ಕಲಾಯಿಗಾರರ ಆ ಧ್ವನಿ ಈಗ ಕೇಳುವುದಿಲ್ಲ.
ನಸುಕಿನಲ್ಲೇ ಎದ್ದು, ಪುರುಷರು ತಂದು ಹಾಕಿದ ಬೊಂಬು, ಬಿದಿರುಗಳನ್ನು ಸಣ್ಣ ಎಳೆಗಳಾಗಿ ಸೀಳಿ, ನೀರಿನಲ್ಲಿ ನೆನೆಸಿ, ಮೆದು ಮಾಡಿಕೊಂಡು, ಬುಟ್ಟಿ ಮೊರಗಳನ್ನು ಕಲಾತ್ಮಕವಾಗಿ ಹೆಣೆಯುತ್ತಾ ಕೂರುವ ಆ ಹೆಂಗಳೆಯರೀಗ…ಕಣ್ಮರೆಯಾಗಿದ್ದಾರೆ. ಬಿದಿರು ಬುಟ್ಟಿಗಳನ್ನು ವರ್ಷಾನುಗಟ್ಟಲೆ ಕಾಪಿಡುವ ಅವುಗಳಿಗೆ ಕ್ಯಾರೆಣ್ಣೆ ಲೇಪಿಸುವ ಜನ ಟಿನ್ ಗಳನ್ನು ಹೊತ್ತು ಬರುತ್ತಿದ್ದರು. ಕಪ್ಪನೆಯ ಆ ಎಣ್ಣೆಯನ್ನು ಬುಟ್ಟಿ, ಮೊರಗಳಿಗೆ ಲೇಪಿಸಿ, ತಿಂಗಳವರೆಗೆ ಒಣಗಿಸಿ ಉಪಯೋಗಿಸುತ್ತಿದ್ದ ಆ ದಿನಗಳು ಮತ್ತೇ ಮರಳಬಹುದೇ ಇಂದಿನ ಪ್ಲಾಸ್ಟಿಕ್ ಯುಗದಲ್ಲಿ ?
ಇನ್ನು, ಮಹಿಳೆಯರ ಹಣೆಗೆ ಹಂಚಿಬೊಟ್ಟಿಡಲು ಹೆಂಗಸರು ಬರುತ್ತಿದ್ದರು.. ಸಣ್ಣ ಬಾಲೆಯರನ್ನು ಹಿಡಿದು, ಹಣೆಯ ಮಧ್ಯದಲ್ಲಿ ಹಸಿರು ಹಂಚಿ ಬೊಟ್ಟನ್ನು ಚುಚ್ಚಿಸುತ್ತಿದ್ದರು. ಏಳೆಂಟು ಸೂಜಿಗಳನ್ನು ಒಟ್ಟಾಗಿ ಕಟ್ಟಿ, ಹಸಿರು ದ್ರಾವಣದಲ್ಲಿ ಅದ್ದಿ ಚುಚ್ಚುವ ಆ ಕೆಲಸ ಪಾಪ ಮಕ್ಕಳಿಗೆ ನೋವು ಕೊಡುತ್ತಿತ್ತು. ಆದರೆ, ಅನಿವಾರ್ಯವಾಗಿತ್ತು. ಕಣ್ಣುಗಳ ಪಕ್ಕದಲ್ಲಿ, ಗದ್ದಕ್ಕೆ.. ಕೈಗಳಿಗೆ..ಈ ಬೊಟ್ಟುಗಳ ಚಿತ್ತಾರ ಮೂಡುತ್ತಿತ್ತು. ಅದು ಸಾಯುವವರೆಗೂ ಅಳುಕುತ್ತಿರಲಿಲ್ಲ. ಇಂದು, ಹಂಚಿಬೊಟ್ಟಿನ ಬದಲು ಟ್ಯಾಟೂ ರಾಜ್ಯಭಾರ ನಡೆಸಿದೆ. ದನದ ಹಸಿ ಚರ್ಮ ಸಂಗ್ರಹಿಸಿ, ಸಂಸ್ಕರಿಸಿ, ರೈತರಿಗೆ ಚಪ್ಪಲಿಗಳನ್ನು ಹೊಲಿದು ಕೊಡುವ ಚಂಬಾರರು ಕೂಡ ಹತ್ತು ಹಲವು ಬ್ರಾಂಡ್ ಗಳ ಅಬ್ಬರದ ಮುಂದೆ ಮೌನವಾಗಿದ್ದಾರೆ. ಬದಲಾವಣೆಯ ಗಾಳಿ, ಹಲವಾರು ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ.. ವಿನಾಶದತ್ತ ನಾವು ಸಾಗುತ್ತಿದ್ದೇವೆ. ಬದುಕನ್ನು ಅತ್ಯಂತ ಸರಳಗೊಳಿಸಿ ಕೊಳ್ಳುವ ಭರದಲ್ಲಿ ಅನಾರೋಗ್ಯವನ್ನು ಪುಕ್ಕಟೆಯಾಗಿ ಪಡೆಯುತ್ತಿದ್ದೇವೆ. ನಡೆಯುವ ಅಭ್ಯಾಸ.. ಕಡಿಮೆಯಾಗಿದೆ. ಫಾಸ್ಟ್ ಫುಡ್ ಸೇವನೆ.. ಹೆಚ್ಚಾಗಿದೆ. ಕುಳಿತು ಮಾಡುವ ಕೆಲಸಗಳಿಂದ ಕ್ರಿಯಾಶೀಲತೆ ಇಲ್ಲವೇ ಇಲ್ಲ. ಬೆಲೆ ಹೆಚ್ಚಳ, ಐಶಾರಾಮಿ ಬದುಕಿನ ಹಪಾಹಪಿ.. ಹಣ ಗಳಿಸುವ ಚಿಂತೆ, ಸಮಯ ಪರಿಪಾಲನೆಯ ಕೊರತೆ.. ಈ ಎಲ್ಲವುಗಳ ಪರಿಣಾಮ ಒತ್ತಡ ಹೆಚ್ಚಾಗಿದೆ. ಈಗ ಏನಿದ್ದರೂ ಆಡಂಬರದ ಪ್ರದರ್ಶನ. ಈ ಎಲ್ಲದರ ನಡುವೆ ಕೃಶಿಸಿ ಹೋಗಿರುವುದು ಸಾಮಾನ್ಯ ನಾಗರಿಕರ ಮತ್ತು ಕುಲ ಕಸುಬುದಾರರ ಬದುಕು. ಹಳ್ಳಿಗಳೀಗ ವೃದ್ಧರ ವಾಸಸ್ಥಾನಗಳಾಗಿ ಬದಲಾಗಿವೆ. ಜಮೀನುಗಳನ್ನು ಮಾರಿಕೊಂಡು ಯುವಕರು ನಗರಗಳಿಗೆ ವಲಸೆ ಹೋಗಿದ್ದಾರೆ. ಅಲ್ಲೇನಾದರೂ ಒಳ್ಳೆಯ ದುಡಿಮೆ ಇದ್ದರೆ ಮಾತ್ರ ಅವರಿಗೆ ವೃದ್ಧ ತಂದೆ ತಾಯಿಗಳು ನೆನಪಿರುತ್ತಾರೆ. ಇರದಿದ್ದರೆ..ಆ ವೃದ್ಧರು ಮಕ್ಕಳ ನಿರೀಕ್ಷೆಯಲ್ಲಿ ಒಂದು ದಿನ ಇಲ್ಲವಾಗುತ್ತಾರೆ. ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಮಕ್ಕಳು ಮಾರಿಕೊಂಡು, ಹೆತ್ತವರನ್ನು ಬೀದಿಯ ಹೆಣವಾಗಲು ಬಿಡುವುದು ಈಗ ಸರ್ವೇಸಾಮಾನ್ಯ ದೃಶ್ಯವಾಗಿದೆ. ಇದರಿಂದಾಗಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತುತ್ತಿವೆ. ನಾಗರಿಕ ಸಮಾಜದ ಹೆಸರಿನಲ್ಲಿ ನಾವಿಂದು ಅಮಾನವೀಯ ಮನಸುಗಳ ನಡುವೆ ಬದುಕುತ್ತಿದ್ದೇವೆ. ಸ್ವಾರ್ಥ ಸಾಧನೆಗಾಗಿ.. ಏನು ಬೇಕಾದರೂ ಮಾಡಲು ತಯಾರಿರುವ ಕಟುಕ ಮನುಜರ ಲೋಕ ಈಗ ಚಾಲ್ತಿಯಲ್ಲಿದೆ. ಬದಲಾವಣೆ ಬೇಕು, ಅದು ಜಗದ ನಿಯಮ. ಆದರೆ, ಅದರ ಹೆಸರಿನಲ್ಲಿ ಮಾನವ ಸಂಕುಲಕ್ಕೆ ಕೊಡಲಿ ಪೆಟ್ಟು ಬೀಳುತ್ತಿರುವುದು ನಂಬಲೇ ಬೇಕಾದ ಸತ್ಯ. ಪಾರಂಪರಿಕ ಆಚರಣೆಗಳನ್ನು, ಮನೆಮದ್ದುಗಳ ನಂಬಿಕೆಗಳನ್ನು ಗಾಳಿಗೆ ತೂರಿ, ತೋರಿಕೆಯ ಜೀವನಕ್ಕೆ ಮರುಳಾಗಿ.. ಮುಷ್ಠಿಯಿಂದ ಸೋರಿಹೋಗುವ ಮರುಳಿನಂತೆ… ಸರಿಯುತ್ತಿರುವ ಆಯುಷ್ಯ ಮತ್ತು ಆರೋಗ್ಯವನ್ನು ಉಳಿಸಿ ಕೊಳ್ಳುವುದು ಈಗ ಅತ್ಯವಶ್ಯಕವಾಗಿದೆ. ಧಿಡೀರ್ ಹಣ ಗಳಿಕೆಯ ಅಡ್ಡ ರಸ್ತೆಗಳನ್ನು ಹುಡುಕದೇ ನಮ್ಮ ಉಸಿರಾದ ಹಸಿರನ್ನು ಉಳಿಸುವತ್ತ ಯುವಜನತೆ ಯೋಚಿಸಬೇಕಾಗಿದೆ. ಸಾವಯವ ಕೃಷಿಗೆ ಒತ್ತು ಕೊಟ್ಟು, ರಾಸಾಯನಿಕ ಗೊಬ್ಬರಗಳ ಉಪಯೋಗ ಕಡಿಮೆ ಮಾಡೋಣ. ನಮ್ಮ ನೆಲದ ಉತ್ಪನ್ನಗಳಿಂದ ತಯಾರಿಸುವ ವಸ್ತುಗಳನ್ನು ಬಳಸಿ, ಪ್ಲಾಸ್ಟಿಕ್ ರಾಕ್ಷಸನ ಅಟ್ಟಹಾಸಕ್ಕೆ ಮಟ್ಟ ಹಾಕಿ, ನೆಲದ ಮೇಲೆ ಆಗುತ್ತಿರುವ ಪ್ಲಾಸ್ಟಿಕ್ ದಾಳಿಯನ್ನು ತಡೆಯೋಣ.. ಮರಳಿ ಬಾ ಮಣ್ಣಿಗೆ ಎನ್ನುವ ಆಂಧೋಲನ ನಡೆಯುವುದು ಈಗ ಅತ್ಯವಶ್ಯಕವಾಗಿದೆ. ಯುವಕರ ವಲಸೆಯನ್ನು ತಡೆದು, ನಮ್ಮ ದೇಶದ ಸಂಸ್ಕೃತಿ ಸಂಪತ್ತನ್ನು ನಾವೇ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡೋಣ. ಪಾಠಗಳ ಪಠ್ಯದಲ್ಲಿ ಕೃಷಿ ಸಂಬಂಧಿತ ವಿಷಯಗಳನ್ನು ಸೇರಿಸಿ, ಮಕ್ಕಳಲ್ಲಿ ಕೃಷಿಯ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುವಂತೆ..ಪ್ರೇರೇಪಿಸೋಣ. ಗುಡಿ ಕೈಗಾರಿಕೆಗಳು ಮತ್ತೆ ಉಸಿರಾಡುವಂತೆ ಸಹಾಯ ಸಹಕಾರವನ್ನು ನೀಡಲು ಸರ್ಕಾರ ಕೆಲಸ ಮಾಡುವಂತೆ.. ಒತ್ತಾಯ ಹೇರಿ.. ನಮ್ಮ ದೇಶದ ಪರಂಪರೆಯನ್ನು ಪುನರುಜ್ಜೀವನ ಗೊಳಿಸುವ ಮೂಲಕ ಮಣ್ಣಿನ ಮಕ್ಕಳಾಗಿ ಬದುಕೋಣ ಎಂದು ಕರೆನೀಡುವೆ.
ಶಮಾ ಜಮಾದಾರ
![](https://sangaati.in/wp-content/uploads/2023/11/shama-1009x1024.jpg)
.
ನನ್ನ ಲೇಖನ ಪ್ರಕಟಿಸಿದ ಮಧು ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ವಾಸ್ತವವನ್ನು ಬಿಂಬಿಸುವ ಅರ್ಥಪೂರ್ಣವಾದ ಲೇಖನ ತುಂಬಾ ಚನ್ನಾಗಿದೆ.