ಕಾವ್ಯ ಸಂಗಾತಿ
ಬಾಪು ಖಾಡೆ
ʼಮಗುವಾಗಿದ್ದಾನೆ ಅಜ್ಜʼ
ಜಗದ ಜಂಜಡ ಎಲ್ಲ ಮರೆತು
ಮೊಮ್ಮಗನೊಂದಿಗೆ ಕೂಡಿ ಬೆರೆತು
ಆಡುತ್ತಾ ಹಾಡುತ್ತಾ ನಕ್ಕು ನಲಿಯುತ್ತಾ
ಈಗ ಮಗುವಾಗಿದ್ದಾನೆ ಅಜ್ಜ
ದಿನ ಬೆಳಗಾದರೆ ಆಫೀಸಿಗೆ ಓಡುವ
ಫೈಲುಗಳ ನಡುವೆ ಕಳೆದು ಹೋಗುವ
ಆತಂಕ ದುಗುಡ ಧಾವಂತವಿಲ್ಲ
ಮೊಮ್ಮಗ ಅತ್ತಾಗ ರಮಿಸಿ, ನಕ್ಕಾಗ ಮುತ್ತಿಟ್ಟು
ಮುಗ್ಧ ಮಗುವಿನ ತುಂಟಾಟದೊಡನೆ
ಈಗ ಮಗುವಾಗಿದ್ದಾನೆ ಅಜ್ಜ
ಹಸಿವಾದರೂ ತಿನ್ನದೇ ರಂಪ ಮಾಡುವ
ಅರಳು ಹುರಿದಂತೆ ಮಾತನಾಡುವ
ಮುದ್ದು ಮಗುವಿಗೆ ಉಣಿಸಿ ಸ್ನಾನ ಮಾಡಿಸಿ
ಬಟ್ಟೆ ತೊಡಿಸಿ ಉದ್ಯಾನ ನಗರ ಸುತ್ತಿಸಿ ಹೊಸ ಚಿಗುರಿಗೆ ಹಳೆಯ ಬೇರಾಗಿ
ಮೇಣದಂತೆ ತಾನುರಿದು ಮನೆಗೆ ಬೆಳಕಾಗಿ
ಬಾಳ ಸಂಜೆಯ ಇಳಿ ಹೊತ್ತಿನಲ್ಲಿ
ಈಗ ಮಗುವಾಗಿದ್ದಾನೆ ಅಜ್ಜ
ಬಾಪು ಖಾಡೆ