ರಂಗ ಸಂಗಾತಿ
“ಒಂದು ಸುಡುಗಾಡು ಕಥೆ.
ರಂಗ ರೂಪಾಂತರ
ಮೂಲ ಕಥೆ:
ಮಧು ನಾಯ್ಕ ಲಂಬಾಣಿ,
ರಂಗ ರೂಪಾಂತರ:
ಗೊರೂರು ಅನಂತರಾಜು,
ದೃಶ್ಯ-೧
( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಅಧಿಕಾರಿ: ಎಲ್ಲರೂ ಸುತ್ತಲೂ ಕುಂತಕೋ ಬೇಕು. ಗಲಾಟೆ ಮಾಡ್ಬಾರ‍್ದು. ಸಾಹೇಬ್ರು ಏನ್ ಹೇಳ್ತಾರ ಕೇಳ್ಕೋಬೇಕು. ಅವರು ಯಾರಿಗೆ ಪ್ರಶ್ನೆ ಕೇಳ್ತಾರ ಅವರು ಉತ್ತರ ಕೊಡ್ಬೇಕು ತಿಳಿತಾ.? ಊರ ಯಜಮಾನ್ರು ಅಂದ್ರ ನೀವಾ ಏನ್ರೀ.
(ಸೇರಿದ್ದ ನಾಲ್ಕು ಮಂದಿ ಹೌದು ಎನ್ನುವಂತೆ ಗೋಣು ಅಲುಗಾಡಿಸುವುದರ ಜೊತೆಗೆ ಶಬ್ಧನೂ ಮಾಡಿದ್ರು)
ಅಧಿಕಾರಿ: ಎಲ್ಲರೂ ಶಾಂತವಾಗ್ರಿ. ನಿಮ್ಮ ನಿಮ್ಮಲ್ಲಿ ಮಾತಾಡ್ಬೇಡ್ರಿ. ಸಾಹೇಬ್ರ ಮಾತನ್ನ ಕೇಳ್ರಿ. ಅವ್ರು ಹೇಳಿದ ಮೇಲೆ ನಿಮ್ಮ ಮಾತು ಶುರು ಮಾಡ್ರಿ.
ತಹಸೀಲ್ದಾರ್: ಎಲ್ಲರಿಗೂ ನನ್ನ ನಮಸ್ಕಾರಗಳು. ನಾನು ನಿಮ್ಮ ಈ ತಾಲ್ಲೂಕಿನ ತಹಸೀಲ್ದಾರ್. ನಿಮ್ಮೂರಾಗ ಶ್ಮಶಾನ ಇಲ್ಲ. ಹೆಣ ಹೂಳಕು ಜಾಗ ಇಲ್ಲ. ಹೆಣ ಸುಡಾಕು ಜಾಗ ಇಲ್ಲ ಅಂತ ಸುದ್ಧಿ ತಿಳೀತು. ಅದಕ್ಕೆ ಬಂದೆ. ಈಗ ಇದಕ್ಕ ಪರಿಹಾರನ ನೀವಾ ಹೇಳ್ರಿ. ಒಬ್ಬೊಬ್ರೆ ಮಾತಾಡ್ರಿ. ಹಂಗಾದ್ರೆ ನನಗೆ ಅರ್ಥ ಆಗ್ತೈತಿ.
ಮಂದಿ-೧ (ಎದ್ದು ನಿಂತು)
ಮುಂದಿರೋ ಮಲ್ಡಿ ಎಡಕ್ಕ ಒಂದಿಷ್ಟು ಜಾಗ ಇತ್ತು ಸಾಹೇಬ್ರ. ಊರ ಜನ ಎಲ್ಲಾ ಅಲ್ಲೇ ಸುಡೋದು, ಹೂಳೋದು. ಆದ್ರೆ.. ಆದ್ರೆ.. ಈ ಊರ ಗೌಡ್ರು ಹೆಣನ ನಮ್ಹೊಲ ದಾಟ್ಸಬಾರ‍್ದು ಅಂತ ಬೈದು ಗಲಾಟೆ ಮಾಡಿ ಬಿಡ್ಸಿಬಿಟ್ರು. ಅವತ್ತಿನಿಂದ ಇವತ್ತಿನವರೆಗೂ ನಾಲ್ಕು ವರ್ಷ ಆತು. ಹೆಣ ಸುಡಾಕು ಜಾಗ ಇಲ್ಲ. ಹೂಳಾಕು ಜಾಗ ಇಲ್ಲ.
ತಹಸೀಲ್ದಾರ್: ಗೌಡ್ರು ಅಂದ್ರ..ಯಾರಪ್ಪ ಇಲ್ಲಿ..?
ಊರಗೌಡ: ನಾನರೀ..
ತಹಸೀಲ್ದಾರ್: ಯಾಕ್ರಿ ಗೌಡ್ರ. ಒಡ್ಡಿನ ಮ್ಯಾಲಸಿ ಅಂದ್ರೆ ಬದುವಿನ ಮ್ಯಾಲಾಸಿ ಹೆಣ ಹೊತ್ಕೊಂಡು ಹೋಗಾಕ ದಾರಿ ಕೊಡಬಹುದಲ್ವಾ..?
ಊರಗೌಡ: ಹಂಗ ಆಗಾಂಗಿಲ್ರಿ ಸಾಹೇಬ್ರ. ಮನುಷ್ಯ, ದನಕರು, ಕುರಿ ಎತ್ತು ಬಂಡಿ ಬೇಕಾದ್ರ ಹೊಲ್ದಾಗಾಸಿ ಹೋಗ್ಲಿ ನಾ ಬ್ಯಾಡ ಅನ್ನಲ್ಲ. ಆದ್ರ ಹೆಣ ಮಾತ್ರ ಅಲ್ಯಾಸಿ ಒಯ್ಯಂಗಿಲ್ಲ.
ತಹಸೀಲ್ದಾರ್: ಯಾಕ್ರೀ..?
ಊರಗೌಡ: ಹೆಣ ನಮ್ಮ ಹೊಲ್ದಗಾಸಿ ಹೋಗೋದು ನಮಗಿಷ್ಟ ಇಲ್ಲ. ಬೇರೆ ಯಾರ‍್ದಾನ ಹೊಲ್ದಾಗಾಸಿ ಹೋಗಾಕ ಒಪ್ಗಿ ಕೊಟ್ರೆ ಬೇಕಾದ್ರ ಹೋಗ್ಲಿ ನಾ ಬ್ಯಾಡ ಅನ್ನಲ್ಲ.
