ʼನಕ್ಕು ನಲಿಯೋಣʼ ಸುಜಾತಾ ಪ್ರಸಾದ್‌ ಅವರ ಹಾಸ್ಯಲೇಖನ

ಹಾಸ್ಯ, ಎಂದೊಡನೆ ನೆನಪಾಗುವುದು ನನ್ನ ಗೆಳತಿ ಉಮಾ ಮಹೇಶ್ ಅವರ ಮನೆಯಲ್ಲಿ ಸುಮಾರು 25 ವರ್ಷಗಳ ಹಿಂದೆ ನಡೆದ ಘಟನೆ.  
 ನನ್ನ ಗೆಳತಿ ಉಮಾ ಮಹೇಶ್ ಬಲು ಜಾಣೆ ಜೊತೆಗೆ ಒಳ್ಳೆಯ ಮಾತುಗಾರ್ತಿ.  ಮಾತಿನಲ್ಲಿ ಎಲ್ಲರನ್ನೂ ನಗಿಸುತ್ತಿರುತ್ತಾಳೆ. ಜೊತೆಗೆ ಯಾರಾದರೂ ಅವಳಿಗೆ ಏನಾದರೂ ಅಂದರೆ ಹಾಸ್ಯವಾಗಿಯೇ ಮಾತಿನಲ್ಲೇ  ಅವರಿಗೆ ಚುರುಕು  ಮುಟ್ಟುಸುತ್ತಾಳೆ..

 ಒಮ್ಮೆ ಅವರ ಮನೆಯಲ್ಲಿ ಯಾವುದೋ ಒಂದು ಸಮಾರಂಭಕ್ಕೆ ನೆಂಟರು,  ಸ್ನೇಹಿತರು ಎಲ್ಲರೂ ಸೇರಿದ್ವಿ. ನನ್ನ ಗೆಳತಿ ಉಮಾ ಹೆಸರು ಮದುವೆಗೆ ಮುಂಚೆ  ಉಮಾಮಹೇಶ್ವರಿ ಅಂತ ಇತ್ತು. ಅವಳ ಗಂಡನ ಹೆಸರು ಮಹೇಶ್..ಆದ್ದರಿಂದ ಮದುವೆಯ ನಂತರ ಅವಳ ಹೆಸರನ್ನು ಉಮಾ ಮಹೇಶ್ ಎಂದು  ಬದಲಾಯಿಸಿಕೊಂಡಳು… ಅಂದು ಅವರ ಮನೆಯಲ್ಲಿ ಎಲ್ಲರೂ ಸೇರಿದ್ದಾಗ, ಈ ವಿಷಯ ಪ್ರಸ್ತಾಪ ಆಯಿತು.  ಅವಳ ನಾದಿನಿ ಸ್ವಲ್ಪ ಕುಬುದ್ಧಿಯವಳು. ಆಗ ಅವಳು ಉಮಾಳನ್ನು ಕುರಿತು ‘ಅತ್ತಿಗೆ ನೀವು ಅಣ್ಣನನ್ನು ಮದುವೆಯಾದ ಮೇಲೆ  ಉಮಾಮಹೇಶ್ವರಿ ಯಿಂದ  ಉಮಾಮಹೇಶ್ ಅಂತ ಆದಿರಿ…ನಮ್ಮ ಅಣ್ಣನನ್ನು ಮದುವೆ ಮಾಡಿಕೊಂಡ ಮೇಲೆ ನಿಮ್ಮ worry (ವರಿ ) ಹೊರಟು ಹೋಗಿ ಆರಾಮವಾಗಿದ್ದೀರಾ ಅಲ್ವಾ,  ಎಂದು ಕಿಚಲಾಯಿಸಿದಳು. ತಕ್ಷಣವೇ ನನ್ನ ಗೆಳತಿ ಉಮಾ ತನ್ನ ನಾದಿನಿಯನ್ನು ಕುರಿತು,   ‘ಹಾಗಲ್ಲ,  ಮದುವೆಗೆ ಮೊದಲು,  ನನ್ನ ಹೆಸರಿನಲ್ಲಿ ಮಾತ್ರ worry (ವರಿ )ಇತ್ತು. ಆದರೆ ನಿಮ್ಮ ಅಣ್ಣನನ್ನು ಮದುವೆಯಾದ ಮೇಲೆ ಹೆಸರಲ್ಲಿ ಮಾತ್ರ ಇದ್ದ ‘ವರಿ’ ಹೋಯಿತು, ಆದರೆ  ಎಲ್ಲ worry ನನ್ನ ತಲೆಯನ್ನು ತುಂಬಿಕೊಂಡಿತು’.. ಎಂದಳು. ಆಗ ಅಲ್ಲಿದವರೆಲ್ಲ ಹೋ.. ಹೋ… ಎಂದು ನಗಾಡತೊಡಗಿದರು 

