ಕಾವ್ಯ ಸಂಗಾತಿ
ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-
ಹೊಸ ವರುಷವೇ ಹೀಗೆ ಬಾ..
ಹೊಸ ವರುಷವೇ ಹೀಗೆ ಬಾ
ಸ್ವಾಗತ ನಿನಗೆ ಸುಸ್ವಾಗತ…
ಆಕಾಶದಲಿ ನೀಲಿಯನುಳಿಸಿ
ನವತಾರೆಯ,ಬೆಳಕಿನ ಧಾರೆಯ ಹರಿಸಿ
ಎಳೆಯರೆದೆಯಲಿ ಗುರಿ ಬೆಳೆಸನು ಬೆಳೆಯಿಸಿ
ಇಳೆಯೆಲ್ಲೆಡೆಯಲಿ ಹಸಿರನು ಹೊದಿಸಿ
ಮನುಜರ ಮನದಲಿ ಮದವನು ತೊಳೆಸಿ(ಹೊಸ)
ದಾಸ್ಯದ ಮನವನು ತಿದ್ದುತ,ಹಾಸ್ಯದ ಹೊನಲನು ಹರಿಸುತ
ಮಾ-ನವ ಮೌಲ್ಯವ ಬಿತ್ತುತ,ನವ ಚೈತನ್ಯವ ತುಂಬುತ
ಜೀವನ ಪ್ರೀತಿಯ ಮನ-ಮನೆಗಳೊಳು ಬೆಳಗುತ
ಕೋಗಿಲೆ ಹಾಡನು ಕೇಳಿಸಿ,ನವಿಲಿನ ನರ್ತನ ತೋರಿಸಿ(ಹೊಸ)
ಮೌಢ್ಯತೆ, ಜಾಡ್ಯತೆಯ ಝಾಡಿಸಿ
ಮಾನವನೆದೆಯಲಿ ಅರಿವಿನ ಹಣತೆಯ ಹಚ್ಚಿ
ನದಿ ನದ ತುಂಬಿಸಿ,ಜಲಚರ ಹೊಳೆಯಿಸಿ
ಆಡಿಸಿ ಹಾಡಿಸಿ, ಬಡವನೆದೆಯಲಿ ಜೀವನಸೆಲೆ ತುಂಬಿಸಿ
ಆನಂದದಿ ನಂದನದಿ ಹಸಿರಿಸಿ, ತುಂದಿಲದಿ(ಹೊಸ)
ಅನ್ನದ ಮಣ್ಣನು ಚಿನ್ನದ ಮಣ್ಣಾಗಿಸಿ
ಮಣ್ಣ ಮಣ್ಣು ಮಾಡುತಿಹರೆದೆಯಲಿ
ಮಣ್ಣ ಪ್ರೀತಿಯ ತುಂಬುತ
ಹಸಿರಿನ ಆಸೆಯ ಹೊದಿಸುತ
ಹಸಿರಾಗಲು ಬಾ ಹಸಿರಾಗಿ ಉಳಿದುಬಿಡು (ಹೊಸ)
ಹೇಮಚಂದ್ರ ದಾಳಗೌಡನಹಳ್ಳಿ.