
ಅಂಕಣ ಸಂಗಾತಿ
ಒಲುಮೆ ಘಮ
ಜಯಶ್ರೀ ಅಬ್ಬಿಗೇರಿ
ಜೊತೆ ಜೊತೆಯಲಿ

ಇತ್ತೀಚಿಗೆ ಯಾವುದರಲ್ಲೂ ಗಮನವಿಲ್ಲ. ಯಾವುದೋ ಗುಂಗಿನಲ್ಲಿ ಕಳೆದು ಹೋಗಿರ್ತಿಯಾ. ಏನೇ ಹೇಳಿದರೂ ಅಸಹನೆ ತೋರಸ್ತಿಯಾ. ಕಿರಿಕಿರಿ ಮಾಡ್ಕೊಳ್ತಿಯಾ. ಆಫೀಸಿಗೂ ಸರಿಯಾಗಿ ಹೋಗ್ತಿಲ್ಲ. ಏನಾಗಿದೆ ನಿನಗೆ? ನಿನ್ನ ತಲೆಯಲ್ಲಿ ಏನು ಓಡ್ತಾಯಿದೆ? ಅಮ್ಮ ನನಗೆ ಸಣ್ಣಗೆ ಗದರಿದಳು. ಎಷ್ಟು ಸೊರಗಿ ಹೋಗಿದಿಯಾ ನಿನಗೆ ನಿನ್ನ ಬಗ್ಗೆ ಗಮನ ಇಲ್ಲ. ಸರಿಯಾಗಿ ಊಟವನ್ನೂ ಮಾಡ್ತಿಲ್ಲ. ನಿನಗೇನು ಬೇಕು ಹೇಳು ತಂದು ಕೊಡುವೆ. ಆದರೆ ನೀನೆಂದೂ ಹೀಗಿರಬೇಡ. ಹೆತ್ತ ಕರುಳಿದು ಚುರುಕ್ ಅನ್ನುತ್ತೆ. ಅಂತ ದಯನೀಯವಾಗಿ ಹೇಳಿದಳು ಅಮ್ಮ. ಮೊದಲೇ ಕೆಂಡದಷ್ಟು ಕೋಪದಲ್ಲಿದ್ದವಳಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು. ಅಮ್ಮನ ಮಾತು ನಡದೇ ಇತ್ತು. ಮಾತಿಗೆ ಕಿವಿಗೊಡದೇ ದಬ ದಬ ಹೆಜ್ಜೆ ಹಾಕುತ್ತ ರೂಮಿನಿಂದ ಹಾಲ್‌ಗೆ ಬಂದೆ.
‘ಪ್ರೀತಿ ನಶೆಯಲ್ಲಿದ್ದಾಗ ಜಗತ್ತೇ ಕಾಣೋದಿಲ್ಲ ಅಂತ ಹಿರಿಯರು ಹೇಳಿದ ಮಾತು ನಿನಗೀಗ ಅರ್ಥವಾಗಲ್ಲ. ಬಿಸಿರಕ್ತ ಏನು ಬೇಕಾದರೂ ಮಾಡಿಸುತ್ತೆ. ಪ್ರೀತಿನೇ ಬೇರೆ ಜೀವನವೇ ಬೇರೆ ಅಂತ ವಾಸ್ತವ ಗೊತ್ತಾಗುವ ಹೊತ್ತಿಗೆ ತಡವಾಗಿರುತ್ತೆ ಅನ್ನೋ ಮ್ಯಾಚುರಿಟಿ ನಿನಗಿನ್ನೂ ಬಂದಿಲ್ಲ. ಮಾಡರ್ನ್ ಲ್ಯಾವಿಷ್ ಲೈಫ್ ಸೈಲ್‌ಗೆ ಮಾರು ಹೋಗಿದಿಯಾ.’ ಅಂದಳು ಅಕ್ಕ ಅನುಷ್ಕಾ.