ಪುಸ್ತಕ ಸಂಗಾತಿ
ರೇಣುಕಾ ಕೋಡಗುಂಟಿ
ಕಥಾ ಸಂಕಲನ
“ಚಿಗುರೊಡೆದ ಬೇರು”
ಒಂದು ಅವಲೋಕನ
ವರದೇಂದ್ರ ಕೆ ಮಸ್ಕಿ
“ಚಿಗುರೊಡೆದ ಬೇರು”
(ಕಥಾ ಸಂಕಲನ)
ಕೃತಿಕಾರರು : ರೇಣುಕಾ ಕೋಡಗುಂಟಿ
ಪ್ರಕಾಶಕರು : ಪರಶುರಾಮ ಕೋಡಗುಂಟಿ
ಬಂಡಾರ ಪ್ರಕಾಶನ, ಮಸ್ಕಿ
ಬೆಲೆ : 120/-
“ಚಿಗುರೊಡೆದ ಬೇರು”
(ಕಥಾ ಸಂಕಲನ)
ಕೃತಿಕಾರರು : ರೇಣುಕಾ ಕೋಡಗುಂಟಿ
ಪ್ರಕಾಶಕರು : ಪರಶುರಾಮ ಕೋಡಗುಂಟಿ
ಬಂಡಾರ ಪ್ರಕಾಶನ, ಮಸ್ಕಿ
ಬೆಲೆ : 120/-
“ಹೃದಯದಾಳಕ್ಕೆ ಇಳಿಯುವ ಚಿಗುರೊಡೆದ ಬೇರು”
ಕೋಡಗುಂಟಿ ಕುಟುಂಬ ಎಂದರೆ ಅದು ಕನ್ನಡ ಸಾಹಿತ್ಯ ಸೇವೆಗೆ ಮುಡಿಪಾದ ಕುಟುಂಬ. ಅವರಿವರೆನ್ನದೆ ವಂಶವೃಕ್ಷದ ಸರ್ವಸದಸ್ಯರೂ ಕನ್ನಡಮ್ಮನ ಸೇವೆಗೆ ತಮ್ಮ ಇಡೀ ಬದುಕನ್ನು ಅರ್ಪಿಸಿಕೊಂಡಿದ್ದಾರೆ. ಭಂಡಾರ ಪ್ರಕಾಶನದ ಮೂಲಕ ರಾಜ್ಯದ ಮನೆಮಾತಾದ ಈ ಕುಟುಂಬದವರಲ್ಲಿ ಒಬ್ಬರಾದ ಸಹೋದರಿ ಶ್ರೀಮತಿ ರೇಣುಕಾ ಕೋಡಗುಂಟಿ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಲೇಖಕಿ.
ಇವರ ಕವನ ಸಂಕಲನ “ಕಂದೀಲಿನ ಕುಡಿ”, ಚೊಚ್ಚಲ ಕಥಾ ಸಂಕಲನ “ನಿಲುಗನ್ನಡಿ” ಓದಿದ ನನಗೆ ಇವರ ಕಾವ್ಯ ಕಟ್ಟುವ, ಕಥೆ ಹೆಣೆಯುವ ಶೈಲಿ, ಆಯ್ಕೆ ಮಾಡಿಕೊಳ್ಳುವ ವಸ್ತು ವಿಷಯ, ವಸ್ತು ನಿಷ್ಠವಾಗಿ ಹೇಳುವ ಶೈಲಿ, ಬಳಸಿದ ಪದ ಪ್ರಯೋಗ, ಓದುಗನ ಊಹೆಗೆ ನಿಲುಕದ ತಿರುವುಗಳು ಬಹಳ ಮನಕ್ಕೆ ಮುಟ್ಟಿದ್ದವು. ಅದರ ಮುಂದುವರೆದ ಭಾಗವಾಗಿ ವಿಶೇಷ ರೀತಿಯಲ್ಲಿ ಸಹೋದರಿಯವರು ಮತ್ತೊಂದು ಕಥಾ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
* ಹತ್ತು ದಿನ ಬೆಂಗಳೂರಂತಹ ನಗರದಲ್ಲಿ ಇದ್ದು ಬಂದವರೇ ತಮ್ಮ ಮಾತಿನ ಲಯ ಬದಲಾಸಿಕೊಳ್ಳುವ ಸಂದರ್ಭದಲ್ಲಿ ದಶಕಗಳ ಕಾಲ ಬೆಂಗಳೂರಲ್ಲಿದ್ದೂ ಕೂಡ ಅಪ್ಪಟ ಹಳ್ಳಿ ಸೊಗಡಿನ ಭಾಷೆಯಲ್ಲಿ ಕಥೆ ಹೆಣೆಯುವದೆಂದರೆ ನಿಜಕ್ಕೂ ಇದು ಸವಾಲಿನ ಕೆಲಸ. ಹೌದು, ಈ “ಚಿಗುರೊಡೆದ ಬೇರು” ಕಥಾ ಸಂಕಲನದ ಭಾಗ ಒಂದರ ಕಥೆಗಳು ಅಪ್ಪಟ ನಮ್ಮ ಮಸ್ಕಿಯ ಆಡು ಭಾಷೆಯಲ್ಲಿ ಚಿತ್ರಿತವಾಗಿವೆ. ಒಮ್ಮೆ ಈ ಆಡು ಭಾಷೆಯಿಂದ ದೂರ ಹೋದ ನಮಗೆ ಮತ್ತೆ ಅದೇ ಭಾಷೆಯಲ್ಲಿ ಮಾತನಾಡುವುದೇ ಕಷ್ಟ ಸಾಧ್ಯ. ಅಂತದ್ದರಲ್ಲಿ ಕಥೆ ಪೂರ್ತಿ ಆ ಗ್ರಾಮ್ಯ ಭಾಷೆಯಲ್ಲೇ ಬರೆಯುವುದೆಂದರೆ ಅದು ಧ್ಯಾನಸ್ಥ ಸ್ಥಿತಿ ಉಳ್ಳವರಿಗೆ ಮಾತ್ರ ಸಾಧ್ಯ. ಇಂತಹ ಉತ್ಕೃಷ್ಟ ಮೇರು ಸ್ಥಿತಿಯ ಸಹೋದರಿ ರೇಣುಕಾ ಕೋಡಗುಂಟಿಯವರು ಮೊದಲ ಭಾಗದಲ್ಲಿ ಗ್ರಾಮ್ಯ ಭಾಷೆಯನ್ನೂ ಎರಡನೇ ಭಾಗದಲ್ಲಿ ಗ್ರಾಂಥಿಕ ಭಾಷೆಯನ್ನೂ ಬಳಸಿ ಕಥೆಗಳನ್ನು ರಚಿಸಿದ್ದಾರೆ. ಇಂತಹ ವಿಶೇಷವಾದ ಕೃತಿಯನ್ನು ನಾನು ನನ್ನ ಮತಿಗೆ ತೋಚಿದಷ್ಟು ಪರಿಚಯಿಸಲು ಪ್ರಯತ್ನಿಸುತ್ತೇನೆ.
* ಈ “ಚಿಗುರೊಡೆದ ಬೇರು” ಒಟ್ಟು 9 ವಿಭಿನ್ನ ಕಥೆಗಳನ್ನೊಳಗೊಂಡಿದ್ದು. ಮೊದಲ ಐದು ಕಥೆಗಳು ಗ್ರಾಮ್ಯ ಭಾಷೆಯಲ್ಲಿ ನಂತರದ ಭಾಗದ ಕಥೆಗಳು ಗ್ರಾಂಥಿಕ ಭಾಷೆಯಲ್ಲಿ ಇವೆ.
ಮೂಲತಃ ಸಂಶೋಧಕ ಪ್ರವೃತ್ತಿಯ ಕೃತಿಕಾರರು, ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟುಂಬಿಕ ವಿಷಯದ ಕುರಿತಾಗಿ “ವಾರಸ್ದಾರ” ಎಂಬ ಶೀರ್ಷಿಕೆಯೊಂದಿಗೆ ಮೊದಲ ಕಥೆಯನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
ತಂದೆಯ ಗುಣ ಮಗನಲ್ಲಿ ಯಾವತ್ತಿದ್ದರೂ ರಕ್ತಗತವಾಗಿಯೇ ಬಂದಿರುತ್ತದೆ, ಅದು ಯಾವ ಸಂದರ್ಭದಲ್ಲಾದರೂ ನಮಗೆ ಗೋಚರಿಸಬಹುದು ಎಂಬುದು ಈ ಕಥೆಯಿಂದ ತಿಳಿಯುತ್ತದೆ. ಮತ್ತು ಈ ಕಥೆ ಒಬ್ಬ ದುಷ್ಟ ಗಂಡನಿಂದಾಗಿ ಯಾವ ಅವಸ್ಥೆಗೆ ಹೆಣ್ಣಿನ ಬದುಕು ಬದಲಾಗುತ್ತದೆ ಎಂಬುದಕ್ಕೆ ಕನ್ನಡಿಯಾಗಿದೆ. ಮುಂದುವರೆದು ಗಂಡ ಕಾಲವಾದ ಮೇಲೆ ಆಕೆಗೆ ಯಾವುದೇ ಪರಪುರುಷ ಆಸರೆ ಆದ್ರೂ ಸಾಕು ಸಮಾಜ ತಪ್ಪಾಗಿಯೇ ನೋಡುತ್ತದೆ ಎಂಬುದು ದುರ್ದೈವದ ಸಂಕೇತವಾಗಿ ಕಾಡುತ್ತದೆ.
