ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮ ಜನಪದೀಯ ಎಲ್ಲಾ ನಂಬಿಕೆಗಳು ಸುಳ್ಳಲ್ಲ..
ಜನಪದ’ ಎಂದರೆ ಬದುಕು. ಬದುಕಿನ ನೋವು ನಲಿವುಗಳನ್ನು ತಮ್ಮ ಹಾಡಿನ ಮೂಲಕ, ಆಚರಣೆಯ ಮೂಲಕ, ಹಾಸುಹೊಕ್ಕಾಗಿ ಬದುಕನ್ನೇ ಕಟ್ಟಿಕೊಡುತ್ತಾರೆ. ನಮ್ಮ ಜನರೆಂದರೆ ಅದು ಗ್ರಾಮೀಣ ಬದುಕಿನ ಜನರು, ಅವರು ಮುಂಜಾನೆಯಿಂದ ಸಂಜೆಯವರೆಗೂ ದುಡಿಯುತ್ತಾ, ದಣಿಯುತ್ತಾ, ಆಯಾಸಗೊಳ್ಳುವ ಸಮಯದಲ್ಲಿ ಮನೋರಂಜನೆಗಾಗಿ ತಮ್ಮ ಅನುಭವಗಳನ್ನೇ ಹಾಡಾಗಿ, ಕುಣಿತವಾಗಿ, ವಾದ್ಯ ಮೇಳದ ಹೆಜ್ಜೆಗಳನ್ನು ಮಾಡಿಕೊಂಡು ಬದುಕನ್ನು ಖುಷಿ ಮಾಡಿಕೊಂಡವರು.
ಅಂದು ಇಂದಿನಂತೆ, ಆಂಡ್ರಾಯ್ಡ್ ಮೊಬೈಲ್ ಗಳಾಗಲಿ, ರೇಡಿಯೋಗಳಾಗಲಿ, ಟಿವಿ ಗಳಾಗಲಿ, ಒಟ್ಟಾರೆ ಸಂಪರ್ಕ ಸಾಧನಗಳಿಲ್ಲದೆ ಕಾಲಘಟ್ಟವದು. ತಮ್ಮ ಸುಖ ದುಃಖಗಳನ್ನು, ಶೃಂಗಾರವನ್ನು ತಮ್ಮ ಬದುಕಿನಲ್ಲಿ ಸಹಜವಾಗಿ ಅನುಭವಿಸಿ ಬಾಳುತ್ತಿದ್ದರು. ತಾವು ಆಚರಿಸುವ ಒಂದೊಂದು ಆಚರಣೆಗಳು, ಸಂಪ್ರದಾಯಗಳು ಎಲ್ಲವೂ ಅರ್ಥಪೂರ್ಣವಾಗಿದ್ದವು. ಎಲ್ಲಾ ಸಂಪ್ರದಾಯಗಳು ಆಚರಣೆಗಳು ಕೆಟ್ಟವಲ್ಲ..! ಎಲ್ಲಾ ನಂಬಿಕೆಗಳು ಕೆಟ್ಟವು ಎನ್ನುವುದು ಅಕ್ಷರ ಸಹ ಸತ್ಯವಲ್ಲ..! ಕೆಲವು ಆಚರಣೆಗಳು ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ, ಅವು ಅರ್ಥಪೂರ್ಣವೂ ಆಗಿವೆ.