ತಹಸೀಲ್ದಾರ್: ನೀವಾ ಬ್ಯಾಡ ಅಂದ್ರ ಬೇರೆ ಯಾರು ಒಪ್ಕೋತಾರ ಹೇಳ್ರಿ..
ಊರಗೌಡ: ನಾ ಏನ್ ಮಾಡ್ಲಿ ಸಾಹೇಬ್ರ. ನನಗಿಷ್ಟ ಇಲ್ರಿ. ಅದು ಅಲ್ದೆ ಅದಿಷ್ಟು ಜಾಗ ಇಡೀ ಊರ ಹೆಣನ ಹೂಳಾಕಾಗುವುದಿಲ್ಲ. ಅಲ್ಲಿ ಹೋದ್ರ ಹೆಣ ಸುಡೋರಿಗೆ ನಿಂದ್ರಾಕ ಜಾಗ ಇಲ್ಲ. ಅಷ್ಟರಾಗ ಏನು ಮಾಡಾಕ್ ಆಗೋದಿಲ್ಲ. ಅದಕ್ಕ ಬಿಡ್ಸಿ ಬಿಟ್ಟಿವ್ರಿ.
ತಹಸೀಲ್ದಾರ್: ಸರಿ ಈಗ ಮುಂದ್ಹೆಂಗ ಮಾಡೋದು ನೀವಾ ಹೇಳ್ರಿ..
ಯಜಮಾನ: ಏನ್ ಮಾಡ್ಬೇಕು ಅನ್ನೊದ್ನ ನೀವಾ ಹೇಳ್ರಿ ಸಾಹೇಬ್ರ..
ತಹಸೀಲ್ದಾರ್: ಶ್ಮಶಾನಕ್ಕಾಗಿ ಎರಡೆಕರೆ ಜಮೀನು ಯಾರಾದ್ರು ಕೊಡೋರಿದ್ರೆ ನೋಡ್ರಿ. ಸರಕಾರದಿಂದ ಅದನ್ನು ಖರೀದಿ ಮಾಡ್ತೀವಿ. ಅದಕ್ಕ ತಕ್ಕ ಬೆಲೆ ಕಟ್ಟಿ ದುಡ್ಡು ಕೊಡ್ತೀವಿ.
ಮಂದಿ-೨: ಹಿರಿಯರು ಮಾಡಿದ ಆಸ್ತಿನ ಯಾರೂ ಮಾರಂಗಿಲ್ಲ ಬಿಡ್ರಿ. ಈಗಿರೋ ಜಮೀನನ್ನು ಕೊಟ್ಟವ್ರು ಸುಡುಗಾಡಿಗೆ ಹೋಗ್ಬೇಕಾದೀತು..
ತಹಸೀಲ್ದಾರ್: ಜಮೀನು ಕೊಟ್ಟವ್ರು ಅಲ್ಲಿಗೆ ಹೋಗಬೇಕು. ಕೊಡದವನು ಅಲ್ಲಿಗೆ ಹೋಗ್ಬೇಕು ತಿಳಿತಾ..
ಮಂದಿ-೩: ಸಾಹೇಬ್ರ, ಆಸ್ತಿ ಮಾರಿ ದುಡ್ಡು ತಗೊಂಡು ಏನು ಮಾಡ್ಬೇಕು ಹೇಳ್ರಿ.
ತಹಸೀಲ್ದಾರ್: ಬೇರೆ ಕಡೆ ಜಮೀನು ತಗೋಬೇಕು
ಮಂದಿ-೧: ಅದು ಆಗಾಂಗಿಲ್ಲ ಬಿಡ್ರಿ (ಎಲ್ಲರೂ ಧ್ವನಿಗೂಡಿಸಿದರು)
ತಹಸೀಲ್ದಾರ್: ಗೌಡ್ರೆ, ಮುಂದಿನ ವ್ಯವಸ್ಥೆ ಆಗುವವರೆಗೂ ನೀವು ನಿಮ್ಮ ಹೊಲ್ದಾಗಾಸಿ ದಾರಿ ಕೊಡ್ಬೇಕು. ಇಲ್ಲಾಂದ್ರೆ ನಿಮ್ಮ ಊರ ಸುಡುಗಾಡು ಆಗತೈತಿ. ಕಾಡೇ ನಿಮಗೆಲ್ರಿಗೂ ಊರಾಗತೈತಿ. ನೋಡ್ರಿ ನಾನೇನ್ ಹಚ್ಗೆ ಹೇಳಾಂಗಿಲ್ಲ.
ಊರಗೌಡ: ಸಾಹೇಬ್ರ ಜೀವ ಹೋದ್ರು ಚಿಂತಿಲ್ಲ. ನಾ ಮಾತ್ರ ದಾರಿ ಕೊಡಂಗಿಲ್ರಿ. ನಮ್ಮವರು ಯಾರಾನ ಸತ್ರ ಯಾವ ನನ್ನ ಮಕ್ಳಿಗೂ ದಾರಿ ಕೊಡ್ರಿ ಅಂತ ಕೇಳಂಗಿಲ್ಲ. ನಮ್ಮೊಲದಾಗ ಸುಡತೀವಿ ಅಲ್ಲೆ ಹೂಳತೀವಿ.
ತಹಸೀಲ್ದಾರ್: ಕಾನೂನಿನ ಪ್ರಕಾರ ನೀವು ದಾರಿ ಕೊಡ್ಲೇಬೇಕು. ಇಲ್ಲಾಂದ್ರೆ ನಿಮ್ಮ ಮೇಲೆ ಕೇಸು ಹಾಕ್ತೀವಿ ಅಷ್ಟೆ..
ಊರಗೌಡ: ಕೇಸಾಗ್ಲಿ ಯಾರ ಹೆಣ ಅಲ್ಯಾಸಿ ಬರತೈತಿ ನಾನು ನೋಡೇ ಬಿಡ್ತೀನಿ.
ತಹಸೀಲ್ದಾರ್: ನಾನು ಇದು ಮೊದ್ಲನೆ ಸಾರಿ ನಿಮಗ ಹೇಳಿ ತಿಳಿಸಿಹೋಗೋಣಾಂತ ಬಂದಿದ್ದೀನಿ. ನಿಮ್ಮಷ್ಟಕ್ಕ ನೀವಾ ತಿಳ್ಕೊಂಡು ಅನುಕೂಲ ಮಾಡಿ ಕೊಟ್ರ ಸರಿ, ಇದ ತೊಂದ್ರಿ ಮುಂದುವರದ್ರ ಖಂಡಿತ ನಿಮ್ಮ ಮ್ಯಾಲೆ ಕೇಸು ಹಾಕಿ ಜೈಲಿಗೆ ಕಳಿಸ್ತೀನಿ ತಿಳ್ಕೊಳ್ರಿ.