ಈ ಕಥೆಯಲ್ಲಿ ವಿಶೇಷವಾಗಿ ಇಷ್ಟವಾಗುವ ಪಾತ್ರಗಳೆಂದರೆ ಅಂಬಮ್ಮ(ಕಥಾ ನಾಯಕಿ)ನ ಅತ್ತಿ ಮತ್ತು ದುರುಗಪ್ಪ(ಅಂಬಮ್ಮನ ಎರಡನೇ ಗಂಡ). ಸೊಸಿಗೆ ಮತ್ತೊಂದು ಬಾಳು ಕೊಟ್ಟ ದೇವತೆಯಾಗಿ ಅಂಬಮ್ಮನ ಅತ್ತಿ ಕಂಡರೆ, ಒಂದು ದಿನವೂ ಅಂಬಮ್ಮನ ಮನಸಿಗೆ ನೋವು ಆಗದಂತೆ ಬಾಳು ನೀಡಿದ ದುರುಗಪ್ಪ. ಓದುಗನಿಗೆ ಹಿತವಾಗುತ್ತಾನೆ. ಇದಕ್ಕೆ ವ್ಯತಿರಿಕ್ತವಾದ ಛೆ, ಛೆ ಇಂತಹ ಮನುಷ್ಯರಾ ಅನ್ನೋ ಹಾಗೆ ಅನಿಸುವಂತಹ ಪಾತ್ರಗಳೆಂದರೆ ಸಿದ್ರಾಮ(ಅಂಬಮ್ಮನ ಮೊದಲನೇ ಗಂಡ) ಮತ್ತು ಅವನ ಮಗ ಮರಿಸಿದ್ದ(ಅಂಬಮ್ಮ-ಸಿದ್ರಾಮನ ಮಗ). ಊರ ಜನರ ಕುಹಕ, ಕೆಟ್ಟ ಮಾತುಗಳು ಓದುಗರ ಮೇಲೆ ಏನು ಪರಿಣಾಮ ಬೀರೋದಿಲ್ಲ. ಮನುಷ್ಯರ ನಡೆನೇ ಹಾಗೆ ಎನಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಜೀವ ಖಜೀಲಾಗೋದು ಅಂಬಮ್ಮಳಿಗೆ ಅವಳ ಹೆತ್ತ ಮಗನೇ ವಿರುದ್ಧವಾಗಿ ಮಾತನಾಡಿದಾಗ. ಆ ತಾಯಿಯ ಹೃದಯದ ನೋವು ಓದುಗನನ್ನೂ ತಾಕುತ್ತದೆ ಎಂಬುದು ಸತ್ಯ. ಕೊನೆಗೂ ಅಂಬಮ್ಮ ಮುಚ್ಚಿಟ್ಟ ಸತ್ಯ ಮರಿಸಿದ್ದನಿಗೆ ಎಳವರಿಂದ ತಿಳಿದು, ನಾನಾ ವಾರಸ್ದಾರ ಎಂದು ವಾರಸ್ದಾರ ಏನೋ ಆದ, ಆದರೆ ಆ ಸೌಮ್ಯ ಸ್ವಭಾವದ ದುರುಗಪ್ಪ ಮತ್ತು ತಾಯಿ ಅಂಬವ್ವಳ ಮನ ನೋಯಿಸಿ
ಮರಿಸಿದ್ದ ತಂದೆಯಂತೆ ಮಗ ಎಂದು ನಿರೂಪಿಸಿ ಓದುಗನಿಗೆ ಬೇಡವಾದ ಪಾತ್ರವಾಗಿಬಿಡುತ್ತಾನೆ. ಈ ಮಟ್ಟಿಗೆ ಮನ ತಾಕುವಂತೆ ಸಹೋದರಿ ರೇಣುಕಾ ಅವರು ಕಥೆಯನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.