ಅವರಿಬ್ಬರ ಮಾತು ಅತ್ಯಂತ ದುಃಖ ತಂದಿತ್ತು. ಅರಿವೇ ಇಲ್ಲದೇ ಕಣ್ಣ ಕೊಳ ತುಂಬಿ ತುಟುಕಿ ಫಳ್ ಅಂತ ತೊಟ್ಟಿಕ್ಕಿತು. ಅವರಿಗೇನು ಗೊತ್ತು ನನ್ನೆದೆಯಲ್ಲಿರುವ ವಿರಹ ವೇದನೆ? ಎಂದಿತು ಪ್ರಾಯದ ಮನಸ್ಸು. ತಲೆ ತುಂಬ ಸಾವಿರಸಾವಿರ ಪ್ರಶ್ನೆಗಳು ತುಂಬಿದ್ದವು. ಎದೆಯು ಗೊಂದಲದ ಗೂಡಾಗಿತ್ತು. ನಾನೇನು ತಪ್ಪು ಮಾಡಿದಿನಿ ಅಂತ ನನಗೀ ಶಿಕ್ಷೆ? ನನ್ನ ನೋವಿಗೆ ಕಿವಿಯಾಗುವ ತಾಳ್ಮೆ ಯಾರಿಗೂ ಇಲ್ಲ ಅಂತ ಯೋಚಿಸುತ್ತಿದ್ದಾಗಲೇ ನನ್ನ ಮುದ್ದಾದ ಕೆನ್ನೆಯ ಮೇಲೆ ನನಗರಿವಿಲ್ಲದೆ ಕಣ್ಣ ಹನಿಗಳು ಒಂದೊಂದೇ ಪಟಪಟನೆ ಜಾರಿ ಕೆಳಗೆ ಬಿದ್ದವು. ಆಗಲೇ ನಿನ್ನೊಲವು ಚೆಲುವಿನ ನಿಲುವು ನೆನಪಾಯಿತು.

ಎತ್ತರದ ನಿಲುವಿನ ಹೈದ ನೀನು. ಎತ್ತರಕ್ಕೆ ತಕ್ಕಂತೆ ಮೈಕಟ್ಟು. ಚಂದನದ ಮೈಬಣ್ಣ, ಕೋಲು ಮುಖ, ಹೊಳೆವ ಕಂಗಳು ಉದ್ದನೆಯ ಚೂಪಾದ ಮೂಗು, ಅದರಡಿಯಲ್ಲಿ ಟ್ರಿಮ್ ಮಾಡಿದ ಕಪ್ಪನೆಯ ಹುರಿಮೀಸೆ, ಮೀಸೆಯ ಕೆಳಗೆ ಸದಾ ಮಂದಹಾಸ ಸೂಸುವ ಚಂದದ ಅದರಗಳ ಅದ್ವಿತೀಯ ಸುಂದರ. ಎಂಥ ಸುಂದರಿಯನ್ನು ಆಕರ್ಷಿಸುವ ಹರವಾದ ಎದೆಯ ಚೆಲುವ. ಒಂದೇ ಸಾಲಿನಲ್ಲಿ ಹೇಳುವಾದದರೆ, ಹರೆಯದ ಹುಡುಗಿಯರೆಲ್ಲ ಕನಸಿನಲ್ಲಿ ಕಾಣುವ ರೋಮ್ಯಾಂಟಕ್ ಯಂಗ್ ಬಾಯ್. ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ ನಿನ್ನದು. ಪ್ರಭಾವಿ ಕುಟುಂಬಕ್ಕೆ ಸೇರಿದರೂ ನಿನ್ನ ಸರಳತೆ ಗಮನಾರ್ಹ.