ಊರಗೌಡ: ಖಂಡಿತ ನಾ ಬಿಡಂಗಿಲ್ರಿ (ಎದ್ದು ನಿಂತು) ಕೇಸರ ಆಗ್ಲಿ. ಜೈಲಿಗಾದ್ರು ಹೋಗ್ಲಿ ಮಾತ್ರ ದಾರಿ ಕೊಡಂಗಿಲ್ಲ.
ತಹಸೀಲ್ದಾರ್: ಊರ ಯಜಮಾನ್ರಾಗಿ ಊರ ಜನರಿಗೆ ಸಹಾಯ ಮಾಡೋದು ಬಿಟ್ಟು ನೀವಾ ಹಿಂಗ ತೊಂದ್ರಿ ಕೊಟ್ರ ಈ ಊರ ಗತಿ ಏನು? ‘ಊರಿಗೆ ಉಪಕಾರ ಹೆಣಕ್ಕೆ ಸಿಂಗಾರ ನನಗೂ ತಿಳಿತೈತಿ. ಅದೆಲ್ಲ ನಮಗ ಗೊತ್ತಿಲ್ಲ. ನಿಮ್ಮ ಹೊಲ ದಾಟಿ ಸುಡುಗಾಡು ಐತಿ. ಅಲ್ಲಿಗೆ ಹೋಗಾಕ ನೀವು ದಾರಿ ಕೊಡಬೇಕು. ಇಲ್ಲಾಂದ್ರೆ ಮುಂದೆ ನೀವೇ ನೋವು ಅನುಭವಿಸ್ತೀರಿ ತಿಳ್ಕೊಳ್ರಿ (ನಿರ್ಗಮನ)
ಊರಗೌಡ: (ಸ್ವಗತ) ಸಾಹೇಬ್ರಂತ…ಸಾಹೇಬ್ರು. ನನ್ನ ಜೈಲಿಗೆ ಹಾಕ್ತಾರಂತ. ಹೆದರ‍್ಸಾಕ ಬಂದಾರ. ಇಡೀ ಊರಿಗೆ ದಾರಿ ಕೊಡಬೇಕಂತ ದಾರಿ ಕೊಟ್ಟು ನಾನು ಬೇಕಾದ್ರ ಕೆಟ್ಟು ಹಾಳಾಗಬಹುದಂತ. ಊರ ಜನ ಮಾತ್ರ ಸುಖವಾಗಿ ನೆಮ್ಮದಿಯಿಂದ ಇರಬೇಕಂತ. ಹೆಂಗೈತಿ ನೋಡಿ ಸಾಹೇಬ್ರ ಮಾತು. ಹಾಕ್ಲಿ ಕೇಸು. ಕಳಿಸ್ಲಿ ಜೈಲಿಗೆ ನೋಡೇ ಬಿಡ್ತೀನಿ ಒಂದು ಕೈ. ಈಗ ನೋಡ್ಲಿದ್ರ ಇನ್ನು ಯಾವಾಗ? ಊರಾಗಿರೋ ಸಣ್ಣ ಸೂಳೇ ಮಕ್ಳು ನಮ್ಮ ಮ್ಯಾಲೆ ಚ್ಯಾಡ ಹೇಳ್ತಾರ. ಚಾಡ ಹೇಳಿ ನಂಗೇನು ಮಾಡ್ಕೊಂಡ್ರು. ಅವ್ರಿಗೂ ಒಂದು ಗತಿ ಕಾಣಸ್ತಿನಿ. (ಕತ್ತಲು)
ಕತೆಗಾರ: ಈ ಊರಿಗೆ ಸುಡುಗಾಡು ಇಲ್ಲದ್ಕ ಊರ ಸುಡುಗಾಡು ಆಗೈತಿ. ಒಂದು ಪಕ್ಷ ಸುಡುಗಾಡು ಇದ್ದಿದ್ರೆ ಈ ಊರು ವೈಶಮ್ಯದ ತಾಣ ಆಗ್ತಿರಲಿಲ್ಲ ಅಂತ ನನ್ನ ಭಾವನೆ. ಗೌಡ್ರೆ ಹೆಣಕ್ಕೆ ದಾರಿ ಕೊಡಲ್ಲ ಅಂತ ಹಟ ಹಿಡದಾವ್ರೆ ಅಂದ್ರೆ ಉಳಿದವರೆಲ್ಲರೂ ಕೂಡ ಅವರ ಹೊಲಕ್ಕ ಹೋಗೋ ದಾರ‍್ಯಾಗ್ಯಾಸಿ ಹೆಣ ಒಯ್ಯಾಕ ಬಿಡಲ್ಲ. ಹೆಣ ಸುಡಕ್ಕಾಗ್ಲಿ ಹೂಳಕ್ಕಾಗ್ಲಿ ಹೋಗೋಕೆ ದಾರಿ ಕೊಡಲ್ಲ ಅಂತ ಗಟ್ಟಿ ನಿರ್ಧಾರ ಮಾಡಿಕೊಂಡಿದ್ದರು ಈ ಊರ ಜನ. ತಹಸೀಲ್ದಾರರು ಎಚ್ಚರಿಕೆ ಕೊಟ್ರು ಕೂಡ ಗೌಡ್ರು ಮಣಿಯಲಿಲ್ಲ. ಊರ ಹೆಣ ಸುಡೋಕೆ ಸಹಾಯ ಮಾಡ್ಬೇಕು ಅಂಥ ಅನ್ನಿಸಲಿಲ್ಲದ ಗೌಡನೂ ನಾಳೆ ಸಾಯುವವನು ತಾನೆ..ನಾಳೆಯದನ್ನು ಯೋಚಿಸದ ಊರ ಗೌಡನಿಗೆ ಎಡುರಾಗದ ಜನ. ಈ ಊರಿನಲ್ಲಿದುದರಿಂದ ಈ ಊರಿನ ಹೆಣಗಳು ಅನಾಥವಾಗುತ್ತಿವೆ.