* ಇಂದಿನ ಯುವಕರಿಂದ ಕಡೆಗಣನೆಗೆ ಒಳಗಾದ ವಯೋವೃದ್ಧರಿಗೆ ಸಶಕ್ತ ಬದುಕನ್ನು ನೀಡಿದ ಕಥೆ “ದೇಸಿ ಕಂಪನಿ”. ಇಂದಿಗೂ ನಮ್ಮ ಮಸ್ಕಿಯಲ್ಲಿ ಕೌದಿ ಬಳಕೆಯಲ್ಲಿದೆ. ಆಕರ್ಷಣೀಯವಾದ ಕೌದಿ ನಮಗೆಲ್ಲ ಹಳೆಯ ಸರಕಾದರೂ ಸಿಟೀ ಜನರಿಗೆ ಅದೊಂದು ವಿಶೇಷ ಮತ್ತು ಸೋಜಿಗದ ವಸ್ತು. ಸದಾ ಯಂತ್ರಗಳು ಹೊಲಿದ ಬಟ್ಟೆ ನೋಡುವ ಪ್ಯಾಟಿ ಜನರಿಗೆ ನಮ್ಮೂರ ಕೌದಿ ಪರಿಚಯಿಸಿದ ಅದೂ ವಯೋವೃದ್ಧೆಯರಿಗೆ ಸ್ವಾವಲಂಬಿತ ಬದುಕು ನೀಡುವ ಉದ್ದೇಶಿತ ಕಥೆ ರೋಮಾಂಚನವಾಗಿದೆ.
* ಸಾಮರಸ್ಯ ಬದುಕಿಗೆ ಹೆಸರುವಾಸಿ ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳು. ಎಲ್ಲಾ ಸಮಾದಾಯದವರ ಹಬ್ಬ ಜಾತ್ರೆಗಳಲ್ಲಿ ಕೇವಲ ಆ ಜನಾಂಗದವರಷ್ಟೇ ಅಲ್ಲದೆ ಅನ್ಯ ಕೋಮಿನವರೂ ಭಾಗವಹಿಸುವುದು ನಮ್ಮ ಭಾಗದಲ್ಲಿ ಸರ್ವೇ ಸಾಮಾನ್ಯವಾದುದಾಗಿದೆ. ಮೊಹರಂ ಸಂದರ್ಭದಲ್ಲಿ ಮುಸ್ಲಿಂ ದೇವರಿಗೆ ಹಿಂದೂಗಳು ನೈವೇದ್ಯ ಇಡುವುದು, ಆ ದೇವರುಗಳನ್ನು ಹೊತ್ತು ಕುಣಿವುದು ಎಷ್ಟು ಸಹಜವಾಗಿದೆಯೋ ಅಷ್ಟೇ ಸಹಜವಾಗಿ ಹಿಂದೂ ದೇವತೆಗಳ ಜಾತ್ರೆಗಳಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸುವುದು ಅಷ್ಟೇ ಸಹಜವಾಗಿದೆ. ಹೀಗೊಂದು ಇಂತಹ ಸಂದರ್ಭವಿರುವ ಪಿಂಜಾರ ಮಹಿಳೆಯೊಬ್ಬಳು ಗಂಡಾರ್ತಿ ಹೊರುವ ಪ್ರಸಂಗವನ್ನು ಯಥಾವತ್ತಾಗಿ ಮತಿಗೆ ಇಳಿಸುವಲ್ಲಿ ಕೃತಿಕಾರರು ಗೆದ್ದಿದ್ದಾರೆ. ಅನೇಕ ಸ್ವಸಮಾದಾಯದ ಹಿರಿಯರ ವಿರೋಧದ ನಡುವೆಯೂ ಗಂಡಾರ್ತಿ ಹೊತ್ತು ಸಾಗಿದ “ಮೌಲಮ್ಮ” ವಿಶೇಷವಾಗಿ ಓದುಗನಿಗೆ ಬದುಕಿಗೆ ಸಾಮರಸ್ಯದ ಪಾಠ ಮಾಡುತ್ತಾಳೆ. ಆ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ವಿರೋಧಿಸುವ ಅನಿವಾರ್ಯತೆಯೂ ಮೌಲಮ್ಮಳಲ್ಲಿತ್ತು ಜೊತೆಗೆ ನಂಬಿಕೆಗಿಂತ ದೊಡ್ಡದು ಧರ್ಮ ಅಲ್ಲ ಎನ್ನುವುದನ್ನು ಕೃತಿಕಾರರು ಪಾತ್ರ ಮುಖೇನ ತಿಳಿಸಿದ್ದಾರೆ.
