ಮಳೆಗಾಲದ ಕನವರಿಕೆ

Green Grass

ಮಳೆಗಾಲದ ರಾತ್ರಿಗಳಿಗೆ
ಮಾರನೇ ದಿನಕ್ಕೆ ತಂಗಳು
ನಿದ್ದೆಯುಳಿಸುವ ಬಾಬತ್ತು
ಹೇಗೆ ಮಲಗಿದರೂ
ಮುಂಜಾವಿನ ಕಾಲುಸೆಳೆತ
ತಲೆಬಾಲವಿಲ್ಲದ ಉದ್ದುದ್ದ
ಕನಸುಗಳ ಮುಸುಗು
ಒಂದೊಳ್ಳೆ ಸವಿಘಟ್ಟಕ್ಕೆ
ಒಯ್ದು ನಿಲ್ಲಿಸಿದ ಕ್ಷಣವೇ
ಫಳಾರನೆ ಗುಡುಗು- ಸಿಡಿಲು
ಯಾರ ಮನೆಯ ಮಾಳಿಗೆಯ
ಮೇಲೋ ಕುಳಿತು ಗೊಳೋ
ಅಳುವ ಬೆಕ್ಕು
ಅತ್ತಿತ್ತ ಹೊರಳಿದರೆ
ಮಳೆಯಲ್ಲೇ ನಡುಗುತ್ತಾ ನೆನೆಯುತ್ತಾ
ಸ್ವಿಗ್ಗಿ ಡೆಲಿವರಿ ಕೊಟ್ಟವನ
ಕಣ್ಣೇಕೆ ನೋಡಲಿಲ್ಲ?
ಮನೆಯೊಳಗೆ ಕರೆದು
ಬಿಸಿ ಕಾಫಿ/ ಕಷಾಯ ಕೊಟ್ಟು
ಕಳಿಸಬಹುದಿತ್ತೇನೋ!
ಅಮ್ಮ ಹಸಿದ ಬೀದಿನಾಯಿಗೂ
ಬಿಸಿಬಿಸಿ ಬೋಡುಪ್ಪಿಟ್ಟು
ಕೆಲವೊಮ್ಮೆ ಚೂರಿಷ್ಟು ಕಾಫಿ
ಮೆಟ್ಟಿಲ ಕೆಳಗೆರಡು ಗೋಣಿತಾಟು
ಹೊಂಚುತ್ತಿದ್ದು ನೆನಪಾಗಿ
ಮತ್ತೆಲ್ಲೋ ಎಳೆದು ನಿಲ್ಲಿಸುವ
ಕಣ್ಣಮುಚ್ಚಾಲೆ

ನೀರು ಕುಡಿ- ಕಾಲ್ತೊಳೆದು
ಮುದುರಿ ಮಲಗು
ಮತ್ತೆ ಹೊರಳಾಡಿ
ಗಂಟೆ ಎಂಟಾಯ್ತೆಂದು
ದಡಬಡಿಸಿ ಓಡು
ಛೇ ಮಳೆಗಾಲದ ರಾತ್ರಿಗೆ
ಏಕಿಂಥ ಮರುಳು?

ಮಳೆಯೊಂದಿನ ಹನಿಯಾಗಿ
ನದಿ, ಕೆರೆ, ಜಲಧಾರೆಯಾಗಿ
ನೆನಪುಗಳ ಹಂಗಿಲ್ಲದೆ
ಸಂಚರಿಸಬಾರದೆ ನಾನು
ಪುಟ್ಟ ಮಳೆಹನಿಯಾಗಿ
ಚಂದ್ರಬಿಂಬದ ತೊಟ್ಟಿಲಾಗಿ

********

ಎಸ್ ನಾಗಶ್ರೀ

One thought on “

  1. ಬಹಳ ಸೊಗಸಾದ ಕವಿತೆ. ಮಳೆಯೊಡನೆ ಬೋನಸ್ಸಾಗಿ ಬರುವ ಜಡ, ಅದೆಷ್ಟು ಹಿತವಾಗಿರುತ್ತದೆ.

Leave a Reply

Back To Top