ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ

ಅಪ್ಪ-ಅಮ್ಮನಾಸೆಗೆ ತನ್ನಾಸೆಯ
ಬದಿಗೊತ್ತಿದ ಬದುಕಿಗೆ
ಭರವಸೆಯ ಒಲವು ಬೇಕಿದೆ ಗೆಳೆಯಾ….

ಹೊತ್ತಿನೊತ್ತಿಗೆ ಸುತ್ತಿದ ಜೀವಕೆ ಹಿಡಿ ಪ್ರೀತಿಯೊರತು,ಅದೇ
ನಕಲು ಮಾತುಗಳು ಸವಕಳಾಗಿವೆ ಗೆಳೆಯಾ…

ಮುಟ್ಟಿನಿಂದ ಹುಟ್ಟಿ ಮುಟ್ಟಾದವಳ ಹಟ್ಟಿಯಿಂದೊರವಿಟ್ಟವರ
ಮೆಟ್ಟಿ ನಿಲ್ಲುವ ಸಾಂತ್ವಾನ ಸಾಕು ಗೆಳೆಯಾ….

ಕತ್ತಲೆಯ ಬೆತ್ತಲೆಯೊಳಗೆ
ಸತ್ತ ಕನಸುಗಳ ಆರ್ತನಾದ
ಆಲಿಸುವ ಆಪ್ತನೊಬ್ಬ ಬೇಕಿದೆ ಗೆಳೆಯಾ….

ಹೆಣ್ಣು ದೇವರೆಂದವರು
ಕಣ್ಬಿಡುವ ಮುಂಚೆ ಮಣ್ಣು ಮಾಡಿದವರ
ಮನ ಕರಗಿಸುವ ಕಾಲ ಬರಬೇಕು ಗೆಳೆಯಾ….

ಹೆಣ್ಣೆಂದರೇ, ದೇವರಲ್ಲ, ಕರುಣೆ ಸಹನೆಯಲ್ಲ, ನಿನ್ನಂತೆ ಜೀವವೆಂದು ತಿಳಿದುಬಿಡು ಗೆಳೆಯಾ….


9 thoughts on “ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ

  1. ಪ್ರತಿ ಹೆಂಗರುಳಿಗೂ ತನ್ನ ಆರ್ತನಾದವ ಆಲಿಸುವ ಆಪ್ತನೊಬ್ಬ ಬೇಕೆಂಬುದನ್ನ ತುಂಬಾ ಸುಂದರವಾಗಿ ಅರುಹಿದ್ದೀರಿ ಕವಿತೆ ಅತ್ಯಾಪ್ತವಾಗಿದೆ

      1. ಅದ್ಭುತವಾದ ಪದ ಸಂಪತ್ತನ್ನು ಒಳಗೊಂಡ , ಹೆಣ್ಣು ಜೀವದ ಆರ್ತನಾದವ ಮನಮುಟ್ಟುವಂತೆ ಬರದ ಸಾಲುಗಳು. …… ಗುರೂಜಿ

Leave a Reply

Back To Top