ಕಾವ್ಯ ಸಂಗಾತಿ
ಟಿ.ಪಿ.ಉಮೇಶ್ ಹೊಳಲ್ಕೆರೆ
ʼನಾನಿಲ್ಲದ ಕಾವ್ಯವ ಕೊಡಿ!ʼ
ಯಾರನ್ನು ಓದಿದರೂ ನಾನೇ ಕಾಣುವೆ
ನಾನೇ ನನ್ನನ್ನ ಆವರಿಸಿಕೊಳ್ಳುವೆ
ಎಷ್ಟಂತ ಓದಲಿ ನಿಮ್ಮಲ್ಲಿ ನನ್ನನ್ನೇ
ಎಷ್ಟಂತ ಭಜಿಸಲಿ ನನ್ನ ಚರಿತೆಯನ್ನೇ
ನೀವಾಗಿರುವ ಪದಗಳ ತಿದ್ದಿ ತೀಡಿ
ನಾನಿಲ್ಲದ ಕಾವ್ಯವ ನನಗೆ ಕೊಡಿ
ನಾನಿಲ್ಲದ ಕಾಲವ ನನಗೆ ನೀಡಿ
ನಿಮ್ಮಲ್ಲು ನನ್ನನ್ನೇ ಓದುವುದು ಸದ್ಯ ಒಂದು
ವಿದ್ರೋಹವೇ ಸರಿ
ಅನುಭವದ ಬೆಸುಗೆ ಎಂದರೂ ಕಾಲದ ವ್ಯರ್ಥ
ಲೋಲುಪತೆಯೇ ಸರಿ
ನಾನು ನನ್ನಲ್ಲಿಯೇ ಇರುವಾಗ ನಿಮ್ಮನ್ನು
ಹೇಗೆ ತಾಕಿಕೊಂಡು ಉಳಿದು ಬೆಳೆದು ಬಂದೆ
ಇದು ಶುದ್ಧ ವ್ಯಕ್ತಿ ಚೋರತನವಲ್ಲದೇ ಮತ್ತೇನಲ್ಲ
ಅಹಂ ಬ್ರಹ್ಮಾಸ್ಮಿಯ ಶಂಖ ಮೊಳಗಿಸಬೇಡಿ
ಕೇಳಿ ಕೇಳಿ ಕಿವಿ ಕಿಲುಬು ಹೊದ್ದಿವೆ
ನಾಲಿಗೆಗೊಂದಿಷ್ಟು ಗೋಂದು
ಮನಸಿಗೊಂದಿಷ್ಟು ಮರೆವು
ಮೈಯಿಗೊಂದಿಷ್ಟು ಪೆಡಸು ಹೊದ್ದಬೇಕು
ಬಿಡಲು ನಿಮ್ಮನ್ನ
ಕೈಬಿಡಲು ನನ್ನನ್ನ
ನಾನೇಕೆ ಯಾರನ್ನೋ ಓದಬೇಕು ನನ್ನನ್ನ ಕಾಣಲು
ನನ್ನದೇ ಇಷ್ಟ ಕಷ್ಟ ನಿಕೃಷ್ಟಗಳನೆಲ್ಲ
ಹಮ್ಮು ಬಿಮ್ಮು ಬಿಸುಪುಗಳನೆಲ್ಲ
ಕನಸು ತೆವಲು ತೇಕರಿಕೆಗಳನೆಲ್ಲ
ನಿಮ್ಮ ಮೇಲೆ ಆರೋಪಿಸುವುದು ಅವಿವೇಕವಿದು
ಕಂಡ ಕಂಡಷ್ಟೇ ಸತ್ಯ ವಿವೇಕವಿದು
ನನ್ನ ನಾನೇ ಬದುಕುವಾಗ
ಬದುಕಿದಂತೆ ಬರೆದುಕೊಳ್ಳುವೆನೀಗ
ಬರೆದ ಪದಗಳಲ್ಲಿ ನನ್ನ ಕಾಣುವೆನಾಗ
ಆದರಿದು ಚೋದ್ಯವೇ
ನಿಮಗಾಗಬಹುದು ಕುಚೋದ್ಯವೇ
ನನ್ನ ಬರಹಗಳಲಿ ನೀವೇ ಬರುವಿರಲ್ಲ
ಇದ್ದು ಬಿದ್ದು ಆಡಿ ಕಾಡಿ ಬೆಳೆಯುವಿರಲ್ಲ
ನನ್ನ ಕಡೆದು ಕುಡಿದು ಕುದಿಯುವಿರಲ್ಲ
ನನ್ನ ಬರೆಯದ ನಾನು ಬರಹಗಾರನಲ್ಲ
ನಿಮ್ಮ ಬರೆಯದ ನೀವು ಬರಹಗಾರರಲ್ಲ
ಎಲ್ಲರೂ ಕಡ ತಂದ ತಲೆಯ ಕೂಲಿಗಳು
ಕಾಣದ ಅಂಕೆಯ ಕೈಗಳ ಅಂಕುಶಗಳು
ನಿಮಗೆ ನನ್ನ ನನಗೆ ನಿಮ್ಮ
ಏರಿಸಿ ಇಳಿಸಿ ಇಳಿಸಿ ಏರಿಸಿ
ಅಳಿಸಿ ಏಳಿಸಿ ಸರಿಸಿ ಕಳಿಸುವುದೇ ಬರಹ ಕಾಯಕ
ಅದೋ ಬಂದಾಗಲೇ ಬರೆದಿರಬಹುದೇನೋ ಜಾತಕ
ಆದರೂ ಬರೆಯಬೇಡಿ ನನ್ನನ್ನ
ಬರೆದರೆ ಬಿಡಲಾರೆ ನಿಮ್ಮನ್ನ
ನಾನು ಮನುಷ್ಯ
ಯಾರನ್ನು ಓದುವುದಿಲ್ಲ ಅಷ್ಟೇ
ಗೊತ್ತು ನನಗೆ ನಿಮ್ಮದೂ ಮಾತು ಇಷ್ಟೇ
ಟಿ.ಪಿ.ಉಮೇಶ್ ಹೊಳಲ್ಕೆರೆ
Nice poem sir