ಕಾವ್ಯಯಾನ

ಸ್ವಯಂ ದೀಪ

Woman Holding Disposable Lighter

ವಿದ್ಯಾ ಶ್ರೀ ಎಸ್ ಅಡೂರ್

ಏನಾದರೂ ಬರೆಯಬೇಕೆಂಬ ಅಮಲು,ಮತ್ತು
ಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,
ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…
ಅತ್ತ ಕವಿಯಾಗುವ ಆಸೆಯೂ ಅಳಿಯದೆ….

ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬ
ಕುದುರೆಗಳ ಲಗಾಮು ಹಿಡಿದು …..

ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆ
ಸ್ಪುರಿಸುವ ಒಂದೆರಡು ಸಾಲು ಕವನ ,
ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆ
ಬೆನ್ನಟ್ಟಲಾಗದೆ….ಆ ಕ್ಷಣ

ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತ
ನನ್ನ ಭಾವಗಳ ಬಸಿರು ಹರಿದು……

ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆ
ಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತು
ಬಿಸಿಯುಂಡ ಹಾಲಿನ ಮೇಲೆ ಮೃದುವಾದ ಕೆನೆ ತೇಲುವಂತೆ,
ಮೈತುಂಬ ಮುಳ್ಳು ತುಂಬಿಕೊಂಡ ಗಿಡದಲ್ಲೂ ಹೂವು ಬಿಟ್ಟಿತ್ತು.

ಸಾಕಿನ್ನು ವೃಥಾ ಪ್ರಲಾಪ..ಬೆಳಕಿಗಾಗಿ ಅನ್ಯರ ಕಾಯದೇ
ನಿಂತಿರುವೆ ಕೈಯಲ್ಲೊಂದು ಪುಟ್ಟ ಹಣತೆ ಹಿಡಿದು…

**************

4 thoughts on “ಕಾವ್ಯಯಾನ

Leave a Reply

Back To Top