ಗಾಲಿಬ್‌ ಜನ್ಮದಿನಕ್ಕೊಂದು ವಿಶೇಷ ಗಜಲ್-ರತ್ನರಾಯಮಲ್ಲ

ಅನುದಿನ ಹೊಸ ಹೊಸ ಪಾಠಗಳನ್ನು ಕಲಿಸುತಿದ್ದಿಯಾ ಗಾಲಿಬ್
ನಮ್ಮವರಿಂದಾಗುವ ನೋವುಗಳನ್ನು ಮರಿಸುತಿದ್ದಿಯಾ ಗಾಲಿಬ್

ಗಾಲಿಬ್ ಎಂಬುದೇ ನನಗೊಂದು ಸಂಜೀವಿನಿ ಬರಹದಲೆಯಲಿ
ಷೇರ್ -ಶಾಯರಿಯಿಂದ ನೀನು ಹುಚ್ಚು ಹಿಡಿಸುತಿದ್ದಿಯಾ ಗಾಲಿಬ್

ಬದುಕಿನ ಏರಿಳಿತದಲಿ ನಿನ್ನ ಜೀವನವೇ ಸುಂದರ ಪ್ರಯೋಗ ಶಾಲೆ
ಕಂಬನಿ ಕಡಲಲಿ ಒಲವಿಂದ ಕೈ ಹಿಡಿದು ನಗಿಸುತಿದ್ದಿಯಾ ಗಾಲಿಬ್

ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದು
ಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್

ಹತಾಶೆಯ ಒಡಲಲಿ ಮಲ್ಲಿಗೆಯ ಸುಮಕೆ ನೀರುಣಿಸಿ ಪೋಷಿಸಿರುವೆ
ನಿನ್ನ ಬಾಳ ಪುಟಗಳಿಂದ ಮಹಾಕಾವ್ಯವನು ಓದಿಸುತಿದ್ದಿಯಾ ಗಾಲಿಬ್


Leave a Reply

Back To Top