ಕವಿ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕುವೆಂಪು ವಿಭಿನ್ನ ವ್ಯಕ್ತಿತ್ವದ ಆದರ್ಶಗಳು…
“ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು…”
ವಿಶ್ವಮಾನವ ಕುವೆಂಪು ಎಲ್ಲಾ ಬರಹಗಾರರಿಗಿಂತ ವಿಭಿನ್ನ ವಿಶಿಷ್ಟ ವ್ಯಕ್ತಿತ್ವ ಅವರದು. ಅವರ ಬದುಕೇ ಒಂದು ವಿಸ್ಮಯ.
ಕುವೆಂಪುರವರು 1904 ರ ಡಿಸೆಂಬರ್ 29 ರಂದು, ಕುಪ್ಪಳಿಯಲ್ಲಿ ಜನಿಸುತ್ತಾರೆ. ಬಹುತೇಕವಾಗಿ ಮೊದಲ ಮಹಾಯುದ್ಧ 1918 ಮತ್ತು 19ರಲ್ಲಿ ಜರುಗುತ್ತದೆ. ಈ ಎರಡು ಸನ್ನಿವೇಶಗಳನ್ನು ನಾವು ಅವಲೋಕನ ಮಾಡಿದಾಗ, ಕುವೆಂಪುರವರಿಗೆ 18 ರಿಂದ 20 ವಯಸ್ಸಿನ ವಯೋಮಾನದ ಹರೆಯದವರಾಗಿರುವುದರಿಂದ ಯುದ್ಧದ ವಿಭೂಷಣತೆ, ಯುದ್ಧದ ಸಾವು, ನೋವುಗಳು ಕವಿಮನದ ಕುವೆಂಪುರವರಿಗೆ ಕಾಡಿರುವುದರಿಂದಲೇ ಅವರು ವಿಶ್ವಶಾಂತಿ, ವಿಶ್ವಭಾತ್ರತ್ವ, ಭಾವೈಕ್ಯತೆ, ವಿಶ್ವಚೇತನ ಮುಂತಾದ ವಿಚಾರಕ್ರಾಂತಿಯ ಆಲೋಚನೆಗಳು ಅವರಲ್ಲಿ ಮೂಡಿರುವುದರಲ್ಲಿ ಸಹಜವಿದೆ. ಯುದ್ಧ ಯಾವಾಗಲೂ ಮನುಷ್ಯ ಕುಲದ ವಿರೋಧಿ. ಅದು ಜೀವವಿರೋಧಿಯು ಹೌದು. ಅದನ್ನು ಅವರು ಯುದ್ಧವನ್ನು ಖಂಡಿಸಿರುವುದು ಅರ್ಥಪೂರ್ಣವಾಗಿದೆ.
ಆದರೆ.. ಎಲ್ಲಾ ಬರಹಗಾರರಿಗಿಂತ ಸಾಹಿತಿಗಳಿಗಿಂತ ಕವಿಗಳಿಗಿಂತ ಸಮಾಜದ ಪ್ರತಿಯೊಂದು ಆಯಾಮಗಳನ್ನು ಅನುಭವಿಸಿದವರು ಕುವೆಂಪುರವರು. ಹಾಗಾಗಿಯೇ ಯುದ್ಧ ವಿರೋಧಿ ನಿಲುವು, ಶಾಂತಿ ಸ್ಥಾಪನೆಯ ಒಲವು, ಅವರ ಒಲವಿನ ಮಂತ್ರವಾಗಿದೆ.
