ಕಾವ್ಯ ಸಂಗಾತಿ
ಗಂಗಾ ಚಕ್ರಸಾಲಿ
ವಿರಾಮ ಬೇಕಿತ್ತು
ಕನಸಿನ ಕ್ಯಾನ್ವಾಸಿನೊಳಗೆ
ಅದೆಷ್ಟು ರಂಗುರಂಗಿನ ಚಿತ್ರಗಳು
ಅಡ್ಡ,ಉದ್ದ,ವಕ್ರ
ಹೇಗಿದ್ದರೂ ಚೆಂದವೆಂದುಕೊಳ್ಳುವ
ಅವಳ ಕನಸಿಗೆ ವಿರಾಮ ಬೇಕಿತ್ತು|
ಭೇಟಿ ಗಳಿಗೆಯನ್ನು
ಕ್ಯಾಲೆಂಡರ್ ಪಟದಿಂದ ಕಿತ್ತು,
ಎದೆಯ ಭಿತ್ತಿಯಲ್ಲಿ
ಅಂಟಿಸಿಕೊಂಡಿದ್ದ ಅವಳಿಗೆ
ಒಂದು ವಿರಾಮ ಬೇಕಿತ್ತು|
ಭವಿಷ್ಯದ ಮಾತುಗಳಿಗೆ
ಪುಕ್ಕ ಹಚ್ಚಿ ಹಾರುತ
ಖುಷಿಯ ಹಕ್ಕಿಯಾಗುವ
ಅವಳ ರೆಕ್ಕೆಗಳಿಗೆ
ತುಸು ವಿರಾಮ ಬೇಕಿತ್ತು |
ನೋಡುವ ನೋಟದಲ್ಲಿ
ಆಡುವ ಮಾತಿನಲ್ಲಿ
ಪ್ರೀತಿಯ ಸೌಧ ಕಟ್ಟಿದ
ಅವಳಿಗೆ ಸತ್ಯ ತಿಳಿಯಲು
ಒಂದು ವಿರಾಮ ಬೇಕಿತ್ತು|
ನಿಜ.. ತನ್ನ ಬದುಕನ್ನೇ
ಅರ್ಪಿಸಬೇಕೆಂದಿದ್ದ
ಅವಳಿಗೆ,ಆ ನಿರ್ಲಕ್ಷದ
ನೋಟವ ಅರಗಿಸಿಕೊಳ್ಳಲು
ದೀರ್ಘ ವಿರಾಮವೇ ಬೇಕಿತ್ತು|
ಜಗವೆಲ್ಲ ಸುಳ್ಳುಗಳ
ಪರದೆ ಹೊದ್ದಿರುವಾಗ
ಸತ್ಯವು ಒಂಟಿಯಂತೆ
ಕನವರಿಸುತ್ತದೆ..ಬಿಕ್ಕುತ್ತದೆ..
ಅದಕ್ಕೂ ವಿರಾಮ ಬೇಕಿದೆಯಂತೆ|
ಗಂಗಾ ಚಕ್ರಸಾಲಿ