ನಿನ್ನ ಹೃದಯದಲ್ಲಿ ನನ್ನ ಬಿಟ್ಟರೆ ಬೇರೆ ಯಾರಿಗೂ ಜಾಗ ಇಲ್ಲ. ಆ ಬ್ರಹ್ಮ ಬಂದರೂ ಇದನ್ನು ಬದಲಾಯಿಸೋಕೆ ಸಾಧ್ಯವಿಲ್ಲ. ಅಂತ ನನಗೆ ಚೆನ್ನಾಗಿ ಗೊತ್ತು. ನೀನು ನನ್ನವನೆ ಯಾವತ್ತೂ ಅಂತನೂ ಗೊತ್ತು. ಮುದ್ದು ಮುದ್ದಾಗಿರುವ ನಿನ್ನ, ಮೂರು ಹೊತ್ತು ಮುದ್ದು ಮಾಡುತ್ತ ಕಣ್ಣಲ್ಲೇ ಕಣ್ಣಿಟ್ಟು ನೋಡಕೊಳ್ತಿನಿ. ಜೊತೆಯಲಿ ಜೊತೆ ಜೊತೆಯಲಿ ಇರ್ತಿನಿ ಹೀಗೆ ಎಂದು. ಈ ಪ್ರೀತಿಗೆ ಹ್ಞೂಂ ಅನ್ನೇ ಭಲೇ ಕನ್ನಡತಿ. ಅಂತ ನನ್ನ ನವಿರಾದ ಕೆನ್ನೆಯನ್ನು ನಯವಾಗಿ ಹಿಂಡಿದೆ ನಿನ್ನ ಚೇಂಬರ್‌ನಲ್ಲಿ. ನಿನ್ನೀ ಒತ್ತಾಯಕ್ಕೆ ಕಾಯುತ್ತಿದ್ದವಳಂತೆ ತಕ್ಷಣವೇ ಇಂಗ್ಲೀಷಿನ ಮೂರು ಪದಗಳನ್ನು (ಐಲವ್ಯೂ) ನಾಚುತ್ತ ನುಲಿಯುತ್ತ ನುಲಿದೆ. ಅಂತೂ ಇಂತೂ ಕ್ರಿಕೆಟ್ ಮ್ಯಾಚಿನ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಸಿಕ್ಸ್ ಬಾರಿಸಿ ಗೆದ್ದಂತಾಯಿತು ನನ್ನ ಸ್ಥಿತಿ. ಖುಷಿಯಿಂದ ಕುಣಿಯುವ ಕ್ರಿಕೆಟ್ ಪ್ರೇಮಿಯಂತೆ ನೀ ಕುಣಿದೆ ಕುಪ್ಪಳಿಸಿದೆ.
ನಿನ್ನೀ ಸುಂದರ ಮಿನುಗುವ ಕಂಗಳನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನಿಸುತ್ತೆ ಹಾರಿಕಾ. ಪಟಪಟನೆ ಬಡಿಯುವ ಪುಟ್ಟ ಚಿಟ್ಟೆಯ ಹಾಗಿವೆ ನಿನ್ನ ಕಣ್ರೆಪ್ಪೆಗಳು. ಗುಲಾಬಿ ಬಣ್ಣದ ತೆಳುವಾದ ತುಟಿಗಳು ಮೊಗ್ಗಿನಂತೆ ಅರೆ ಬೀರಿದಂತಿವೆ.ಮುತ್ತಿಗೆ ಆಹ್ವಾನ ನೀಡುತ್ತಿವೆ. ಪೋರಿ. ಮೃದುವಾದ ನಾಜೂಕಾದ ಅದರುವ ಪಕ್ಕೆಳೆಗಳ ರಸಭರಿತ ತುಟಿಗಳನ್ನು ಕಂಡ ನಾನು ಮಧು ಹೀರಲಾಗದೇ ವಿಲವಿಲ ಒದ್ದಾಡುವ ದುಂಬಿಯಾಗಿರುವೆ ಎಂದು ಪಾರ್ಕಿನಲ್ಲಿ ಭೇಟಿಯಾದಾಗೊಮ್ಮೆ ಛೇಡಿಸುತ್ತಿದ್ದೆ.