ಕುವೆಂಪುರವರು ಆಡಂಬರವನ್ನು ನಿರಾಕರಿಸುತ್ತಲೇ ಸರಳತೆಯನ್ನು ಮೈಗೂಡಿಸಿಕೊಂಡವರು. ಅವರು ಕೃಷಿ ಜಮೀನ್ದಾರಿ ಮನೆತನದವರಾದರೂ ಕೂಡ ಯಾವತ್ತೂ ಆಡಂಬರವನ್ನು ಬಯಸದೆ, ತಮ್ಮ ಮತ್ತು ಮಕ್ಕಳ ಮದುವೆಯನ್ನು ಕೂಡ ಸರಳವಾಗಿ ಮಾಡಿದವರು. ಸ್ವತಃ ಮಾಂಗಲ್ಯ ಮಂತ್ರವನ್ನು ತಮ್ಮ ಬದುಕಿನಲ್ಲಿ ಪ್ರಯೋಗ ಮಾಡಿದವರು. ಕುವೆಂಪುರವರು ಹೀಗಾಗಿಯೇ ಅವರೊಬ್ಬ ಆರ್ಥಿಕ ಶಿಸ್ತಿನ ವ್ಯಕ್ತಿಯಾಗಿ, ವಿಭಿನ್ನವಾಗಿ ನಮ್ಮ ನಮ್ಮೆದುರು ನಿಲ್ಲುತ್ತಾರೆ.
ವಿಶೇಷವಾಗಿ ಕುವೆಂಪುರವರು ಪ್ರಕೃತಿ ಜೀವಿ. ಸಹಜವಾಗಿ ಮಲೆನಾಡಿನಲ್ಲಿ ಜನಿಸಿರುವುದರಿಂದ ಅವರ ಬಾಲ್ಯದ ಬದುಕು, ಕಾಡುಮೇಡು ಗುಡ್ಡ ಬೆಟ್ಟ ಕೆರೆ ತೊರೆಗಳ ವಲಯದಲ್ಲಿ ಅಲೆದಾಡಿ, ಪ್ರಕೃತಿಯನ್ನು ಪ್ರೀತಿಸಿದವರು. ಅವರ ಬಹುತೇಕ ಬರಹಗಳಲ್ಲಿ ಮಲೆನಾಡಿನ ಬದುಕು ಹಾಸುಹೊಕ್ಕಾಗಿದೆ. “ಪ್ರಕೃತಿಯೇ ದೇವರು..” ಎಂದು ತಮ್ಮ ಆದರ್ಶವನ್ನು ಮೆರೆದವರು. ಪ್ರಕೃತಿಯನ್ನು ಕುರಿತು ಅದೆಷ್ಟೋ ಕೃತಿಗಳನ್ನು ರಚಿಸಿರುವುದನ್ನು ನಾವು ಕಾಣಬಹುದಾಗಿದೆ.
ಅವರ ಕಾಲಘಟ್ಟದಲ್ಲಿ ಜಾತಿ, ಮತ, ಪಂಥಗಳ ತಾರತಮ್ಯ ಅತ್ಯಂತ ಮೇಲ್ಮಟ್ಟದಲ್ಲಿದ್ದು, ತಾರತಮ್ಯದ ಕವಲುಗಳು ಒಡೆದ ಬದುಕಿನಲ್ಲಿ ಶೋಷಣೆ ಎನ್ನುವುದು ನಿತ್ಯ ನಡೆಯುವ ಅನೇಕ ಪ್ರಸಂಗಗಳು ಕಾಣುತ್ತಿದ್ದರು. ತಳಸಮುದಾಯದ ಕೃಷಿಯನ್ನೇ ತಮ್ಮ ಕುಟುಂಬವು ವೃತ್ತಿಯನ್ನಾಗಿ ಮಾಡುತ್ತಿದ್ದ, ಮಲೆನಾಡಿನ ಕುಟುಂಬ ವರ್ಗದಲ್ಲಿ ಜನಿಸಿದ ಕುವೆಂಪುರವರು ಬಹುತೇಕ ಅವರ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದ ವರ್ಗದ ಸ್ಥಿತಿಗತಿಗಳನ್ನು ಕಣ್ಣಾರೆಕೊಂಡವರು. ಮಲೆನಾಡಿನ ತಪ್ಪಲು ಪ್ರದೇಶದಲ್ಲಿ ಕಾಫಿ, ಚಹಾ, ಮೆಣಸು ಬಿಡಿಸುವ ತೋಟದ ಆಳುಗಳು, ಅಡಿಕೆಗಳನ್ನು ಕೊಯ್ಲು ಮಾಡುವ, ತೆಂಗಿನ ಗಿಡವನ್ನು ಏರಿ ತೆಂಗಿನಕಾಯಿ ಹರಿಯುವ… ಇಂತಹ ಹಲವು ವೈವಿಧ್ಯಮಯವಾದ ಬೆವರಿನ ಶ್ರಮ ಸಂಸ್ಕೃತಿಯ ಕೂಲಿ ಆಳುಗಳು ಅವರ ಕಣ್ಮುಂದೆಯೇ ಇದುದ್ದರಿಂದ ಅವರ ನೋವು ನಲಿವುಗಳ ಪರಿಚಯವಾಗುತ್ತವೆ. ಕುವೆಂಪುರವರು ಹಾಗಾಗಿಯೇ ಶ್ರಮ ಸಂಸ್ಕೃತಿಗೆ ಒತ್ತು ಕೊಟ್ಟವರು.
“ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ..” ಎನ್ನುವ ಜಗದ ನುಡಿಗೆ ಕಿವಿ ಆದವರು. ಹೃದಯ ತೆರೆದವರು. ಅವರ ಬರಹಗಳಲ್ಲಿ “ಕೃಷಿಕರನ್ನೇ ಯೋಗಿ” ಎಂದು ಕರೆದವರು.
“ನೇಗಿಲ ಹಿಡಿದ ಹೊಲದೊಳು…” ಎನ್ನುವ ರೈತಗೀತೆಯನ್ನು ಕಟ್ಟಿಕೊಟ್ಟವರು. ರೈತರ ನೋವು ನಲಿವುಗಳಿಗೆ ಸ್ಪಂದಿಸಿದವರು. “ಆಡು ಮುಟ್ಟದ ಸೊಪ್ಪಿಲ್ಲ : ಕುವೆಂಪು ಬರೆಯದ ಸಾಹಿತ್ಯ ಬರಹದ ಪ್ರಕಾರವಿಲ್ಲ..” ಎನ್ನಬಹುದು. ಮಕ್ಕಳ ಗೀತೆಗಳು, ನಾಟಕಗಳು, ಬೃಹತ್ ಪ್ರಮಾಣದ ಮಹಾಕಾವ್ಯ ರಾಮಾಯಣ, ಅನೇಕ ಕವನ ಸಂಕಲನಗಳು, ಜೀವನ ಚರಿತ್ರೆ, ವಿಶ್ವ ಭಾತ್ರತ್ವವನ್ನು ಸಾರುವ ವಿಶ್ವ ಸಾಮರಸ್ಯದ ಸಂದೇಶಗಳ ಕಾವ್ಯಗಳು, ಮಲೆನಾಡಿನ ನೋವು ನಲಿವುಗಳನ್ನು, ಸಮಸ್ಯೆಗಳನ್ನು, ಸೌಂದರ್ಯವನ್ನು ಅಲ್ಲಿನ ಜನಜೀವನ ಪರಿಚಯ ಮಾಡುವ ಅಲ್ಲಿಯ ಅನೇಕ ಪಾತ್ರ ಚಿತ್ರಣಗಳು ಕಟ್ಟಿಕೊಡುವ ‘ಮಲೆಗಳಲ್ಲಿ ಮದುಮಗಳು’ ಎನ್ನುವ ಬೃಹತ್ ಕಾದಂಬರಿ ಅಂತಹ ಅನೇಕ ಕಾದಂಬರಿಗಳ ಓದುಗರ ಹೃದಯವನ್ನು ಅರಳಿಸುತ್ತವೆ. ಅವರ ಗದ್ದೆ ಮತ್ತು ಮನೆಯಲ್ಲಿ ಆಳುಮಗನಾಗಿ ದುಡಿಯುತ್ತಿದ್ದ ‘ಮಂಜಣ್ಣ’ ನಂತಹ ಅನೇಕ ಪಾತ್ರ ಚಿತ್ರಣಗಳು ಅವರ ಅನೇಕ ಕಥೆಗಳಲ್ಲಿ ಬಂದು ಹೋಗಿವೆ.