ದೃಶ್ಯ-೨ (ಬಸವನ ಮನೆ)
ಬಸವ: ಲೇ ಕರಿಯ, ನೀ ಏನಾರ ನಮ್ಮ ಹೊಲ್ದಾಗಾಸಿ ನಿಮ್ಮಪ್ಪನ ಹೆಣ ಓಯ್ದಿಯಂದ್ರ ನಿನ್ನ ಹೆಣಾನು ಅಲ್ಲೇ ಬೀಳತೈತಿ ಮಗನಾ. ಹಗಲಿ ಹನ್ನೆಲ್ಡು ತಾಸು ನಮ್ಮ ಮನಿಮಂದಿಯೆಲ್ಲಾ ಹೊಲ್ದಾಗ ಇರ‍್ತಾರ. ನಿನ್ನ ಹೊಲಕ್ಕ ಒಯ್ಯಿ. ನಾ ಬ್ಯಾಡಾ ಅನ್ನಂಗಿಲ್ಲ. ಎಲ್ಯಾಸ್ಯಾರ ಒಯ್ಯಿ. ಆದ್ರ ನನ್ನ ಹೊಲ್ದಾಗಾಸಿ ಒಯ್ಯಂಗಿಲ್ಲ ತಿಳಿತಾ.?
ಕರಿಯ: ಬಸವ ಆಕಿ ನನಗಷ್ಟ ತಾಯಿಯಲ್ಲೊ ನಿನಗೂ ತಾಯಿ ಅಲ್ಲೇನೋ. ನಾನು ನೀನು ಆಟ ಆಡುವಾಗ ಇಬ್ರಗೂ ಕರದು ಉಣಸಿದ್ದು ಮರ‍್ತ ಬಿಟ್ಟಿ ಏನು? ನಾವಿಬ್ರು ಒಮ್ಮಿ ಜಗಳಾಡಿದ್ವಿ. ನೀನಾ ನನಗ ಹೊಡದಿದ್ದಿ. ಆದ್ರ ನಮ್ಮಪ್ಪ ಮತ್ತ ನನಗ ಹೊಡದು ನಿನಗ ರಮಿಸಿದ್ದು ಮರ‍್ತಿ ಏನು? ಆಕಿ ಅಡ್ಯಾಡಿದ ಜಾಗದಾಗ ಆಕೆ ಹೆಣ ಒಯ್ಯಬಾರದಂದ್ರ ಹೆಂಗೋ? ನಿನಗ ಕೈ ಮುಗಿತೀನಿ ಯಾರು ದಾರಿ ಬಿಡಂಗಿಲ್ಲ. ನೀನು ದೊಡ್ಡ ಮನಸ್ಸು ಮಾಡಿ ನನ್ನ ಹೊಲಕ್ಕ ನಮ್ಮಪ್ಪನ ಹೆಣ ಒಯ್ಯಾಕ ದಾರಿ ಕೊಡು. ಇವು ನಿನ್ನ ಕೈ ಅಲ್ಲ ಕಾಲು ಅಂತ ತಿಳ್ಕೊ. ನಿನ್ನ ಕಾಲಿಗೆ ಬಿದ್ದು ಬೇಡ್ತಿನಿ ಬ್ಯಾಡ ಅನ್ನಬೇಡೋ ಬಸವ ನನ್ನ ಹಡದಾಕಿ ಆತ್ಮಕ್ಕ ಶಾಂತಿ ಸಿಗಬೇಕಾದ್ರ ನೀನು ಕರುಣೆ ತೋರ‍್ಸು.
ಬಸವ: ಕರಿಯಾ, ಗೆಳೆತನ ಅಷ್ಟಕ್ಕ ರ‍್ಲಿ. ಆಕೇನೋ ಸತ್ಲು. ಈಗ ಇರೋರಾದ್ರು ಸುಖವಾಗಿರ‍್ಲಿ. ಆಕಿ ಸತ್ಲಂತ ನಾವೂ ಇದ್ದು ಸಾಯಿಬಾರ‍್ದು. ಸತ್ತರ‍್ಹಿಂದ ಯಾರೂ ಸಾಯಂಗಿಲ್ಲ ಹೋಗಿ ಅಡಿವ್ಯಾಗ ಸುಟ್ಟು ಬಾ ಏನೂ ಆಗಂಗಿಲ್ಲ.
ಕರಿಯ: ಬಸವ, ನೋಡು ಅಕ್ಕ ತಂಗ್ಯಾರು ಸತ್ತ ತಾಯಿನ್ನ ನೋಡಾಕ ಬಂದಾರ. ಅಕ್ಕ ತಂಗಿ ಅಂತ ಕರಿತಿದ್ವಿ. ಈಗ ನಮ್ಮವ್ವ ಸತ್ಲಂತ ಅನ್ನು ಮರ‍್ತಿ ಏನು? ಕಣ್ಮುಚ್ಚಿ ಕಣ್ಣು ತೆಗಿಯೋದ್ರಾಗ ನಮ್ಮವ್ವನ ಹೆಣ ದಾಟಿಸಿ ಬಿಡ್ತೀನಿ ಒಪ್ಪಿಕೊಳ್ಳೊ.
ಬಸವನ ಹೆಂಡತಿ: ಕರಿಯಣ್ಣ, ನಮ್ಮೆಜಮಾನ್ರು ಇಷ್ಟ ಹೇಳಿದ್ರು ನೀವು ಹಟ ಮಾಡ್ತ ಇದ್ದೀರಲ್ಲ. ಆಗಲ್ಲಂದ್ರ ಆಗಲ್ಲ.