ಮಗು, ತಾಯಿಯ ಗರ್ಭದೊಳಗೆ ಮೂಡಿದ ಸಮಯದಿಂದ ಹಿಡಿದು ಬದುಕಿನ ವಿವಿಧ ಘಟ್ಟಗಳನ್ನು ಅನುಭವಿಸುತ್ತಾ, ಬದುಕಿನ ಅಂತ್ಯ ಸಂಸ್ಕಾರದಲ್ಲಿಯೂ ಕೂಡ ನಮ್ಮ ಜನಪದ ಆಚರಣೆಗಳು ವಿಶೇಷ ಅರ್ಥವನ್ನು ಒಳಗೊಂಡಿವೆ. ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅವುಗಳ ಆಚರಣೆಯ ಹಿಂದಿನ ವೈಜ್ಞಾನಿಕ ಮತ್ತು ವೈಚಾರಿಕ ಸತ್ಯ ನಮಗೆ ಗೋಚರವಾಗುತ್ತದೆ. ನಮ್ಮ ಜನಪದೀಯ ಆಚರಣೆಗಳು ಅಂದಿನ ಕಾಲಘಟ್ಟದ ವಾತಾವರಣ, ಸಂಪ್ರದಾಯ, ಉದ್ಯೋಗ, ಪ್ರಾದೇಶಿಕ ಭಿನ್ನತೆ, ಅಲ್ಲದೆ ದೊರಕುವ ಮೂಲಭೂತ ಸೌಕರ್ಯಗಳು, ನಂಬಿಕೆಗಳು, ಇವುಗಳ ಆಧಾರದ ಮೇಲೆ ನಿಂತಿವೆ ಎಂದರೆ ತಪ್ಪಲ್ಲ.
ಅಂದು ವೈಜ್ಞಾನಿಕ ಹಾಗೂ ವೈದ್ಯಕೀಯ ಸಂಶೋಧನೆಗಳು ಕಡಿಮೆ ಇರುವ ಕಾಲಘಟ್ಟದಲ್ಲಿ, ನಮ್ಮ ಧನ್ವಂತರಿ ಆಯುರ್ವೇದದ ಪರಂಪರೆಯು ಅತ್ಯಂತ ಉತ್ಕೃಷ್ಟವಾಗಿತ್ತು. ನಮ್ಮ ಸುತ್ತಮುತ್ತಲೂ ಸಿಗುವ ಅನೇಕ ಆಯುರ್ವೇದದ ಸಸ್ಯಗಳನ್ನು, ವಸ್ತುಗಳನ್ನು, ಪದಾರ್ಥಗಳನ್ನು, ಬಳಸಿಕೊಂಡು ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯರು ಉಪಚರಿಸುತ್ತಿದ್ದರು. ಅಂತಹ ಕೆಲವು ಆಚರಣೆಗಳೆಂದರೆ, ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಆದಾಗ ಕಾಲ್ದುಳಿ ತೆಗೆಯುವ, ಮದುವೆಯ ಸಂದರ್ಭದಲ್ಲಿ ವಧು ವರರಿಗೆ ಅರಿಶಿಣ ಹಚ್ಚುವ ಮತ್ತು ಅರಿಶಿಣ ನೀರು ಹಾಕುವ, ಚಿಕ್ಕ ಮಕ್ಕಳು ನಡೆದಾಡಲು ಪ್ರಾರಂಭವಾಗುವ ಸಮಯದಲ್ಲಿ ಕಾಲ್ಗುಡುಗ (ಹಾಲ್ಗಡಗ) ಹಾಕುವ, ಹಸುಗೂಸು ಅದರ ಚರ್ಮ ಮೃದುವಾಗಿರುವಾಗಲೇ ಮೂರುವು ಚುಚ್ಚುವ, “ಮದುವೆಯ ಸಂದರ್ಭದಲ್ಲಿ ಹಳ್ಳದಾಟಬಾರದು” ಎಂದು ವಧು ಮತ್ತು ವರನಿಗೆ ಕಟ್ಟಪ್ಪಣೆ ಮಾಡುವ, ಶವ ಸಂಸ್ಕಾರ ಸಂದರ್ಭದಲ್ಲಿ ಶವವನ್ನು ಶುಚಿತ್ವಗೊಳಿಸುವ ಮತ್ತು ಸ್ಮಶಾನಕ್ಕೆ ಹೋದ ಸಂದರ್ಭದಲ್ಲಿ ಅಂತಿಮ ಸಂಸ್ಕಾರದ ನಂತರ ಸಂಸ್ಕಾರ ಮಾಡಿದವರೆಲ್ಲರೂ ಸ್ನಾನ ಮಾಡುವ…. ಇವೆಲ್ಲವೂ ಆರೋಗ್ಯ ದೃಷ್ಟಿಯಿಂದಲೇ ಎನ್ನುವುದು ವಾಸ್ತವಿಕ ಸತ್ಯ.