 ತಕ್ಷಣವೇ ಅಲ್ಲಿಯೇ ಇದ್ದ ಅವರ ಅತ್ತೆ ಉಮಾ ಗೆ ಹೇಳಿದರು,  ‘ಆದರೂ ನೀನು ಏನೇ ಹೇಳು ನನ್ನ ಮಗನನ್ನು ಮದುವೆ ಮಾಡಿಕೊಳ್ಳೋಕೆ ನೀನು ಬಹಳ ಪುಣ್ಯ ಮಾಡಿದ್ದೆ. ಯಾಕೆಂದ್ರೆ ಅವನು ಬಹಳ ಒಳ್ಳೆಯವನು, ಎಲ್ಲಾ ನನ್ನ ಥರಾ ನೇ.. ಎಲ್ಲಾ ವಿಷಯದಲ್ಲೂ ನನ್ನನ್ನೇ ಹೋಲಿಕೊಂಡಿದ್ದಾನೆ. ತಿನ್ನುವ, ಕುಡಿಯುವ ಎಲ್ಲಾ ವಿಷಯದಲ್ಲೂ ಕೂಡ ನನ್ನದೆ ತದ್ರೂಪ, ಯಾಕೆಂದರೆ ನಿನ್ನ ಗಂಡ ನನ್ನ ಹೊಟ್ಟೆಯಲ್ಲಿದ್ದಾಗ ನಾನು ಏನೆಲ್ಲಾ ಇಷ್ಟಪಟ್ಟು ತಿಂತಾ ಇದ್ನೋ,  ಹಾಗೆಯೇ ನಾನು ಏನೆಲ್ಲಾ ಮಾಡ್ತಾ ಇದ್ದನೋ, ಅದೆಲ್ಲ ಈಗಲೂ ಅವನು ಇಷ್ಟ ಪಡ್ತಾನೆ.. ನನ್ನ ಮಗ ನನ್ನ ಹಾಗೇನೇ’.. ಎಂದು ಜಂಭ ವಾಗಿ ಎಲ್ಲರ ಮುಂದೆ ಹೇಳಿಕೊಂಡರು… ತಕ್ಷಣವೇ ನನ್ನ ಗೆಳತಿ ಉಮಾ, ಅವರ ಅತ್ತೆಯನ್ನು ಕುರಿತು, ” ಹೌದಾ ಅತ್ತೆ,  ಎಲ್ಲ ವಿಷಯದಲ್ಲೂ ಸರಿ, ಆದರೆ ನೀವು ಪ್ರೆಗ್ನೆಂಟ್ ಆಗಿದ್ದಾಗ ಎಣ್ಣೆ ಮತ್ತು ಸಿಗರೇಟ್ ನಿಂದ ಸ್ವಲ್ಪನಾದ್ರೂ ದೂರ ಇರಬೇಕಿತ್ತು “ಎನ್ನಬೇಕೇ… ಮತ್ತೊಮ್ಮೆ ಅಲ್ಲಿದ್ದವರೆಲ್ಲರೂ ಗೊಳ್ಳ್ ಎಂದು ನಕ್ಕರು. ಆಗ ಅವರ ಅತ್ತೆ ಮುಖ ನೋಡಬೇಕಿತ್ತು, ಪಾಪ….

————————

Leave a Reply

Back To Top