ಕರಿಯ: (ದು:ಖಿಸುತ್ತಾ) ತಂಗಿ, ನೀನೂ ಹಂಗ ಮಾತಾಡ್ತಿ ಏನವಾ ? ನಮ್ಮವ್ವನ ಅತ್ತಿ..ಅತ್ತಿ ಅಂತ ಕರಿತಿದ್ದಿ. ಈಗ ಅದನ್ನು ಮರ‍್ತಿ ಏನು? ಒಂದೇ ಮನಿಯವ್ರು ಇದ್ದಾಂಗ ಇದ್ವಿ. ಕಡಿಗೆ ಆಕಿ ಮಾರಿ ನೋಡಾಕು ನೀವು ಬರಲಿಲ್ಲ (ನಿರ್ಗಮನ)
ಕತೆಗಾರ: ವಯಸ್ಸಾದ ತಾಯಿ ತೀರಿಕೊಂಡಿದ್ಲು. ಆಕಿನ್ನ ಎಲ್ಲಿ ಸುಡಬೇಕು ಅನ್ನೊ ಚಿಂತಿ ಕರಿಯನದು. ತಾಯಿ ಸತ್ದದ್ಕ ಅವನಿಗೆ ನೋವಾಗಿರಲಿಲ್ಲ. ಈ ಊರಾಗ ಹೆಣ ಸುಡಾಕ ಜಾಗ ಇಲ್ಲ. ತಮ್ಮ ಹೊಲಕ್ಕೆ ಹೆಣ ಒಯ್ಯಾಕ ಯಾರೂ ದಾರಿ ಕೊಡಂಗಿಲ್ಲ. ಕರಿಯ ಸತ್ತಿರುವ ತನ್ನ ತಾಯಿಯ ಅಂತ್ಯ ಸಂಸ್ಕಾರ ಮಾಡುವ ಪರಿಯನ್ನು ಅರಿಯದೇ ಕಂಗಲಾಗಿಹೋಗಿದ್ದ. ಮನೆ ತುಂಬಾ ಬೀಗರು ಬಿಜ್ರು ಬಂದು ಸೇರಿದ್ದಾರೆ. ಹೆಣ ಸಿಂಗಾರ ಮಾಡೋದಕ್ಕೂ ಆಗದೆ ಕರಿಯನ ಮನಸ್ಸು ಅತಂತ್ರವಾಗಿತ್ತು. ಎಷ್ಟೇ ಬೇಡಿಕೊಂಡರೂ ಬಸವ ತನ್ನ ಹೊಲ ದಾಟಲು ಅವಕಾಶ ಕೊಡಲು ಒಪ್ಪಲಿಲ್ಲ. ಅಲ್ಲದೇ ಅಕ್ಕ ಪಕ್ಕದ ಹೊಲದವರೂ ಕೂಡ ಒಪ್ಪದೇ ಕರಿಯನ ತಾಯಿಯ ಹೆಣ ಬರುವ ದಾರಿಯಲ್ಲಿ ಅಡ್ಡಗಟ್ಟಿ ಕಾದು ಕುಳಿತಿದ್ದರು. ಸತ್ತ ಮೇಲೆ ತನ್ನ ತಾಯಿಗೆ ಬಂದೊಗಿದ ಈ ಪರಿಸ್ಥಿತಿಯಿಂದ ಕರಿಯನ ಮನೆ ಮಂದಿಯೆಲ್ಲಾ ದು:ಖತಪ್ತರಾಗಿದ್ದರು.
ದೃಶ್ಯ-೩
(ಬಿಳಿ ಬಟ್ಟೆ ಹೊದಿಸಿದ ಹೆಣದ ದೃಶ್ಯ. ಸುತ್ತಾ ಎರಡು ಮೂರು ಮಂದಿ ಕುಳಿತಿರುವರು)
ಕರಿಯ: ಯಾರೂ ಕೂಡ ಹೆಣ ಸುಡಾಕ ಬರಬ್ಯಾಡ್ರಿ. ನಾನೊಬ್ನೆ ಹೋಗ್ತಿನಿ. ಊರು ದಾಟಿ ಹತ್ತು ಕಿಲೋಮೀಟರ್ ದೂರದ ಅಡವಿಗೆ ಹೋಗ್ಬೇಕು. ಅದು ಅಲ್ಲದೆ ಹಳ್ಳದ ಗುಂಟ ಹೋಗಾಕೆ ನಿಮಗ್ಯಾರಿಗೂ ಸರಿಹೋಗಲ್ಲ. ಅದಕ್ಕ ಬಂಡಿ ಕಟ್ರಿ ಅದರಾಗ ಅವ್ವನ ಸುಡಾಕ ಕಟಿಗಿ ಹಾಕಿ ಅದರ ಮ್ಯಾಲೆ ಆಕಿನ ಮಲಗಿಸಿಬಿಡ್ರಿ.
ಕತೆಗಾರ: ಕರಿಯ ಹೇಳಿದಂಗ ಬಂಡಿ ತಯಾರಾಯಿತು. ಮಕ್ಕಳು, ಮೊಮ್ಮಕ್ಕಳು ಸಂಬಂಧಿಕರು ಅತ್ತು ಎಲ್ಲಾ ತಯಾರಾಗಿ ಬಂಡಿ ಹೊರಡುವ ವೇಳೆಗಾಗ್ಲೆ ಮದ್ಯಾಹ್ನ ಆಗಿತ್ತು. ಉರಿ ಉರಿ ಬಿಸಿಲು. ಹಳ್ಳದ ದಾರಿ ಬಿಟ್ರೆ ಬೇರೆ ದಾರಿನೇ ಇಲ್ಲ. ದಾರಿ ತುಂಬಾ ಮರಳು. ಮುಳ್ಳಿನ ಪೊದೆ. ಮಳೆಗಾಲದಲ್ಲಿ ಹರಿದು ಬಂದ ಕಲ್ಲು, ಮಣ್ಣಿನಿಂದಾಗಿ ಬಂಡಿ ಸಾಗುವುದು ಸುಲಭವಾಗಿರಲಿಲ್ಲ. ತಗ್ಗು ದಿನ್ನೆಯಲ್ಲಿ ಹೆಣ ಹೊತ್ತ ಬಂಡಿ ಸಾಗಿತ್ತು. ಊರು ದಾಟುವ ಹೊತ್ತಿಗಾಗಲೇ ಎತ್ತುಗಳು ದಣಿದುಬಿಟ್ಟವು. ಅಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ ಎತ್ತು ಬಿಚ್ಚಿ ನೆರಳಿಗೆ ಕಟ್ಟಿದ. ತಾನು ನೆರಳಲ್ಲಿ ಕುಳಿತುಕೊಂಡು ಬಂಡಿಯಲ್ಲಿದ್ದ ತಾಯಿಯ ಹೆಣವನ್ನೇ ನೋಡುತ್ತಾ ಕುಳಿತುಕೊಂಡ. ಅವನ ಮನಸ್ಸು ಮಿಡಿಯುತ್ತಿತ್ತು. ಆ ಮನಸ್ಸಿನ ಮಿಡಿತಕ್ಕೆ ಬಾಯಿ ಅದರುತ್ತಿತ್ತು. ಕೈಕಾಲುಗಳು ನಡುಗುತ್ತಿದ್ದವು. ಆ ಮೂಲಕ ಕಣ್ಣುಗಳು ನೀರನ್ನು ಸುರಿಸುತ್ತಿದ್ದವು. ಹಳೆಯ ನೆನಪುಗಳು ಕಾಡಿದವು.