ಹಾಗಾದರೆ ಇಂತಹ ಆಚರಣೆಗಳು ಯಾಕೆ ಬಂದವು ಎನ್ನುವುದನ್ನು ನೋಡಿದಾಗ, ನಮ್ಮ ಜನಪದರು ಸೊಗಸಾಗಿ ಅದರ ಕುರಿತು ಜಾನಪದ ಹಾಡು ಕಟ್ಟಿದ್ದಾರೆ…
ಅರಿಷಣ ಮಾರುವ ಶೆಟ್ಟಿ
ಅರಿಷಣ ಮಾರುತ ಬಂದ/ವರುಷದ ಬಾಣಂತಿಯು ಹಸುಗೂಸು ಮೀವಾಗ
ಅರಿಷಣ ಬೇಕು ತಿಗುರಿಗೆ//
ಇಂತಹ ಜಾನಪದಗಳೇ ನಮ್ಮ ಆರ್ಯುವೇದದ ಸಸ್ಯಗಳ ಬಳಕೆಯ ಬಗ್ಗೆ ತಿಳಿಸುತ್ತವೆ. ಹೀಗಾಗಿ
ಸ್ಮಶಾನದಲ್ಲಿರುವ ಕ್ರಿಮಿ ಕೀಟಗಳು ನಮಗೆ ತಾಗಬಾರದು ಎನ್ನುವ ನೈಜ ಕಾಳಜಿಯಿದೆ. ಅದರಂತೆ ಮದುವೆಯ ಸಂದರ್ಭದಲ್ಲಿ ವಧು-ವರರು ಬೇರೆ ಬೇರೆ ವಾತಾವರಣಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಬಾರದು ಮತ್ತು ಬಿಸಿಲು ಮಳೆಗೆ ಮೈಯೊಡ್ಡಬಾರದು ಎನ್ನುವ ಕಾಳಜಿ ಕೂಡ ಅದರಲ್ಲಿ ನಾವು ಕಾಣಬಹುದು. ಇನ್ನೂ ಮಗು ಚಿಕ್ಕದಿರುವಾಗ ಅದರ ಚರ್ಮ ಮೃದುವಾಗಿರುತ್ತದೆ, ಆ ಸಂದರ್ಭದಲ್ಲಿ ಮುರುವು ಚುಚ್ಚದೆ ಹೋದರೆ ಮುಂದೆ ಮಗುವಿನ ಚರ್ಮ ಒರಟಾದ ನಂತರ ನೋವು ಹೆಚ್ಚು ಎನ್ನುವ ಕಳಜಿಯೂ ಇರುತ್ತದೆ. ಮಗು ಅದೇ ತಾನೆ ತಪ್ಪು ತಪ್ಪು ಹೆಜ್ಜೆಗಳನ್ನು ಹಾಕುತ್ತಾ, ಮನೆಯ ಹೊಸ್ತಿಲು ದಾಟುವಾಗ ನಡೆಯುವುದನ್ನು ಕಲಿಯುವ ಸಂದರ್ಭದಲ್ಲಿ ಸಾಮಾನ್ಯವಾಗಿ ಹಾಲ್ಗಡ್ಗ ಮತ್ತು ಕಾಲಚೈನಾ ಹಾಕ್ಕುತ್ತಾರೆ, ಏಕೆಂದರೆ ಮಗು ಎಲ್ಲಿ ಹೋಗುತ್ತದೆ.. ಎನ್ನುವುದನ್ನು ಗುರುತಿಸಲು ಮತ್ತು ಬೀಳದಂತೆ ನೋಡಿಕೊಳ್ಳಲು, ತಪ್ಪು ಹೆಜ್ಜೆ ಹಾಕಿದರೆ ಅದರ ಸಪ್ಪಳದಿಂದ ಮಗುವನ್ನು ಗುರುತಿಸಲು ಅನುಕೂಲವಾಗುತ್ತದೆ ಎನ್ನುವ ಮುಂದಾಲೋಚನೆ ನಮ್ಮ ಹಿರಿಯರಲ್ಲಿತ್ತು ಎನ್ನಬಹುದು. ಅದೇ ರೀತಿ ಮದುವೆ ಮಾಡಿಕೊಳ್ಳುವ ವಧು ವರರಿಗೆ ಅರಿಶಿನ ಹಚ್ಚುವ ಮತ್ತು ಅರಿಶಿಣ ಮಿಶ್ರಿತ ನೀರು ಹಾಕುವ ಸಂಪ್ರದಾಯ ಮೊದಲಿಂದಲೂ ಬಂದಿದೆ. ಕಾರಣವಿಷ್ಟೇ, ಅರಿಶಿಣ ಒಂದು ಆಯುರ್ವೇದದ ದಿವ್ಯ ಔಷಧ. ಅದಕ್ಕೆ ಅನೇಕ ಗಾಯಗಳನ್ನು ವಾಸಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಅದು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಮದುವೆಯಾಗುವ ವಧುವರರಿಗೆ ಅರಿಶಿನ ಹಚ್ಚುವುದರಿಂದ ಅವರಲ್ಲಿ ಕಾಂತಿ ಹೆಚ್ಚಾಗುತ್ತದೆ. ಸಣ್ಣಪುಟ್ಟ ಗಾಯಗಳು ವಾಸಿಯಾಗುತ್ತವೆ. ಇದು ನಮ್ಮ ಹಿರಿಯರು ಮೊದಲಿಂದಲೂ ನಡೆಸಿಕೊಂಡು ಬಂದಿರುವ ಅತ್ಯಂತ ಅರ್ಥಪೂರ್ಣ ಆಚರಣೆ ಎಂದರೆ ತಪ್ಪಲ್ಲ. ಅಲ್ಲದೆ ಮದುವೆಯ ಸಂದರ್ಭದಲ್ಲಿ ಹಾಲಿನಲ್ಲಿ ಮುತ್ತು ಹುಡುಕುವ ಆಚರಣೆಯು ವಧುವರರಲಿ ಆಪ್ತತೆ ಬೆಳೆಯಲಿ ಎನ್ನುವ ಕಾಳಜಿ ಅವರಲ್ಲಿತ್ತು. ಹೀಗೆ ನಮ್ಮ ಬದುಕಿನೂದ್ದಕ್ಕೂ ಅನೇಕ ಆಚರಣೆಗಳು ಅವು ಅರ್ಥಪೂರ್ಣವಾಗಿಯೂ ಮತ್ತು ಸತ್ಯದಿಂದಲೂ ಕೂಡಿವೆ. ಅವುಗಳ ನೋಡುವ ದೃಷ್ಟಿಕೋನ ಮಾತ್ರ ನಮ್ಮದು ಸ್ಪಷ್ಟವಾಗಿರಬೇಕು. ಎಲ್ಲಾ ಸಂಪ್ರದಾಯಗಳು ಆಚರಣೆಗಳು ಮೂಢನಂಬಿಕೆಗಳಿಂದ ಕೂಡಿವೆ ಎನ್ನುವ ಅರ್ಥಹೀನ ಅಭಿಪ್ರಾಯಗಳು ಒಳಿತಲ್ಲ.
ನಮ್ಮ ಜನಪದದ ಹಬ್ಬ ಹರಿದಿನಗಳ ಆಚರಣೆಗಳು, ಜಾತ್ರೆ, ಉತ್ಸವಗಳು ಅನೇಕ ವಿಶೇಷತೆಯಿಂದ ಕೂಡಿದ್ದು ಅವು ನಮ್ಮ ನೆಲಮೂಲದ ಸಂಸ್ಕೃತಿಯನ್ನು ಹೊಂದಿವೆ.