* ಹಿಂದಿನ ಕಾಲದಲ್ಲಿ, ಮುಟ್ಟಿನ ಕಾರಣದಿಂದ ಹೆಣ್ಣನ್ನು ಮನೆಯಿಂದಾಚೆ ಇಡುವುದರೊಂದಿಗೆ ಹುಟ್ಟಿದ ಅಸ್ಪೃಶ್ಯತೆಯನ್ನು ವಿದ್ಯೆ ಕಲಿತ ಸಾವಿತ್ರಿಯಿಂದ ಡಿ.ಸಿ ವರೆಗೂ ವಿಚಾರ ತಲುಪಿ ಸಾಮಾಜಿಕವಾಗಿ ಕಾಡಿನ ಜನರ ಸಂಪ್ರದಾಯವನ್ನು ಬದಲಿಸಿದ ಕಥೆ ಮುಟ್ಟಾದ ಮೂರುದಿನ. ವಿದ್ಯೆಯಿಂದ ಎಲ್ಲವೂ ಸಾಧ್ಯ ಎಂದು ತೋರಿಸಿದ ಕಥೆ ಉತ್ತಮ ನಿರೂಪಣೆಯೊಂದಿಗೆ ಸ್ವಾರಸ್ಯಕರವಾಗಿ ಮೂಡಿಬಂದಿದೆ.
* ಗ್ರಾಮ್ಯ ಭಾಷೆಯಲ್ಲಿ ಬರೆದ ಕೊನೆಯ ಕಥೆ “ಪವಾಡ” ವಿಶೇಷವಾಗಿದೆ. ಸಂದರ್ಭೋಚಿತವಾಗಿ ಒದಗಿ ಬಂದ ಸವಾಲನ್ನು ಪವಾಡದ ರೀತಿಯಲ್ಲಿ ಪವಾಡ ಮಾಡಿ ಗೆದ್ದ ತಿಮ್ಮನ ಕಥೆ ರೋಚಕವಾಗಿದೆ. ನೈಪುಣ್ಯತೆ ಇಲ್ಲದಿದ್ದರೂ ಉಪಾಯದಿಂದ ಎದುರಾಳಿಯನ್ನು ಸೋಲಿಸಿ ಗೌಡನ ಮರ್ಯಾದಿ ಉಳಿಸಿದ ಕಥೆ ಓದುಗನಿಗೆ ಇಷ್ಟವಾಗುತ್ತದೆ.
* ಹೆಣ್ಣಿಗೆ ಮದುವೆ ಎನ್ನುವುದು ಅಂತಿಮವಾಗಿ ನೆಮ್ಮದಿ ನೀಡುವ ಭಾಗ್ಯ. ಎಷ್ಟೇ ನೋವಿದ್ದರೂ ಕೈಯಲ್ಲೊಂದು ಕೂಸು ಬಂದರೆ ಆಕೆ ತಾಯಿಯಾಗಿ ತನ್ನೆಲ್ಲಾ ನೋವನ್ನು ಮರೆತುಬಿಡುತ್ತಾಳೆ. ಆದರೆ ಅದೇ ಮದುವೆ ಸಂತೋಷದ ಆಗರವಾಗದೆ, ಗಂಡನ ಮನೆ ಮಗುವಿಲ್ಲದ ಆಲಯವಾದರೆ ಆ ಹೆಣ್ಣು ಖಂಡಿತ ಕುಲುಮೆಯಲ್ಲಿ ಬೆಂದುಬಿಡುತ್ತಾಳೆ. ನೈಸರ್ಗಿಕವಾಗಿ ಮಕ್ಕಳಾಗದಿದ್ದರೆ ಆಗೋ ನೋವಿಗಿಂತ ಗಂಡನ ನಿರ್ದಾಕ್ಷಿಣ್ಯ ನಿರ್ಧಾರದಿಂದಾರೆ! ಇಲ್ಲ… ಯಾವುದೇ ಹೆಣ್ಣು ಇದನ್ನು ಸಹಿಸುವುದಿಲ್ಲ. ಆರ್ಥಿಕ ಕಾರಣದಿಂದ ನಾಯಕ ನಾಯಕಿಯನ್ನು ದುಡಿಸಿಕೊಳ್ಳುತ್ತಾನೆಯೇ ಹೊರತು ಆಕೆಯ ಖುಷಿಗಾಗಿ ಚಡಪಡಿಸುವುದೇ ಇಲ್ಲ. ಸಾಲ, ಚಿಕಿತ್ಸೆ ಹಣದ ಮುಗ್ಗಟ್ಟನ್ನೇ ನೆಪವಾಗಿಟ್ಟುಕೊಂಡ ನಾಯಕನ ನಡೆಯಿಂದ ರೋಸಿ ಹೊಗಿ ವಿಚ್ಛೇದನ ನೀಡಬೇಕೆಂದರೂ ಆಗದ ಪರಿಸ್ಥಿತಿಯಲ್ಲೇ ಬೆಂದು ಬಡಕಲಾದ ಹೆಣ್ಣಿನ ಕಥೆ “ಕುಲುಮೆ” ಓದುಗನಿಗೆ ಅಯ್ಯೋ ಅನಿಸುವಂತೆ ಬರೆದ ಕೀರ್ತಿ ಲೇಖಕರರದ್ದಾಗಿದೆ.
