ಮಕ್ಕಳ ಸಂಗಾತಿ
ಸುಲೋಚನಾ ಮಾಲಿಪಾಟೀಲ
‘ಹಾರುವ ಪಟ’
ಬಣ್ಣ ಬಣ್ಣದ ಕಾಗದ ಕೈಯ್ಯಲ್ಲಿ
ಬಿದಿರು ಕಡ್ಡಿಗೆ ಕಡ್ಡಿ ಹಚ್ಚುತಲಿ
ದಾರಕೆ ದಾರ ಜೋಡಿಸುತ
ಗಾಳಿಪಟಕೆ ಪುಕ್ಕಕೆ ಪುಕ್ಕ ಹಚ್ಚುತ
ಕೈಯಿಂದ ಸರಸರ ದಾರ ಬಿಡುತಿರಲು
ನೋಡು ನೋಡುತ ಮೇಲೆರಲು
ಬೇಗ ಬೇಗ ಹಾರಿತು ಪಟವಲ್ಲಿ
ಭರಭರ ಗಾಳಿಗೆ ತೂರಾಡತಲಿ
ಪಿಳಿ ಪಿಳಿ ನೋಡುವ ಕಣ್ಣುಗಳು
ಜಿಗಿ ಜಿಗಿದು ನಗುವ ಮಕ್ಕಳು
ಪಟಗಳ ದಾರಿಗೆ ದಾರಿ ತಗಲಲು
ಡವಡವ ಮಕ್ಕಳ ಮನದೊಳು
ಗಿರಿ ಗಿರಿ ತಿರುಗಿ ಉರಳಿದ ಗಾಳಿಪಟ
ಸಿಡಿಮಿಡಿ ಗೊಂಡ ಮಕ್ಕಳ ನೋಟ
ಕಿಸಿ ಕಿಸಿ ನಗುತ ನಲಿವ ಮೋಜಿತ್ತು
ಬಾನಲಿ ಬಣ್ಣ ಬಣ್ಣದ ಚಿಟ್ಟೆಗಳಂತಿತ್ತು
ಸುಲೋಚನಾ ಮಾಲಿಪಾಟೀಲ .