ನಿರ್ವಾಣದೆಡೆಗೆ
ಎಮ್.ಟಿ. ನಾಯ್ಕ. ಹೆಗಡೆ
ಹೋಗಿ ಬಂದವನು ನಾನು
ನಿರ್ವಾಣದೆಡೆಗೆ
ಸರ್ವ ಚೈತನ್ಯ ಶೂನ್ಯದಂಚಿಗೆ
ಕೋಟೆ, ಕಿರೀಟ, ಕೀರ್ತಿಗಳನೆಲ್ಲಾ
ತೊರೆದು ಸಾಗುವ ದಾರಿ
ಅರಸು ಆಳುಗಳನೆಲ್ಲಾ ಕೊನೆಗೆ
ಕೂಡಿಸುವ ಕೂಡುದಾರಿ ….!
ನಡೆದ ಬಸವಣ್ಣ
ಕಲ್ಯಾಣ ಕ್ರಾಂತಿಯ ನಡುವೆ ,
ತನ್ನ ಶಿಲುಬೆ ತಾ —
ಹೊತ್ತು ನಡೆದ ಯೇಸು
ನಿರ್ವಾಣದೆಡೆಗೆ .
ಕಾಲಪುರುಷನಾಣತಿಯಂತೆಲ್ಲಾ
ತೊರೆದು ಹೊರಟ
ಲೋಕದ ‘ ಶ್ರೀ ರಾಮ ‘ ,
ಜಗನ್ನಾಟಕ ಸೂತ್ರಧಾರಿಯ
ಗರಿಮೆ ಹೊತ್ತವ —
ಕಾನನದ ನಡುವೆ ವ್ಯಾಧನ
‘ ಶರಕೆ ‘ ಹೊರಟನಲ್ಲಿಂದಲೇ
ನಿರ್ವಾಣದೆಡೆಗೆ
ಕ್ಷಣಭಂಗುರದ ಬದುಕಿನ
ಕತೆಯ ತೆರೆದಿಡುವ ಗಳಿಗೆ
ಜೀವ ಜಗದ
ಗಡಿಯಾರದ ಗುರುತು
ನಿರ್ವಾಣದ ಗಳಿಗೆ
ದಾಟಿ ಉಳಿದವರಿಲ್ಲ ಆ ಗಳಿಗೆ..!
**********
ತುಂಬಾ ಚೆನ್ನಾಗಿದೆ ಸರ್
ಸುಮಧುರ ಭಾವ.
ನನ್ನ ಕವನ ‘ ನಿರ್ವಾಣದೆಡೆಗೆ ‘ ಕುರಿತು ಪ್ರೀತಿಯಿಂದ ಪ್ರತಿಕ್ರಿಯಿಸಿದ ಸಂಗಾತಿ ಬಳಗಕ್ಕೆ ಆತ್ಮೀಯ ವಂದನೆಗಳು.