ಕರಿಯ: (ಸ್ವಗತ) ಬೇರೆ ಯಾರಿಗಾದ್ರು ನಾ ಬೈಯ್ದರೆ ಯಾರೂ ಕೂಡ ಸುಮ್ನಿರಲ್ಲ. ನನ್ನ ಕಾಟವನ್ನು ಯಾರು ತಡ್ಕೊಳಲ್ಲ. ನಾ ಆಡಿದ್ದೆ ಆಟ. ನಾ ಮಾಡಿದ್ದೆ ಹಟ. ಆಕಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮುಗಿಸಿ ನಿಶ್ಚಿಂತೆಯಾಗಿ ಹೊಂಟುಹೋದ್ಲು. ಮಗನಾಗಿ ನಾನು ನನ್ನ ಕರ್ತವ್ಯವನ್ನು ಮಾಡಲು ಆಗುತ್ತಿಲ್ಲ. ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ನಮಗಾಗಿ ಇಡೀ ಬದುಕನ್ನೇ ಸವೆಸಿದ ಆ ಜೀವ ಇವತ್ತು ಅನಾಥವಾಗಿ ಮಲಗಿಬಿಡ್ತು. ತಾನು ಉಪವಾಸವಿದ್ದು ನಮಗಾಗಿ ಕಾದು ಕುಳಿತವಳು. ಕಾಣದ ಲೋಕಕ್ಕೆ ಹೊರಟುಹೋದಳು. ಏನೇ ಮಾಡಿದರು ಮರಳಿ ಬರುವುದಿಲ್ಲ. ಏನೇ ಕೊಟ್ಟರೂ ತಾಯಿ ಮತ್ತೆ ಸಿಗುವುದಿಲ್ಲ. ಊರಿಗೊಂದು ಸುಡುಗಾಡು ಇದ್ದಿದ್ರೆ ಮಗನಾಗಿ ನಾನು ನನ್ನ ಪಾಲಿನ ಕರ್ತವ್ಯವನ್ನು ಸಮಾಧಾನದಿಂದ, ಎಲ್ಲರೊಂದಿಗೆ ಮಾಡಿ ಮುಗಿಸಿಬಿಡುತ್ತಿದ್ದೆ. ಆ ನನ್ನ ತಾಯಿ ಮಾಡಿದ ಕರ್ಮವೋ ಅಥವಾ ನನ್ನ ಕರ್ಮವೋ ಒಂದೂ ತಿಳಿಯುತ್ತಿಲ್ಲ. ಈ ಊರ ಗೌಡ ತನ್ನ ಹೊಲ್ದಾಗಾಸಿ ಹೆಣ ಒಯ್ಯಾಕ ದಾರಿ ಕೊಟ್ಟಿದ್ರೆ ಇದೆಲ್ಲ ಸಮಸ್ಯೆ ಆಗುತ್ತಿರಲಿಲ್ಲ. ಅಲ್ಲಾ ಆ ಬಸವ ಎಂಥವನಿರಬೇಕ..ನಮ್ಮವ್ವ ಸಾಯೋದಕ್ಕೂ ನಾಕೈದು ದಿನ ಮುಂಚೆ ಆಕಿ ಉಣ್ಣಾಕ ನೀಡಿದ್ಲು. ನಾವಿಬ್ರು ಉಂಡೀವಿ. ಅದನ್ನು ಮರ‍್ತಾನೇನು.?
ಕತ್ತಲು (ದೃಶ್ಯ-೪)
ಬಸವ: ನಮ್ಮವ್ವ ಇದ್ದಿದ್ರೆ ನನ್ನ ಇಷ್ಟು ಚೆನ್ನಾಗಿ ನೋಡ್ಕೋತ್ತಿದ್ಲೋ ಇಲ್ವೋ. ಆದ್ರ ನೀನು ಮಾತ್ರ ನನ್ನನ್ನ ಹಡದಾಕಿಗಿಂತ ಚೆನ್ನಾಗಿ ಮಾತಾಡಸ್ತಿ. ನನ್ನ ನೋಡ್ಕೊಂತಿ. ನನ್ನ ತಾಯಿ ನನಗ ನೆನಪಗಾಂಗಿಲ್ಲ.
ಕರಿಯನ ಅವ್ವ: ಮಗಾ ನನಗ ನೀನು ಬೇರೆ ಅಲ್ಲ ನನ್ನ ಮಗ ಕರಿಯಾ ಬೇರೆ ಅಲ್ಲ. ಇಬ್ರೂ ಒಂದೇ. ನೀವೀಬ್ರೂ ನನಗೆ ಮಕ್ಳೇ. ನೀವು ಅಣ್ಣ ತಮ್ಮ ಇದ್ದಾಂಗ ಇರಬೇಕು. ಯಾಕಂದ್ರ ಹೊಲ, ಮನಿ ಜೋಡಿಲೇ ಅದಾವು. ಹಿಂದ ನಿಮ್ಮಪ್ಪ ಇವರಪ್ಪ ಜತೀಲೇ ಇರ‍್ತಿದ್ರು. ಹೊಲಕ್ಕ ಹೋಗೋದು ಕೆಲ್ಸ ಮಾಡೋದು. ಬಿತ್ತೋದು, ಒಕ್ಲಿ ಮಾಡೋದು, ಇಬ್ರು ಕೂಡಿ ಮಾರಾಟಕ್ಕೆ ಹೋಗೋದು, ಹಬ್ಬ ಹುಣ್ಣಿಮೀಗೆ ಏನು ಬೇಕು ಅದನ್ನ ಇಬ್ರು ಕೂಡೇ ತರತಿದ್ರು. ನಿಮ್ಮನಿಯವ್ರು ನಮ್ಮನಿಗೆ, ನಮ್ಮನಿಯವ್ರು ನಿಮ್ಮನಿಗೆ ಹೋಗ್ತಿದ್ರು. ಹೀಗಾಗಿ ನೀವೂ ಮುಂದ ಹಂಗ ಇರ‍್ಬೇಕು.
ಬಸವ: ಹಿರಿಯರು ಹೇಂಗಿದ್ರು ಹಂಗ ನಾವೂ ಇರ‍್ತೀವಿ. ಜೀವಕ್ಕ ಜೀವ ಕೊಟ್ಟು ಬದಕ್ತೀವಿ. ಕರಿಯಾಗ ಏನಾರ ತೊಂದ್ರಿಯಾದ್ರ ನಾನು ಸಹಾಯ ಮಾಡ್ತೀನಿ. ನನಗೇನಾರಾದ್ರ ಅವ ಇರ‍್ತಾನ. ನೀ ಹೇಳಿದ್ಹಾಂಗ ಚೆಂದಾಗಿ ಬದಕ್ತೀವಿ. ನೀ ಏನು ಚಿಂತಿ ಮಾಡ್ಬೇಡ.
