ಎರಡು ಮಳೆ ಕವಿತೆಗಳು
ಮಳೆ
ಸುರಿದೇ ಇದೆ ಮಳೆ
ಬಾನ ಸಂಕಟವೆಲ್ಲ ಕರಗಿ
ಕಣ್ಣೀರಾಗಿ ಇಳಿದಿದೆಯೇ ಹೊಳೆ
ಇಳೆಯ ಅಳಲಿಗೆ ಎದೆ ಕರಗಿ
ಸುರಿಸಿದೆಯೇ ನಭ ತನ್ನೊಲವ
ಬಾನು ಬುವಿ ಒಂದಾಗಿಸಿ
ದೂರಗಳ ಇಲ್ಲವಾಗಿಸಿ
ಕಳೆಕೊಳೆ ಗುಡಿಸಿ ತೊಳೆ
ತೊಳೆದು ತೊರೆ ಹರಿಸಿ
ಸುರಿದಿದೆ ಮಳೆ
ಬಿಸಿಲಬೇಗೆಗೆ ಬತ್ತಿ ಆಳ
ಆಳ ನೆಲದಲ್ಲಿ ನೀರ ಪಸೆಗೆ
ಚಾಚಿ ಚಾಚಿ ತುಟಿ ಬಸವಳಿದ
ಬೇರಿಗೆ ಈಗ ಜೀವನ ಸೆಲೆ
ಬಾನ ಕರುಣೆಗೆ ತಲೆಯೊಲೆದು
ತುಟಿಯೊಡ್ಡಿ ಹಿಗ್ಗುವ ಎಲೆ-ಎಲೆ !
ಮೊಗ್ಗು ಹೂವು ಕೊಂಬೆಯ ಹಕ್ಕಿ
ಮಣ್ಣಹುಳು ಎಲ್ಲಕ್ಕೂ ಈಗ
ಜೀವ ಚೈತನ್ಯದ ಆವಾಹನೆ- ಅಲೆ
ಉಳುವ ಊಡುವ ಮೂಡುವ
ಚಿಗಿತು ಹೊಡೆ ತುಂಬಿ
ಫಲಿಸುವ ಸಂಭ್ರಮವ ನೆಲದ
ಕಣಕಣಕೂ ತುಂಬಿ
ತುಂ ತುಂಬಿ ಹರಿಸಿ ಹರಸಿ
ಉಸಿರಿನ ಮಂತ್ರ ಕಿವಿಯಲೂಡಿ
‘ಧೋ ‘ ಶ್ರುತಿಯಲ್ಲಿ
ಉಧೋ ಗತಿಯಲ್ಲಿ
ನಾದವಾಗಿ ಮೋದವಾಗಿ
ಸುರಿದು ಸುರಿಯುತ್ತಿದೆ
ಇದೋ-
ಮಳೆ !
ಸಂಜೆಮಳೆ
ಪಾತ್ರವೇ ತಾನಾದ ನಟ
ಮೊದಮೊದಲು ಗುಡುಗಿ
ಸಿಡಿಲಾಡಿ
ರೋಷಾವೇಶ ಕಳೆದು
ಕರುಣರಸವೇ ಮೈತಳೆದು
ಕಣ್ಣಕೊನೆಯಲ್ಲಿ ಹಣಕಿದ
ಕಂಬನಿ ಹನಿಹನಿ ಹನಿದು
ಇದೀಗ ಧಾರಾಕಾರ
ಮುಖದ ಬಣ್ಣ ಕರಕರಗಿ
ಕೊನೆಗೆ ಕಲಸಿದ
ಬೂದು ಚಿತ್ರಗಳಾಗಿ
ಇಳಿದಂತೆ ಮುಖದಿಂದ
ಎದೆಗೆ, ನೆಲಕ್ಕೆ.
ಸುರಿದಿದೆ ಸಂಜೆಮಳೆ-
ಅಮೂರ್ತ ಚಿತ್ರಗಳ
ಬಿಡಿಸುತ್ತ
ಅಳಿಸುತ್ತ
ಬರೆಯುತ್ತ…
**********
ಡಾ. ಗೋವಿಂದ ಹೆಗಡೆ
ಮಳೆ ಮತ್ತು ಸಂಜೆ ಮಳೆಗಳ ಎರಡೂ ಪಂದ್ಯಗಳು ನೈಜತೆಯಿಂದ ತುಂಬಿವೆ .ನಾದವಾಗಿ ಮೋದವಾಗಿ ಸುರಿವ ಮಳೆ ಎರಡನೇ ಪದ್ಯಕ್ಕೆ ಬರುವಾಗ ಗಂಭಿರವಾಗುತ್ತ ಸಾಗುವ ,ಅಮೂರ್ತ ಚಿತ್ರಗಳ ಬಿಡಿಸುವ
ರೀತಿ ಹಿಡಿದಿಡುತ್ತದೆ.