ಅದೊಂದು ಸಂಜೆ ಆಫೀಸಿನಲ್ಲಿ ಹೆಚ್ಚು ಕೆಲಸವಿಲ್ಲವಾದ್ದರಿಂದ ಕೆಲ ಕಾಲ ಪಂಚ ತಾರಾ ಹೊಟೆಲ್ಲಿಗೆ ನನ್ನ ನೀ ಕರೆದೆ. ಕಂಪನಿ ಮಾಲಿಕನೊಂದಿಗೆ ಹಾರಿಕಾ ಇಂದು. ಎಂದು ನನ್ನ ಆಪ್ತ ಗೆಳತಿ ಅದಿತಿ ಕಾಲೆಳೆದಳು. ಫ್ರೆಶ್ ಅಪ್‌ಗೆಂದು ಕರೆದೊಯ್ದ ಕೋಣೆಯಲ್ಲಿ ಮಬ್ಬಾದ ಬೆಳಕಿತ್ತು. ಮೆಲ್ಲಗೆ ನನ್ನ ಹಿಂದೆ ಬಂದು ಮೆತ್ತಗೆ ಭುಜದ ಮೇಲೆ ಕೈ ಹಾಕಿದೆ. ತಕ್ಷಣವೇ ರೋಮಾಂಚಿತಳಾದ ನಾನು ತಿರುಗಿ ನಿನ್ನ ಅಪ್ಪಿಕೊಂಡೆ. ಲೋಕದ ಪರಿವೇ ಇಲ್ಲದೇ ತಬ್ಬಿಕೊಂಡೇ ಇದ್ದ ನನಗೆ ಪ್ರತಿಯೊಂದು ನರನಾಡಿಯಲ್ಲೂ ವಿದ್ಯುತ್ ಸಂಚಾರವಾಯಿತು. ನೀ ಮೆಲ್ಲನೇ ತುಟಿಯ ಹತ್ತಿರ ಬಂದು ತುಸು ನಾಚಿಕೆಯಿಂದ ನಿಧಾನವಾಗಿ ನಿನ್ನ ಅದರಗಳಿಂದ ಮುದ್ರೆಯೊತ್ತಿದೆ. ಇದು ಮೊದಲ ಬಾರಿಗೆ ಪ್ರೀತಿಸಿದ ಜೀವದ ಮೊದಲ ಚುಂಬನವಾಗಿದ್ದರಿಂದ ನಾ ಸಂಕೋಚದ ಮುದ್ದೆಯಾಗಿದ್ದೆ. ಇಷ್ಟಗಲಕ್ಕೆ ತೆರೆದ ಕಣ್ಣುಗಳಿಂದ ನಿನ್ನನ್ನೇ ದಿಟ್ಟಿಸುತ್ತ ಪಕ್ಕನೇ ನನ್ನ ತುಟಿಗಳನ್ನು ನಾನೇ ಕಚ್ಚಿಕೊಂಡೆ. ಕಣ್ಮುಚ್ಚಿ ಶರಣಾಗಿ ಅದರಗಳನ್ನು ನಿನಗೊಪ್ಪಿಸಿಬಿಟ್ಟೆ. ಮದವೇರಿದಂತೆ, ಜಿದ್ದಿಗೆ ಬಿದ್ದವರಂತೆ ಅದರಗಳಿಗೆ ಅದರಗಳನು ಜೋಡಿಸಿದೆವು. ಇಬ್ಬರೂ ಚುಂಬನದ ನಶೆಯಲ್ಲಿ ಮಿಂದೆದ್ದೆವು. ಮೊದಲ ಸಿಹಿ ಚುಂಬನದ ಮಳೆಗೆ ಹೆದರಿದ ಹರಿಣಿಯಾಂತಾಗಿದ್ದೆ.