(ಕತ್ತಲು)
ಕತೆಗಾರ: (ಪ್ರವೇಶಿಸಿ) ಅಂತ ಹೇಳಿದ್ದ ಬಸವ ಇವತ್ತು ಹೆಣ ಸುಡಾಕ ದಾರಿ ಕೊಡೋದು ಹೋಗ್ಲಿ ಆತನ ಹೊಲ್ದಾಗಾಸಿ ಹೆಣ ಒಯ್ಯಾಕ ದಾರಿ ಕೊಡೋದು ಬ್ಯಾಡ. ಪಕ್ಕದ್ಮನಿಯಾಗಿದ್ದವ್ನು ಸತ್ತಾಕಿ ಮಾರಿ ನೋಡಾಕ್ ಬರ‍್ಲಿಲ್ಲ. ಎಂಥಾ ಕಟುಕ ಇರಬಹುದು. ಎಂಥಾ ಮೋಸಗಾರ.. ಎಂದೆಲ್ಲಾ ಕರಿಯ ಬಸವನ ಬದಲಾದ ವರ್ತನೆಗೆ ಹಲ್ಲು ಕಡಿದ. ಆದರೆ ಅವನ ಸ್ಥಿತಿ ಹಲ್ಲು ಕಿತ್ತ ಹಾವಿನಂತಾಗಿತ್ತು. ಸುಡುವ ಬಿಸಲಲ್ಲಿ ತನ್ನ ತಾಯಿಯ ಹೆಣ ಇರುವುದನ್ನು ಕಂಡು ಓಡಿ ಬಂದು ಮುಖ ನೋಡಿ ಮತ್ತೆ ಅಳುತ್ತಿದ್ದ. ಹೊತ್ತಾಗಲೇ ಬಹಳ ಸಾಗಿತ್ತು. ಲಗುಬಗೆಯಿಂದ ಬಂಡಿ ಕಟ್ಟಿದ. ಹೆಣ ಹೊತ್ತ ಬಂಡಿ ಸಾಗಿತ್ತು. ಇನ್ನೂ ಅರ್ಧ ದಾರಿ ಉಳಿದಿತ್ತು. ದೊಡ್ಡ ದೊಡ್ಡ ತಗ್ಗುಗಳಿದ್ದವು. ಬಂಡೆಗಳಿದ್ದವು.
ಅವುಗಳನ್ನೆಲ್ಲಾ ದಾಟಿ ಕಾಡು ಸೇರುವ ಹೊತ್ತಿಗೆ ಕತ್ತಲಾಗುತ್ತಾ ಬಂದಿತ್ತು. ಅದು ದೊಡ್ಡ ಕಾಡು. ಹಿಂದೆ ಇಲ್ಲಿ ಹುಲಿ ಕಂಡಿದ್ದು, ಅದು ಊರಿನ ಒಂದೆರಡು ದನಗಳನ್ನು ತಿಂದಿದ್ದು ದನಕಾಯೋ ಹುಡುಗನ್ನ ಎಳೆದುಕೊಂಡು ಹೋಗಿದ್ದೆಲ್ಲ ನೆನೆದು ಕರಿಯ ಬೆವರತೊಡಗಿದ. ಕಾಡಿನ ಅಂಚಿನಲ್ಲಿ ಒಂದು ಸಮನಾದ ಜಾಗದಲ್ಲಿ ಬಂಡಿ ನಿಲ್ಲಿಸಿ ಹಾಗೂ ಹೀಗೂ ಪೇಚಾಡಿ ಹೆಣವನ್ನು ಕೆಳಗಿಳಿಸಿದ. ಕಟ್ಟಿಗೆಯ ದೊಡ್ಡ ದೊಡ್ಡ ಬಡ್ಡೆಗಳನ್ನು ಕೂಡ ತೆಗೆದು ಸಮತಟ್ಟಾಗಿ ಇಡುತ್ತಾ ಬಂದ. ಆತನ ಕೈಗೆ ಕಾಲಿಗೆ ಅಲ್ಲಲ್ಲಿ ಗಾಯಗಳಾದವು. ಅದ್ಯಾವುದು ಗಮನಿಸುತ್ತಿಲ್ಲ. ಕಟ್ಟಿಗೆಯ ರಾಶಿಯ ಮೇಲೆ ತನ್ನ ತಾಯಿಯ ಹೆಣವನ್ನು ಇಟ್ಟು ಸೀಮೆಎಣ್ಣೆಯನ್ನು ಕೆಳಗಿನ ಕಟ್ಟಿಗೆಗೆ ಸುರುವಿದ. ಇನ್ನೇನು ತನ್ನ ತಾಯಿಯನ್ನು ಸುಡುತ್ತಿದ್ದೇನೆ ಎನ್ನುವುದನ್ನೇ ಮರೆತುಹೋದ ಕರಿಯ. ಯಾಕೆಂದರೆ ಹುಲಿ ನನ್ನ ಮೇಲೆ ಬಂದೆರಗಿದರೆ ಎಂಬ ಭಯ ಆವರಿಸಿಬಿಟ್ಟಿತು. ಕೈಕಾಲು ನಡುಗತೊಡಗಿದವು. ಎತ್ತುಗಳು ಹೋಗ್ಲಿ. ನನ್ನ ತಾಯಿ ಹೋಗ್ಲಿ. ನಾನು ಬಚಾವಾಗಬೇಕಲ್ಲ. ಒಂದು ವೇಳೆ ಹುಲಿ ನನ್ನ ಮೇಲೆ ಹಿಂದಿನಿಂದ ಹಾರಿ ಬಂದುಬಿಟ್ಟರೇ, ದನ ಕಾಯುವ ಹುಡುಗನ್ನ ಎಳೆದುಕೊಂಡು ಹೋದಂತೆ ನನ್ನನ್ನು ಎಳೆದುಕೊಂಡು ಹೋಗಿಬಿಟ್ಟರೆ ಏನೆಲ್ಲಾ ಯೋಚನೆಯ ಮಧ್ಯೆ ಬೆಂಕಿ ಹಚ್ಚಲು ಲಗುಬಗೆಯಿಂದ ಬೆಂಕಿಪಟ್ಟಣಕ್ಕಾಗಿ ತನ್ನ ಜೇಬಿನಲ್ಲಿ ಕೈ ಹಾಕುತ್ತಾನೆ. ಇಲ್ಲ. ನಾಕೈದು ಬಾರಿ ನೋಡ್ತಾನೆ ಸಿಗಲಿಲ್ಲ. ಕರಿಯನ ಜಂಘಾಬಲವೇ ಅಡಗಿಹೋಯಿತು. ಕತ್ತಲಾಗುತ್ತಿದೆ. ಏನೂ ಕಾಣಿಸುತ್ತಿಲ್ಲ. ಅನಿವಾರ್ಯವಾಗಿ ಸದ್ದು ಮಾಡದೆ ಎತ್ತು ಬಂಡಿ ಕಟ್ಟಿಕೊಂಡು ಬಂದ ದಾರಿಯಗುಂಟ ಮನೆಗೆ ಬರತೊಡಗಿದ. ತನ್ನ ತಾಯಿಯ ಸಾವಿನಿಂದ ನೊಂದವನಿಗೆ ತನ್ನ ಸಾವಿನ ಬಗ್ಗೆ ಭಯ ಹುಟ್ಟಿತು. ಅವಸರವಸರವಾಗಿ ಮನೆ ಕಡೆಗೆ ಬರುತ್ತಾನೆ. ಊರು ಹತ್ತಿರವಾಗುತ್ತಿದ್ದಂತೆ ಮತೆ ತಾಯಿ ನೆನಪಾಗುತ್ತಾಳೆ.
