ಡಾ. ನಿರ್ಮಲಾ ಬಟ್ಟಲ ಅವರ ಕವಿತೆ-ನಮ್ಮ ರೈತ

ಸಮಬಾಳು ಸಮಪಾಲು
ನೀತಿ ನಂಬಿದವ
ಮನುಕುಲದ ಅನ್ನ ಬ್ರಹ್ಮನಿವ
ನಮ್ಮ ರೈತ

ಇಲ್ಲ ಅವಗೆ ಶಾಂತಿ ನೆಮ್ಮದಿ
ಬೆಳೆಗೆ ಕೈ ತುಂಬಾ ಬೆಲೆ
ನೀಡದು ಸರಕಾರ ಬೆಂಬಲ ಬೆಲೆ
ಹೂಡಬೇಕು ಹರತಾಳ
ಸತ್ಯಾಗ್ರಹ ತನ್ನ ಹಕ್ಕಿಗಾಗಿ
ನಮ್ಮ ರೈತ

ಮಾಡಬೇಕು ಉಪವಾಸ
ಮಾರುಕಟ್ಟೆಗಾಗಿ ಸರಕಾರದ ನೀತಿಯ ವಿರೋಧಕ್ಕಾಗಿ
ನದಿ ನೀರಿಗಾಗಿ
ಕಾರ್ಖಾನೆಗಳ ಮುಂದೆ
ಬಾಕಿ ಬಿಲ್ ಪಾವತಿಗಾಗಿ
ನಮ್ಮ ರೈತ

ಕಳಪೆ ಬೀಜ ಗೊಬ್ಬರ
ಹಾಕಿ ಮೋಸ ಹೋದ
ಬೆಳೆವ ಭೂಮಿ ಬರಡು ಬೀಳು
ಮನೆಯ ಮುಂದೆ
ಸಾಲ ವಸೂಲಾತಿ ಆಳು
ಕಂಡು ಅಳುಕುವ
ನಮ್ಮ ರೈತ

ರೈತನ ಬೆನ್ನೆಲುಬು ಮುರಿದು
ಮೆರೆವ ಸಕ್ಕರೆ ಮಾತಾಡುವ
ಕಾರ್ಖಾನೆ ಮಾಲೀಕರ
ವೇದಿಕೆಯ ಭಾಷಣ
ರಾಜಕೀಯ ಪುಡಾರಿಗಳ ಘೋಷಣ
ಹೌಹಾರುವ
ನಮ್ಮ ರೈತ

ಕುಸಿದ ಆತ್ಮ ಬಲದಿ
ಭೂಮಿಗಿಳಿಯು
ಆಕಾಶಕ್ಕೆ ಮುಖ ಮಾಡಿ
ಮೊರೆಯಿಡುವ
ಕಪ್ಪುಗಟ್ಟಿದ ಮೋಡ ಕಂಡು
ಪಂಚಭೂತಗಳಿಗೆ ನಮಿಸಿ
ಮತ್ತೆ ನೇಗಿಲು ಹಿಡಿಯುವ
ನಮ್ಮ ರೈತ


Leave a Reply

Back To Top