ಬದುಕೆಂಬ ವಂಚಕ!
ಸೌಜನ್ಯ ದತ್ತರಾಜ
ಪರಿಚಿತರಾಗುತ್ತಾ ಆಗುತ್ತಾ
ಪರಕೀಯತೆಯ ಭಾವವೇ
ಹೆಚ್ಚಾಗಿ ಆಗೀಗ ಪೆಚ್ಚಾಗಿ ಕಾಡುತಿದೆ
ಹತ್ತಿರವಾದಷ್ಟೂ ಒಬ್ಬರನೊಬ್ಬರು
ದೂರುತ್ತಲೇ ದೂರವಾಗುತ್ತಿರುವ
ವಿಪರ್ಯಾಸ ವಿಚಲಿತರನ್ನಾಗಿಸುತಿದೆ
ಏಕೆ…. ಏನಾಯ್ತು……ಹೇಗಾಯ್ತು
ಪ್ರಶ್ನಿಸಿಕೊಳ್ಳಲೇ ಭಯವಾಗುತ್ತಿದೆ
ಅನುಮಾನದ ಹೆಡೆಯೊಂದು
ಸದ್ದಿಲ್ಲದೆ ಆಗಾಗ ತಲೆಯೆತ್ತುತಿದೆ
ಆಡಬಾರದ ಹೇಳಬಾರದ
ಮಾತುಗಳನೆಲ್ಲಾ ಆಡುವ ಬಾಯಿ
ಇತ್ತೀಚೆಗೆ ಇಬ್ಬದಿಯಲೂ ಬಿಗಿಯುವ
ಇಕ್ಕಳದಂತಾಗಿದೆ ಇರಿಯುತ್ತಲಿದೆ
ಮನದಲೊಂದು ಮುಗಿಯದ ಭಾವ
ಹೊಂದಾಣಿಕೆ ಆಗದ ಸ್ವಭಾವ
ಒಗ್ಗಿಕೊಳ್ಳಲಾರದೆ ಒದ್ದಾಡುತಿರುವ ಜೀವ
ಪ್ರೀತಿ ಸ್ನೇಹಗಳ ಹೆಸರಲ್ಲಿ ಪ್ರತಿದಿನವೂ
ನಡೆಯುತಿವೆ ಹೊಸ ಹೊಸ ನಾಟಕ
ಗೆಲ್ಲುವುದು ಕಡೆಗೆ ಅದೇ………….ಬದುಕೆಂಬ ವಂಚಕ
ಚೆನ್ನಾಗಿದೆ..