ಸಹಜವಾಗಿ ಈರ್ವರ ಅದರಗಳು ತೊಯ್ದು ತೊಪ್ಪೆಯಾಗಿದ್ದವು. ತಟ್ಟನೆ ವಾಸ್ತವಕ್ಕೆ ಬಂದೆವು. ಬಟ್ಟೆ ಸರಿ ಮಾಡಿಕೊಳ್ಳುತ್ತ ತುಸು ದೂರ ನಿಂತೆ. ಮುತ್ತಿನ ಗಮ್ಮತ್ತಿನಲ್ಲಿ ಅದರಕ್ಕೆ ಅದರ ಅದೆಷ್ಟು ಹೊತ್ತು ಬೆರೆಸಿದ್ದೆವೋ ಗೊತ್ತೆ ಆಗಲಿಲ್ಲ. ಮುತ್ತಿನ ಮತ್ತೇರಿದಂತೆ ದಿಡೀರನೇ ನಿನ್ನ ಕಡೆ ನನ್ನ ಬರಸೆಳೆದೆ ಸೀದಾ ನಾನು ನಿನ್ನ ತೋಳ ತೆಕ್ಕೆಯಲ್ಲಿ ಬಿದ್ದೆ. ಬಾಹು ಬಂಧನದಲ್ಲಿ ಬಂಧಿಯಾಗಿದ್ದೆ ಬೆಚ್ಚನೆಯ ಪ್ರೀತಿಗೆ ಕ್ಷಣ ಕ್ಷಣ ಕರಗುತ್ತಿದ್ದೆ. ಆ ಕ್ಷಣ ನನಗೆ ಏನೂ ತೋಚದೇ ಕಣ್ಮಿಟುಕಿಸಿದೆ. ನಿಯಂತ್ರಣ ತಪ್ಪಿ ಹೀಗೆಲ್ಲ ಆಗುತ್ತೆ ಅಂತ ಗೊತ್ತೇ ಇರಲಿಲ್ಲ ಎನ್ನುತ್ತ ನಾಲಿಗೆ ಕಚ್ಚಿ ಮೆಲ್ಲನೇ ಮೆಲುದನಿಯಲ್ಲಿ ಹೇಳಿದೆ. ಇಷ್ಟೆಲ್ಲ ಆಗಿದ್ದು ಮಧುಪಾನ ಮಾಡಿದ್ದು ಇಬ್ಬರಲ್ಲೂ ಸಂತೋಷದ ಸಂತೃಪ್ತಿಯ ಭಾವವನ್ನು ತುಂಬಿ ತುಳುಕುವಂತೆ ಮಾಡಿತ್ತು. ಎಂದೂ ಈ ತರಹ ಪ್ರೀತಿ ಅನುಭವಿಸದ ಜೀವ ಝಲ್ಲೆನಿಸುವ ಅನುಭೂತಿಯದು.

ಈ ನಡುವೆ ನೀ ಮೈಗೆ ಪೂಸಿದ ದುಬಾರಿ ಸುವಾಸಿತ ಸುಗಂಧ ದ್ರವ್ಯ ರೂಮಿನ ತುಂಬಾ ಹರಿದಾಡುತ್ತಲೇ ಇತ್ತು. ಕಪ್ಪು ಹಸಿರಿನ ಸೀರೆಗೆ ನಾ ತೊಟ್ಟ ಬಂಗಾರ ಬಣ್ಣದ ರವಿಕೆಯ ಮೇಲೆ ನಿನ್ನ ಕೈ ಜಾರಿದಂತಹ ಅನುಭವವಾಯಿತು. ತಕ್ಷಣ ನೀನು ಸ್ಸಾರಿ, ನನಗೆ ಗೊತ್ತಿಲ್ಲದೇ ಹಾಗಾಯ್ತು. ಮನದ ಕುದುರೆ ಲಂಗು ಲಗಾಮಿಲ್ಲದೇ ಎತ್ತೆತ್ತಲೋ ಓಡಿತು ಅದಕ್ಕೆ ಹಾಗಾಯ್ತು. ನನ್ನ ಇಂಟೆನ್ಷನ್ ಅದಾಗಿರಲಿಲ್ಲ. ಎಂದು ಹಿಂದೆ ಸರಿದೆ. ಪ್ಲೀಜ್ ಫರಗಿವ್ ಮೀ, ಇದು ನಮ್ಮ ಸಂಸ್ಕೃತಿಗೆ ಶೋಭೆ ತರುವ ಸಂಗತಿಯಲ್ಲ. ಅಷ್ಟೇ ಅಲ್ಲ ಅದರಲ್ಲಿ ಅಪಾಯವೂ ಇದೆ. ಎನ್ನುತ್ತ ನನ್ನ ಕೈ ಬೆರಳುಗಳಿಗೆ ನಿನ್ನ ಬೆರಳುಗಳನ್ನು ಸಿಕ್ಕಿಸಿ ದಡದಡನೆ ಕೆಳಗಿಳಿದು ಬೈಕ್‌ನತ್ತ ಕರೆದೊಯ್ದೆ. ಮನೆಯತ್ತ ಹೋಗಲು ಅನುವಾದೆ. ನಾನು ನಿನ್ನ ಬಗ್ಗೆ ತಪ್ಪು ತಿಳಿದಿದೇನೋ ಎಂದು ಹೇಳಲಾಗದ ಸಂಕಟ ನಿನ್ನಲ್ಲಿತ್ತು. ಏನೂ ಆಗಿಲ್ಲವೇನೋ ಎನ್ನವಂತೆ ನನ್ನ ಕೈ ನಿನ್ನ ಬಳಸಿ ಹಿಡಿದಿತ್ತು.
