ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಮಾತನಾಡಲು ಸಾಕಷ್ಟು ಮಾತುಗಳಿದ್ದವು
ಆದರೆ ನಾವು ಮೌನವಾಗುತ್ತ ಹೋದೆವು
ಜೊತೆಗುಳಿಯಲು ಸಾಕಷ್ಟು ಕಾರಣಗಳಿದ್ದವು
ಆದರೆ ನಾವು ದೂರವಾಗುತ್ತಾ ಹೋದೆವು
ನಾನೆಂಬ ಅಹಮ್ಮಿಗೆ ಬಲಿಯಾಯಿತು
ನಮ್ಮಿಬ್ಬರ ಒಲವು
ಹಂಚಿಕೊಳ್ಳಲು ಸಾಕಷ್ಟು ಭಾವನೆಗಳಿದ್ದವು
ಆದರೆ ನಾವು ಭಾರವಾಗುತ್ತಾ ಹೋದೆವು
ಸುಮ್ ಸುಮ್ಮನೆ ಈ ಜಗವು ನಮ್ಮನ್ನು
ಸೋಲಿಸಿ ಬೀಗಿತು
ಪ್ರೀತಿ ಗೆಲ್ಲಲು ಸ್ವಲ್ಪ ಮೃದುವಾಗಬೇಕಿತ್ತು
ಆದರೆ ನಾವು ಕಠೋರವಾಗುತ್ತ ಹೋದೆವು
ಕ್ಷಮೆಯ ಕೋರಿಕೆ ಬೇಕಿತ್ತು ಮತ್ತೆ
ಬಾಂಧವ್ಯ ಅರಳಲು
ನಾಲ್ಕಾರು ನೆನಪುಗಳಲ್ಲಾದರೂ ತೇಲಿ ಬಿಡಬೇಕಿತ್ತು
ಆದರೆ ನಾವು ಜಡವಾಗುತ್ತ ಹೋದೆವು
ವಾಣಿಯ ಒಲವಿಗೆ ಅದ್ಯಾರ ದೃಷ್ಠಿ ತಾಕಿತೋ
ಏನೋ ನಾ ಕಾಣೆ ,
ಬಂಧಿಸಿದರೂ ಸುಖವಾಗಿತ್ತು ಆ ಬಂಧ
ಆದರೆ ನಾವು ಮುಕ್ತವಾಗುತ್ತ ಹೋದೆವು
ವಾಣಿ ಯಡಹಳ್ಳಿಮಠ