* ಮಕ್ಕಳ ಬಯಕೆಯನ್ನು ಪೂರೈಸಲು ತಮ್ಮ ಬದುಕನ್ನೆಲ್ಲಾ ಮುಡಿಪಾಗಿಡುವ ಜೀವಗಳು ಎಂದರೆ ಅದು ತಂದೆ ತಾಯಿ. ಮಕ್ಕಳ ಖುಷಿಗಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸುವ ತಂದೆ ತಾಯಿ ತಮ್ಮ ಸಂತೋಷವನ್ನೂ ತ್ಯಾಗ ಮಾಡುತ್ತಾರೆ. ಹೀಗೆ ಮಗನ ಹುಟ್ಟುಹಬ್ಬವನ್ನಾಚರಿಸಲು ಡೆಲಿವರಿ ಬಾಯ್ ಪ್ರಕಾಶ ರಜೆಯಲ್ಲಿದ್ದರೂ ತನ್ನ ಗೆಳೆಯನಿಗೆ ಸಹಾಯ ಮಾಡಲು ಮಗನೊಡನೆ ಹೊರಡುತ್ತಾನೆ. ಇನ್ನೇನು ಫುಡ್ ಡೆಲಿವರಿ ಮಾಡಿ ಮನೆಗೆ ತೆರಳಿ ಮಗನ ಹುಟ್ಟು ಹಬ್ಬವನ್ನು ಆಚರಿಸಬೇಕೆಂದುಕೊಂಡ ಪ್ರಕಾಶ; ಮಗನ ಅಚಾತುರ್ಯದ ನಡೆಯ ಕಾರಣದಿಂದ ಅಪಾರ್ಟ್ಮೆಂಟಿನ ಒಬ್ಬ ಮನಷ್ಯತ್ವ ಇಲ್ಲದ ದೈತ್ಯ ಮನುಷ್ಯನಿಂದ ಚೆನ್ನಾಗಿ ಹೊಡೆತಗಳು ಬಿದ್ದು ಆಸ್ಪತ್ರೆ ಸೇರುವ ಹಂತಕ್ಕೆ ತಲುಪುತ್ತಾನೆ. ಆ ಕ್ರೂರಿಯ ಹೆಂಡತಿ ಪೋಲಿಸ್ ಕೇಸಾದರೆ ಹೇಗೆ ಎಂಬ ಭಯದಿಂದ ಸಹಾಯಕ್ಕೆ ಧಾವಿಸಿ ಬಂದರೂ, ಅದನ್ನು ಪ್ರಕಾಶನ ಹೆಂಡತಿ ಪದ್ಮಾ ತಿರಸ್ಕರಿಸಿ, ಮನಷ್ಯತ್ವ ಇಲ್ಲದವರ ಸಹಾಯ, ಹಣ ಬೇಕಿಲ್ಲ ಎನ್ನುತ್ತಾಳೆ. ಮಗನ ಹುಟ್ಟು ಹಬ್ಬ ಆಚರಿಸಬೇಕೆಂಬ ಖುಷಿಯಲ್ಲಿದ್ದ ಕುಟುಂಬ ಹೀಗೆ ಆಸ್ಪತ್ರೆಯಲ್ಲಿ ದುಃಖಿಸುವಂತಾದುದನ್ನು ಓದುಗನ ಮನಸಿಗೆ ತಾಕುವಂತೆ ಕೃತಿಕಾರರು ನಿರೂಪಿಸಿದ್ದಾರೆ.
