ಚಳಿಗಾಲದ ವಿಶೇಷ
ಚಳಿ ಪದ್ಯೋತ್ಸವ
ಶಾಲಿನಿ ಕೆಮ್ಮಣ್ಣು
ಶರದ್ ಶೃಂಗಾರ
ಮತ್ತೆ ಮರಳಿತು ಚಳಿಗಾಲ
ಮೈ ಮನದ ರಸಿಕತೆಯ ಹೂಕಾಲ
ರಂಗಿನ ಕನಸುಗಳ ಬಿರಿಯುತಲಿ
ತುಂಬುತ ಹೊಸತನದ ಆನಂದ ನನ್ನಲ್ಲಿ
ನನ್ನ ಮನ ಮುದಗೊಂಡು ನಿನ್ನ ಜಪ ಮಾಡಿದೆ
ತನು ಮತ್ತೆ ನಿನ್ನ ಕಾದಿದೆ ಸಂಗ ಸುಖವ ಬಯಸಿದೆ
ಲಗಾಮಿಲ್ಲದೆ ಸಾಗುತ್ತಿರುವ ಓಟಕ್ಕೀಗ
ನಿನ್ನ ಹಿಡಿತದ ಲಂಗರು ಬೇಕಿದೆ
ಚಂಚಲ ಮನದ ಆಸೆಗಳಿಗೆ ನಿನ್ನೊಪ್ಪಿಗೆಯ ಮದ್ದು ನೀಡಿ ಮತ್ತು ಬರಿಸಬೇಕಿದೆ
ಅಧರಗಳು ತನನಂ ಮಿಡಿದು
ನಿನ್ನೊಲವ ಚುಂಬನಕೆ ರಸದುಂಬಿ ಮತ್ತೆ ಕಾಯುತ್ತಿದೆ
ಹುಚ್ಚೆದ್ದು ಕುಟುಕಿದ ನಿನ್ನಧರಗಳ
ಸಿಹಿ ನೋವು ಮತ್ತೆ ಅನುಭವಿಸುವ ಆಸೆ ನನ್ನದೆ
ನಡುವ ನಡುಗಿಸುವ ನಿನ್ನ ಬಾಹು ಬಂಧನ ಬೇಕಿದೆ
ಬಿಸಿಯುಸಿರ ಸ್ಪರ್ಶದಿ ಕೆನ್ನೆಯ ಕುಳಿಗಳು ಕಿವಿ ಸಂಧಿಗಳು ನಿಮಿರಲು ಹಾತೊರೆಯುತ್ತಿದೆ
ತೋಳ್ಗಳ ಸೆರೆಯಲ್ಲಿ ಹಿಡಿತದ ಬಿಗಿಯೊಳಗೆ ಕಟಿಯಲ್ಲಿ ಬೆವರ ಸಾಲು ಮೂಡಿಸಬೇಕಿದೆ
ಬಿಗಿದೆದೆಯ ಸಡಿಲಿಸುವ ನಿನ್ನ
ಬೆರಳುಗಳ ಕರಾಮತ್ತು ಕಾಡುತ್ತಿದೆ
ತಕರಾರು ಮಾಡದೆ ನಿನ್ನಾಸೆಗಳಿಗೆ ಸಹಕರಿಸಿ ಸಮ್ಮತಿಯ ಸಹಿ ಹಾಕುವೆನು
ನೀನೆನ್ನ ಕೇಂದ್ರತಂತಿಯ ಮೀಟುತಿರೆ ಬೆನ್ನು ಹುರಿಯೊಳಗಿಂದ ನಾಭಿಯೆಡೆ ನೋವ ಸೆಳೆಯು ಹರಿಯಬೇಕಿದೆ
ಉನ್ಮಾದದ ಶಿಖರವೇರಿ ಶೃಂಗಾರದಲಿ ಮಿಂದೇಳಲು ಅಣಿಯಾಗಿಹೆನು
ಒಪ್ಪಿಗೆಯ ನೀಡಿರುವೆ ತಪ್ಪದೆ ಬಂದುಬಿಡು
ಸದ್ದಿಲ್ಲದೆ ಆಕ್ರಮಿಸಿ ನನ್ನ ಮೌನದಿ ಬಂಧಿಸಿ ಬಿಡು
ತುಸು ಮುಂದೆ ಕ್ರಮಿಸಿಬಿಡು ಪ್ರೇಮಾಂಕುಶದಿ ಸೋಲಿಸಿ ನಿನ್ನ ವಶದಿ ರಾಗ ತೃಷೆಯ ತೀರಿಸಿ ಬಿಡು
ಶಾಲಿನಿ ಕೆಮ್ಮಣ್ಣು