ಬರಿ ಮಣ್ಣಲ್ಲ ನಾನು….!
ಶಿವಲೀಲಾ ಹುಣಸಗಿ
ಬಯಕೆಯೊಂದು ಮನದಲವಿತು ಕಾಡುತ್ತಿತ್ತು…
ಮದ ತುಂಬಿದೆದೆಯಲಿ ಹದವಾಗಿ ನಾಟಿ ಮೀಟುತ್ತಿತ್ತು
ಹೃದಯ ಬಡಿತದ ಗೀಳೊಂದು ಸಂಕೋಲೆಯ
ತೊಡರಾಗಿ,ನಿನ್ನರಸುವ ಗಾಳಿಗುಂಟ ದಿಕ್ಕಾಪಾಲು
ನುಸುಳಿದಾಗೆಗಲೆಲ್ಲ ಸದ್ದಿಲ್ಲದೆ ಮುಳ್ಳುಗಳು ಚುಚ್ಚಿ
ಪರಚಿದ ಗಾಯಕ್ಕೊಂದು ಮುಲಾಮು
ಹಿತವಾಗಿ ಅಪ್ಪಿದ ಗಳಿಗೆಗಳು,ತೀವ್ರತೆಗೆ ಸಾಣೆ ಹಿಡಿದು ತನುವಿನೊಳಗೆ ಭಾವೋದ್ರೇಕದ ಸುಳಿಗಾಳಿ
ಮುತ್ತಿನ ಹನಿಗಳಿಗೆ,ಬಯಲಾಗಿ ಮೈದೆಳೆದಿದೆ
ಹೊನಲು ಬೆಳಕಿನಾರ್ಭಟದಲಿ ಪ್ರೇಮೋತ್ಸವವಿದೆ
ಸಂಭ್ರಮಕ್ಕೊಂದು ಮಿತಿಯಿದೆ ನಿಧಾನಿಸು,
ಬಿಕರಿಯಾಗದಿರಲಿ ಸೆಳೆತದಾ ಬಿಗಿ ನಂಟು
ಬರೀ ಮಣ್ಣಲ್ಲ ನಾನು,ನೀ ಬಿತ್ತುವ ಬೀಜಕೆ
ಕಾಪಿಡುವ ಜೀವದುಸಿರಿನ ಆಸರೆ
ಒಡಲೊಳು ಬಂಧಿಸಿ ನಿನ್ನ ಮರುಸೃಷ್ಟಿಗೆ
ಎನ್ನೆದೆಯು ಯುಗಗಳಿಗೆ ಸಾಕ್ಷಿಯಾಗಿದೆ
ನಿನಗಾಗಿ ಹಂಬಲಿಸದ ದಿನಗಳಿಲ್ಲ
ನೀನಿಲ್ಲದೆ ಹೂ ಅರಳಿಲ್ಲ,ಗುಬ್ಬಿ ಗೂಡು ಕಟ್ಟಿಲ್ಲ,
ಜಗವೆಲ್ಲ ಮಂಕಾಗಿಹುದು ನೀ ಅರಿತಿಲ್ಲ
ಮುಂಗಾರಿನ ಅಭಿಷೇಕಕೆ ಹಾತೊರೆದು
ಅಮೃತ ಧಾರೆಯ ಮೊದಲ ಸ್ಪರ್ಶದಾ ಸಿಹಿ
ಗರಿ ಬಿಚ್ಚಿ ಕುಣಿವ ಮನದಿಂಗಿತ ಚಿಗುರಿ
ಒಂದು ಹನಿಯು ಕೈ ಜಾರದಂತೆ
ಗುಟ್ಟಾಗಿ ಬಚ್ಚಿಡಲು ಸಿದ್ದವಿದೆ ತನುವಿಂದು
ಪ್ರಳಯವಾಗಲಿ,ಪ್ರವಾಹ ಬರಲಿ,ಸಾಗರವುಕ್ಕಲಿ
ಸಂಗಮದ ಪರಮಾವಧಿಗೆ ದಿಕ್ಕೊಂದಾಗಲಿ
ಇಂಚಿಂಚು ಭರ್ತಿಯಾಗಲಿ ಒಲವಿನ ಆಗರ
ನನಗೊಂದು ಬಯಕೆಯ ಮಹಾಪೂರ
ಸೀಮಂತಕೆ ಸಜ್ಜಾಗುವ ಕಾತುರದ ಗಾನ
ಹಸಿರ ತೋರಣ ಕಟ್ಟಿ ಇಳೆಯ ಆಲಿಂಗನ
ನಾಚಿ ನೀರಾಗಲಿ ಭವದ ಸುಖವೆಲ್ಲ
ಭೂಮಿ ಆಕಾಶಗಳ ಮಿಲನದಾ ಅಂತ್ಯದಲ್ಲಿ
ಮೇಘಗಳ ಸರಮಾಲೆಗೆ ಕೊರಳೊಡ್ಡಿ
ಹೊತ್ತಿಗೊಂದು ಮುತ್ತಿನ ಸೆರಗೊಡ್ಡಿ
*******
ಚೆಂದದ ಪ್ರೇಮ ಕವನ
ಕವಿತೆ ಚನ್ನಾಗಿದೆ ಮೆಡಮ್
ಭೂಮಿ ಆಕಾಶ..
ಮಳೆ ಮತ್ತು ಭೂಮಿಯ ಹಾಗೂ ಪ್ರಕೃತಿ ಪುರುಷರ ಸಂಗಮದ ಬಯಕೆ ಇಲ್ಲಿ ಹದವಾಗಿ ಬಂದಿದೆ
ಹೆಣ್ಣಿನ ಬಯಕೆ ಕನಸು ಬೇರೆಯಲ್ಲ, ಭೂಮಿ ಮತ್ತು ಮಳೆಯ ಅನುಸಂಧಾನ ಬೇರೆಯಲ್ಲ ಎಂಬುದುನ್ನು ಸೂಚ್ಯವಾಗಿ ಹೇಳುವ ಕವಯಿತ್ರಿ ಕಾವ್ಯವನ್ನು ಭಾವೋದ್ವೇಗದಲ್ಲಿ ಪ್ರಾರಂಭಿಸಿ, ಸಣ್ಣಗೆ ಸುರಿಯುವ ಮಳೆಯಂತೆ _ ಅದನ್ನು ಧ್ಯಾನಿಸುವ ಭೂಮಿಯ ಧನ್ಯತೆಯಲ್ಲಿ ಕವಿತೆಗೆ ಪೂರ್ಣವಿರಾಮ ಇಟ್ಟಿದ್ದಾರೆ…
ಥಾಂಕ್ಯೂ ಸರ್..
Super
ಮನದೊಳಡಗಿದ ಬಯಕೆಯ ಹೂರಣ
ಕವನದತುಂಬ ಪ್ರಕಟಿಸಿದ ಬಗೆ ತುಂಬಾ ಸೊಗಸಾಗಿದೆ
ತುಂಬಾ ಚೆಂದದ ಕವಿತೆ
Nice
ಚೆನ್ನಾಗಿದೆ
Sundar kavite