“ಮಹಾಕಾವ್ಯದ ಕಾಲ ಮುಗಿದು ಹೋಯಿತು..” ಎನ್ನುವ ಕಾಲಘಟ್ಟದಲ್ಲಿಯೇ ಕುವೆಂಪುರವರು ಶ್ರಮ ಸಂಸ್ಕೃತಿ ಮತ್ತು ತಳ ಸಮುದಾಯಗಳ ಪರಂಪರೆಯನ್ನು ವರ್ಣಿಸುವ ಮತ್ತು ಭಾರತ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶ್ರೀರಾಮಾಯಣ ದರ್ಶನಂ ಎನ್ನುವ ಮಹಾ ಕಾವ್ಯವನ್ನು ಕೊಟ್ಟು ಎಲ್ಲರಿಗೂ ನಿಬ್ಬೆರಗಾಗುವಂತೆ ಮಾಡಿದವರು. ಈ ಮಹಾನ್ ಕೃತಿಗೆ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯ. ಹಾಗಾಗಿಯೇ ಅವರು ನಮ್ಮ ನಡುವಿನ “ಜಗದ ಕವಿ, ಯುಗದ ಕವಿಯಾಗಿ” ಸದಾ ನಮ್ಮ ಹೃನ್ಮಮನಗಳಲ್ಲಿ ಪ್ರೀತಿಯ ಧಾರೆಯನ್ನು ಎರೆಯುತ್ತಿದ್ದಾರೆ.
ಕುವೆಂಪುರವರ ಪ್ರಕೃತಿ ಪ್ರೇಮ, ಆರ್ಥಿಕ ಸಮಾನತವಾದಿತನ, ಹಾಗೆಯೇ ಆದರ್ಶವಾದಿಯೂ ಕೂಡ ಹೌದು ಗಾಂಧೀಜಿಯವರ ಆದರ್ಶದ ಪರಿಕಲ್ಪನೆಗಳು, ವಿಶ್ವಭಾತೃತ್ವದ ತತ್ವಗಳು ಕುವೆಂಪುರವರ ಬರಹಗಳಲ್ಲಿ ನಾವು ಕಾಣಬಹುದಾಗಿದೆ. ಅವರ ಬದುಕು ಮತ್ತು ಆದರ್ಶಗಳು ಮುಂದುವರಿದ ಭಾಗವಾಗಿ ಅವರ ಮಕ್ಕಳ ಜೀವನದಲ್ಲಿಯೂ ನಾವು ನೋಡಬಹುದಾಗಿದೆ. ಸ್ವತಃ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕೇ ನಮಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಎಲ್ಲಾ ಬರಹಗಾರರಿಗಿಂತ, ಕವಿಗಳಿಗಿಂತ, ಸಾಹಿತಿಗಳಿಗಿಂತ ಕುವೆಂಪುರವರು ಹೀಗಾಗಿಯೇ ನಮಗೆ ವಿಭಿನ್ನ ವ್ಯಕ್ತಿತ್ವದಿಂದಾಗಿ ಆದರ್ಶವಾಗುತ್ತಾರೆ.
“ಓ ನನ್ನ ಚೇತನ ಆಗು ನೀ ಅನಿಕೇತನ…” ಎನ್ನುವ ವಿಶ್ವ ಸಂದೇಶ ಸಾರುವ ಅವರ ವಿಚಾರ ಕ್ರಾಂತಿಯ ಸಾರಗಳು ಎಲ್ಲರೆದೆಯಲ್ಲಿ ಮೂಡುವಂತಾದರೆ, ಕುವೆಂಪುರವರ ವಿಭಿನ್ನ ಹಾದಿಯ ಹೆಜ್ಜೆ ಗುರುತುಗಳಲ್ಲಿ ನಾವು ಮುನ್ನೆಡೆಯಬೇಕಾಗಿದೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕವಿ ಸಂಗಾತಿ