(ಕತ್ತಲು)
ಕರಿಯ: (ಪ್ರವೇಶಿಸಿ) ಆಯ್ಯೋ ಹಾಳಾದ್ದು ಮರೆವು ನಾನು ಬೆಂಕಿಪಟ್ನ ನೆನಪುಮಾಡಿ ತೆಗೆದು ಕೊಂಡು ಹೋಗಿದ್ರೆ ಎಲ್ಲಾ ಮುಗಿದೇ ಹೋಗುತ್ತಿತ್ತು. ಎಂಥಾ ತಪ್ಪು ಮಾಡಿದೆ. ಏನು ಮಾಡುವುದು. ಮತ್ತೆ ಮರಳಿ ಹೋಗಲೇ. ಮನೆಯವರಿಗೆ ಏನಂತ ಹೇಳಲಿ. ನನ್ನ ದಡ್ಡತನಕ್ಕೆ ಅವರೆಲ್ಲಾ ಬೈಯುತ್ತಾರಲ್ಲ. ಏನು ಮಾಡಲಿ.? ಎಲ್ಲಾ ಸರಿಯಾಗಿ ಮುಗಿದುಹೋತು ಅಂದುಬಿಟ್ರೆ.? ಅನ್ನಲೇ ಬೇಕು. ಅನ್ನದಿದ್ರೆ ನನ್ನ ಮೂರ್ಖತನಕ್ಕೆ ಶಾಪಹಾಕುತ್ತಾ ದು:ಖ ಇಮ್ಮಡಿಯಾಗುತ್ತದೆ. ಇವರೆಲ್ಲರೂ ಸಮಾಧಾನವಾಗಿರಬೇಕಾದರೆ ಖಂಡಿತವಾಗಿ ನಾನು ಸುಳ್ಳು ಹೇಳಲೇಬೇಕು. ಆದ್ರೆ ಹುಲಿ, ಚಿರತೆ ತಾಯಿಯ ಹೆಣವನ್ನು ತಿಂದು, ಕಟ್ಟಿಗೆಯ ರಾಶಿ ಹಾಗೆ ಉಳಿದರೆ.? ಈ ವಿಷಯ ನಮ್ಮವರಿಗೆ ಯಾರಿಗಾದರೂ ಗೊತ್ತಾದ್ರೆ.? ಏನು ಮಾಡುವುದು, ಏನೂ ಮಾಡುವುದು, ಒಂದೂ ಗೊತ್ತಾಗವಲ್ದು, ಸತ್ಯ ಹೇಳಿಬಿಡಲೇ..? ಬೇಡ..ಸುಳ್ಳು ಹೇಳಬೇಕು..
(ನಿರ್ಗಮನ)
ಕತೆಗಾರ: ಮನೆಗೆ ಬಂದ ಕರಿಯ ಎತ್ತುಗಳನ್ನು ಬಿಚ್ಚಿದ. ತಾನು ಕೈಕಾಲು ಮುಖ ತೊಳೆದುಕೊಂಡು ಹೊರಗಿನ ಕಟ್ಟೆಯ ಮೇಲೆ ಕುಳಿತ. ಆತ ಬಂದುದನ್ನು ನೋಡಿ ಎಲ್ಲರೂ ಪುನ: ಅಳತೊಡಗಿದರು. ಕರಿಯ ಕಟ್ಟೆಯ ಮೇಲೆ ಮಲಗಿಬಿಟ್ಟ. ಯಾರೂ ಎಬ್ಬಿಸಿದರೂ ಏನೂ ತಿನ್ನದೇ ಹಾಗೆ ನಿದ್ರೆ ಹೋದ. ಮುಂಜಾನೆ ಬೇಗ ಎದ್ದವನು ಅವಸರದ ಜೊತೆಗೆ ಭಯ. ಭಯದ ಜೊತೆಗೆ ಅಳುಕು. ಅಳುಕಿನ ಜೊತೆಗೆ ತಾಯಿ ಪ್ರೀತಿ ಹೊತ್ತ ಕರಿಯ ಹೇಗೋ ಧೈರ್ಯಮಾಡಿ ಕಾಡಿಗೆ ಬಂದು ನೋಡ್ತಾನೆ ಹೆಣ ಕಾಣೆಯಾಗಿತ್ತು. ಹುಡುಕಲು ಭಯವಾಗಿ ಕಡ್ಡಿಗೀರಿ ಕೂಡಿಟ್ಟಿದ್ದ ಕಟ್ಟಿಗೆಯ ರಾಸಿಗೆ ಬೆಂಕಿ ಹಚ್ಚಿ ಅಲ್ಲಿಂದ ಹಿಂದೋಡಿದ. ಮನೆಯಲ್ಲಿದ್ದವರೆಲ್ಲರಿಗೂ ಗಾಬರಿಯಾಗಿತ್ತು. ಎದ್ದವನೇ ಎಲ್ಲಿಗ್ಹೋದ ಎಂದು ಹುಡುಕಾಡುತ್ತಿದ್ದರು. ಇಡೀ ಊರೆಲ್ಲಾ ಜಾಲಾಡಿದರು. ಆದರೂ ಸಿಗದೆ ಕಾಡಿನಿಂದ ಬಂದವನನ್ನು ಕಂಡು ಆಶ್ಚರ್ಯದಿಂದ ವಿಚಾರಿಸತೊಡಗಿದರು. ಏನೂ ಹೇಳಲಾಗದೆ ಕರಿಯ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸತೊಡಗಿದ. ತನ್ನ ಅಕ್ಕ ತಂಗಿಯರನ್ನು ತಬ್ಬಿ ಅಳುತ್ತಿದ್ದ.
—————————————————————