* ಗಂಡು ಹೆಣ್ಣು ಪ್ರೇಮದಲ್ಲಿ ಸ್ಪರ್ಧಿಸಬೇಕೇ ಹೊರತು ಅನುಮಾನದಲ್ಲಿ ಅಥವಾ ಅವಮಾನಿಸುವಲ್ಲಿ ಅಲ್ಲ. ನಂಬಿಕೆ ಎನ್ನುವ ಬೇರು ಭದ್ರವಾಗಿದ್ದರೆ ಒಬ್ಬರಿಗೊಬ್ಬರು, ಒಬ್ಬರಿಗೊಬ್ಬರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಂದಾಗುವುದಿಲ್ಲ. ಆದರೆ “ಕಡಲ ಮನದ ಮಿಡಿತದಲ್ಲಿ” ಅಕ್ಷರಶಃ ಕಥಾ ನಾಯಕ ಸುಮನ್ ತನ್ನ ಮದುವೆಯಾಗುವ ಸೌಮ್ಯಳ ಮೇಲೆ ನಿಯಂತ್ರಣ ಸಾಧಿಸಲು ಹೊರಡುತ್ತಾನೆ.
ಸೌಮ್ಯಳ ಪ್ರತಿ ಹೆಜ್ಜೆಯೂ ತನ್ನ ಗಮನಕ್ಕೆ ಬರಬೇಕೆಂದು ಅಪೇಕ್ಷಿಸುತ್ತಾನೆ. ಕೇವಲ ಅಪೇಕ್ಷೆ ಆಗಿದ್ದರೆ ಕೇಡಿರಲಿಲ್ಲ. ಅಲ್ಲೊಂದು ಅನುಮಾನದ ಭೂತ ಇತ್ತು. ಪ್ರತಿಯೊಬ್ಬರಿಗೂ ಅವರಿಗೇ ಆದ ವೈಯಕ್ತಿಕ ಕೆಲಸ ಇರುತ್ತವೆ, ಸಮಯ ಸಂದರ್ಭ ಬದಲಾಗುತ್ತ ಸಾಗುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮೂಢತೆ ಇತ್ತು. ನಿಶ್ಚಿತಾರ್ಥ ಆದದ್ದೇ ಸೌಮ್ಯಳ ಮೇಲೆ ಅತಿಯಾಗಿ ನಿಯಂತ್ರಣ ಹೇರುತ್ತಾನೆ. ಪಾಪ ಅದು ಅತಿಯಾದ ಪ್ರೀತಿ ಎಂದುಕೊಂಡೇ ಸೌಮ್ಯ ಸುಮ್ಮನಿರುತ್ತಾಳೆ. ಆದರೆ ಅನಿವಾರ್ಯ ಘಟನಾವಳಿಯಿಂದ ತಪ್ಪಿಲ್ಲದಿದ್ದರೂ ಸೌಮ್ಯಳ ಮೇಲೆ ವಿನಾಕಾರಣ ಜೋರು ಮಾಡ್ತಾ ಮಾಡ್ತಾ ಸೌಮ್ಯ ಮತ್ತು ಅವಳ ತಾಯಿಯ ನಡತೆ ಬಗ್ಗೆಯೂ ಮಾತಾಡಿ ತೀರಾ ಮೃಗದಂತೆ ವರ್ತಿಸುತ್ತಾನೆ. ಅದೇ ಕೊನೆ, ಸೌಮ್ಯ ಪಾಂಡಚೇರಿಯ ಕಡಲ ತಳಕ್ಕೆ ನಿಶ್ತಿತಾರ್ಥದ ಉಂಗುರ ಸೇರಿಸುತ್ತಾಳೆ. ತಾಯಿಯ ಮಹದಾಸೆಯಾದ ತನ್ನ ಮದುವೆಗೆ ಅಂತ್ಯ ಹಾಡುತ್ತಾಳೆ.