ಕಾಳಜಿಯಿಂದ ಮನೆ ಹತ್ತಿರ ಬಿಟ್ಟು ಹೋದಾಗಿನಿಂದ ನೀನು ಕಣ್ಣಿಗೆ ಕಣ್ಣು ಕಲೆಯಲು ಬಿಡುತ್ತಲೇ ಇಲ್ಲ. ನೀನಿತ್ತ ಪ್ರೀತಿಯ ಸವಿ ನೆನಪುಗಳನ್ನು ಧೇನಿಸುತ್ತ ಕಾಲ ಕಳೆಯುತ್ತಿರುವೆ. ಹೇಳಲಾರದ ಮನದಾಸೆಗಳು ಹಾಗೆ ಉಳಿದಿವೆ ಎಣಿಸಲಾರದ ತಾರೆಗಳಂತೆ. ಗೆಳೆಯ,ನೀನಿಲ್ಲದೆ ದುಃಖದ ಕಟ್ಟೆ ಒಡೆದು ಕಣ್ಣೀರು ಸರಸರನೆ ಜಾರಿ ಭೂಮಿಗೆ ಬೀಳುತ್ತಿವೆ. ನೀನಿತ್ತ ಮುತ್ತಿನ ಸರ ಹರಿದು ಭೂಮಿಗೆ ಬಿದ್ದಂತೆ. ನನ್ನ ಭಾವಿ ಅತ್ತೆ ಮಾವನನ್ನು ಭೇಟಿ ಮಾಡಿದ ನನ್ನವ್ವ, ನಮ್ಮಿಬ್ಬರ ಮದುವೆಯ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಿದಳು. ಮುಂದಿನ ರವಿವಾರವೇ ಮದುವೆ. ಅಂದಿನ ರಾತ್ರಿಯೇ ನಮಗೆ ಪ್ರಥಮ ರಾತ್ರಿ ಅಂತ ಅಕ್ಕ ಛೇಡಿಸಿದಳು. ದಿನ ರಾತ್ರಿಯೂ ಪ್ರಥಮ ರಾತ್ರಿ ಸವಿಯಲು ಸಜ್ಜಾಗಿರು. ತುದಿಗಾಲಲ್ಲಿ ಕಾಯುತಿರುವೆ. ಹೆಜ್ಜೆಯಲ್ಲಿ ಲಜ್ಜೆ ಬೆರೆಸಿ ನಿನ್ನ ಬೆರೆಯಲು. ನಿನ್ನಾಸೆಯಂತೆ ಜೋಡಿಹಕ್ಕಿಗಳ ಪ್ರಣಯಪ್ರಸಂಗ ಮುಂದುವರೆಯಲಿ ಸಾಲು ಸಾಲು ಬೆವರ ಹನಿಗಳ ಲೀಲೆ ಪ್ರಣಯದಲ್ಲಿ ರವಿಕೆಯಿಲ್ಲದ ಎದೆಯ ಮೇಲೆ. ಸಾಗುತಲಿರಲಿ ಜೀವನ ಪೂರ್ತಿ ಜೋಡಿ ಹಕ್ಕಿಗಳ ಚರಮ ಸುಖದ ಮಾಲೆ.
ಜಯಶ್ರೀ ಅಬ್ಬಿಗೇರಿ

Love story has full of Shrungar ras
Beautiful and romantic. Fine
U have moved up in the ladder in my eyes by this interesting write up
Keep it up