ನಮ್ಮ ದೇಶ ಕೃಷಿ ಪ್ರಧಾನವಾಗಿರುವುದರಿಂದ ಹಬ್ಬ ಆಚರಣೆಗಳು ಜಾತ್ರೆಗಳು ಈ ಹಿಂದೆ ಅತಿ ಹೆಚ್ಚು ಆಚರಿಸುತ್ತಿದ್ದರು. ಈಗಲೂ ಕೂಡ ಅಂತಹ ಜಾತ್ರೆಗಳನ್ನು ನೋಡುತ್ತೇವೆ. ಅಂದು ಎಲ್ಲರೂ ಸೇರಿ ಸಿಹಿ ಊಟ ಮಾಡುವುದರಿಂದ ರೈತನಿಗೆ, ವಿಭಿನ್ನ ಊಟದ ರುಚಿ ಮತ್ತು ಪೌಷ್ಟಿಕತೆ ಸಿಗುತ್ತದೆ ಎನ್ನುವ ದೂರ ದೃಷ್ಟಿ ನಮ್ಮ ಹಿರಿಯರಲ್ಲಿತ್ತು. ಅಲ್ಲದೆ ಹಬ್ಬ ಹರಿದಿನಗಳಲ್ಲಿ ಮನೆ ಮಂದಿಯ ಬಟ್ಟೆಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗುತ್ತಿದ್ದರು. ಇಲ್ಲವಾದರೆ ರೈತರು ಮುಂಜಾನೆಯಿಂದ ಸಂಜೆವರೆಗೆ ದುಡಿಯುತ್ತಲೇ ದುಡಿಯುತ್ತಲೇ ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆ ಮತ್ತು ಮನೆಯ ಸ್ವಚ್ಛತೆಯ ಬಗ್ಗೆ ಅವರಿಗೆ ಕಾಳಜಿಯಿರುತ್ತಿರಲಿಲ್ಲ ಹಾಗಾಗಿ ಹಬ್ಬಗಳ ಆಚರಣೆಗಳು ಕೂಡ ಯಾವುದೋ ಒಂದು ದೂರ ದೃಷ್ಟಿಯ ಪ್ರತಿಫಲ ಎನ್ನಬಹುದು. ಇವೆಲ್ಲವೂ ಅಂದಿನ ಪ್ರದೇಶ ಮತ್ತು ಜನಜೀವನದ ನಂಬಿಕೆಗಳ ಪ್ರಕಾರ ಬಂದಿವೆ.
ಸ್ನೇಹಿತರೇ, ನಮ್ಮ ಜಾನಪದ ಪರಂಪರೆಯು ಬಹು ವಿಶೇಷವಾದುದು. ಅದು ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಆದರೆ ಇಂದಿನ ಕಾರ್ಪೋರೆಟ್ ಸಂಸ್ಕೃತಿಗಳ ಹೊಡೆತಕ್ಕೆ ಸಿಕ್ಕು ಅದು ನಲುಗುತಿದೆ. ಪರಿಸರ ಮಾಲಿನ್ಯ, ಪರಿಸರದ ಮೇಲೆ ಆದ ಕೈಗಾರಿಕಾ ಕ್ರಾಂತಿಯ ದುಷ್ಪರಿಣಾಮಗಳಿಂದಾಗಿ ಮೊದಲಿನಂತೆ ನಮ್ಮ ನದಿ, ಮರ, ಜಲಪಾತ, ತೊರೆಗಳು, ಬೀಸುವ ಗಾಳಿ, ಹಾರುವ ಹಕ್ಕಿಗಳು, ಕಾಡುಮೇಡುಗಳು, ಖಗಮೃಗಗಳು ತೊಂದರೆಯಲ್ಲಿರುವುದನ್ನು ನೋಡುತ್ತಿದ್ದೇವೆ. ನಮ್ಮ ಜಾನಪದೀಯ ಆಚರಣೆಗಳ ಬದುಕು ಸಮೃದ್ಧವಾಗಬೇಕಾದರೆ ನಾವು ನಮ್ಮ ಬದುಕನ್ನು ಪ್ರಕೃತಿಯೊಡನೆ ತೆರೆದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಾವೇಲ್ಲರೂ ಪ್ರಯತ್ನಿಸೋಣ. ನಮ್ಮವರ ಧನಾತ್ಮಕ ಆಚರಣೆಗಳನ್ನು ಪಾಲಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