ಕೃತಿಕಾರರು ಒಂದು ಹೆಣ್ಣಿನ ಮನದ ಮಿಡಿತವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಪುರಷರ ಪೌರುಷ, ಪ್ರಾಬಲ್ಯ ಹೇಗೆಲ್ಲ ಹೆಣ್ಣನ್ನು ದುಃಖಕ್ಕೆ ನೂಕುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಕಡಲ ಅಲೆಗಳ ಯಾಂತ್ರಿಕ ರಭಸದಷ್ಟೇ ಹೆಣ್ಣಿನ ಮನದ ಮಾನಸಿಕ ತುಮುಲಗಳಿಗೆ ಸ್ಪಂದಿಸುವವನೇ ನಿಜವಾದ ಗಂಡಸು ಎನಿಸಿಕೊಳ್ಳುತ್ತಾನೆ. ಪ್ರೀತಿ, ಹೇರಿಕೆ ಆಗುವ ಬದಲು ಹಾರೈಕೆ, ಆರೈಕೆ, ಪ್ರೇಮದ ಖುಷಿಯ ಪೂರೈಕೆ ಆಗಬೇಕೆಂಬುದು ಕಥೆ ತಿಳಿಸುತ್ತದೆ. ಇದಕ್ಕೆ ವ್ಯತಿರಿಕ್ತವಾದ ಗಂಡಸಿನ ನಡವಳಿಕೆ ಎಂದಿಗೂ ಯಾವ ಹೆಣ್ಣಿಗೂ ಇಷ್ಟವಾಗುವುದಿಲ್ಲ ಎಂಬುದು ಸತ್ಯವಾಗಿದೆ.
* ಕೊನೆಯದಾಗಿ “ಕಥೆಗೊಂದು ಕಾಲ” ಕಥೆಯಲ್ಲಿ ಬರಹಗಾರರಿಗೆ ಬದುಕಿಲ್ಲ, ಬರಹದಿಂದ ಹೊಟ್ಟೆ ತುಂಬೋದಿಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳುತ್ತಲೇ ಕಥೆಗೂ ಒಂದು ಸಕಾಲ ಬರುತ್ತದೆ, ಕಥೆಗಾರರಿಗೂ ಕಥೆಯಿಂದ ಒಂದಷ್ಟು ಸಂಪಾದನೆ ಮಾಡುವ ಕಾಲ ಬರುತ್ತದೆ ಎಂಬುದನ್ನು ಉತ್ತಮವಾಗಿ ಚಿತ್ರಿಸಿದ್ದಾರೆ.
ಹೀಗೆ ಒಟ್ಟು ೫+೪ ಕಥೆಗಳನ್ನೊಳಗೊಂಡ ಚಿಗುರೊಡೆದ ಬೇರು ಕಥಾ ಸಂಕಲನ ಸಾಹಿತ್ಯ ಲೋಕದಲ್ಲಿ ವಿಭಿನ್ನವಾದ ಮತ್ತು ನೂತನವಾದ ದಾರಿಯ ಚಿಗುರನ್ನು ಸೃಜಿಸಿದೆ.
ಈಗಾಗಲೇ ಸಂಶೋಧನಾ ಕೃತಿಗಳನ್ನು, ಕವನ ಸಂಕಲನಗಳನ್ನು, ಕಥಾ ಸಂಕಲನಗಳನ್ನು ಹೊರ ತಂದ ಸಹೋದರಿ ರೇಣುಕಾ ಕೋಡಗುಂಟಿಯವರ,
ಮನದ ಮಾತುಗಳನ್ನೇ ವಿಷಯವಾಗಿಸಿಕೊಂಡ ಈ ಹೊಸ “ಚಿಗುರೊಡೆದ ಬೇರು” ಕಥಾ ಸಂಕಲನ ಖಂಡಿತವಾಗಿ ಮನೆ, ಮನೆ ಮಾತುಗುತ್ತದೆ. ಆಗಲಿ. ಜೊತೆಗೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಲಿ ಎಂದು ಹಾರೈಸುತ್ತ ಓದುಗ ಬಂಧುಗಳು ಕೃತಿಯನ್ನು ಕೊಂಡು ಓದಿ ಕಥೆಗಳನ್ನು ಆಸ್ವಾದಿಸಬೇಕೆಂದು ಪ್ರಾರ್ಥಿಸುತ್ತ ಕೃತಿಯ ಕುರಿತಾದ ನನ್ನ ಮಾತುಗಳನ್ನು ಮುಗಿಸುತ್ತೇನೆ.
—————————————
ವರದೇಂದ್ರ ಕೆ ಮಸ್ಕಿ