ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಅಕ್ಕಮಹಾದೇವಿಯವರ ವಚನ
ಗಗನದ ಗುಂಪ ಚಂದ್ರಮನು ಬಲ್ಲುದಲ್ಲದೇ
ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ
ನದಿಯ ಗುಂಪ ತಾವರೆ ಬಲ್ಲುದಲ್ಲದೇ
ತಡಿಯಲ್ಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯ
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೇ
ಕಡೆಯಲಿದ್ದಾಡುವ ನೊರಜು ಬಲ್ಲುದೇ ಅಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣರ ನಿಲುವು ನೀವೇ ಬಲ್ಲಿರಲ್ಲದೇ
ಈ ಕೋಣನ ಮೈಯ ಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
______
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೇ ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ
ನಾ ಮೇಲಿನವನು ಬಲು ದೊಡ್ಡವನೆಂದು ಮೆರೆದಾಡಬೇಡ ಗೆಳೆಯ ನಿನಗಿಂತ ದೊಡ್ಡವರು ಇದ್ದಾರು ಭುವಿಯಲಿ ಸುಳ್ಳು ಭ್ರಮೆಯಲಿ ನೀ ಮುಳುಗಬೇಡ .
ಎಂದು ಕವನ ರಚಿಸಿದ ಶ್ರೀಮತಿ ಬಿ, ಟಿ ,ಲಲಿತಾ ನಾಯಕ ಅವರ ಈ ಪದ್ಯದ ಸಾಲುಗಳು ಎಷ್ಟೊಂದು ಅರ್ಥ ಪೂರ್ಣ ನೋಡಿ .
ನಾವು ನೀವುಗಳೆಲ್ಲ ಒಂದಲ್ಲ ಒಂದು ವಿಷಯಕ್ಕೆ ಗರ್ವ ಪಟ್ಟುಕೊಳ್ಳುತ್ತೇವೆ. ನಾನೇ ಶ್ರೇಷ್ಠ ಎಂದು ಅಹಂಕಾರದಿಂದ ಮೆರೆಯುತ್ತೇವೆ.
ಈ ಹಗಲು ಹಾಗೂ ಇರುಳನ್ನು ಬೆಳಗುವ ಸೂರ್ಯ ಹಾಗೂ ಚಂದ್ರರು, ನಾವು ದೊಡ್ಡವರು ಎಂದು ಹೇಳಲು ಸಾಧ್ಯವೇ ? ಅದು ಎಂದಿಗೂ ಸಾಧ್ಯವಿಲ್ಲ ತಾನೇ ?
ಈ ಆಕಾಶದ ಅಳತೆಯನ್ನು ,ಅದರ ವಿಶಾಲತೆಯನ್ನು ಚಂದ್ರಮನು ಮಾತ್ರ ತಿಳಿದುಕೊಂಡಿದ್ದಾನೆ, ಹೊರತು ಹಾರಾಡುವ ಪಕ್ಷಿಯಾದ ಹದ್ದಿಗೇನು ಗೊತ್ತು? ಬಾನುವಿನ ವಿಶಾಲತೆ ಎಷ್ಟು ಎನ್ನುವುದು .
ಅಕ್ಕ ಹೇಳುವ ಈ ವಚನದ ಅರ್ಥ ಏನೆಂದರೆ ,
ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳುವುದು ಶರಣರಿಗೆ ಮಾತ್ರ. ಅಂಥಹ ಶರಣರ ನಡೆ ಮತ್ತು ನುಡಿಗಳು ಗಗನದಷ್ಟೇ ವಿಶಾಲವಾದ ಗುಣಗಳಾಗಿವೆ. ಎನ್ನುವ ಅರ್ಥವನ್ನು ನಾವು ಇಲ್ಲಿ ತಿಳಿಯಬಹುದಾಗಿದೆ .
ನದಿಯ ಗುಂಪ ತಾವರೆ ಬಲ್ಲುದಲ್ಲದೇ ತಡಿಯಲ್ಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯ
ಕಮಲದ ಹೂ ತಾನು ಕೆಸರಿನಲ್ಲಿ ಕೊಳಚಾದ ನೀರಿನಲ್ಲಿ ಇದ್ದರೂ ಕೂಡಾ ,ಅದು ತನ್ನ ಮೈಗೆ ಕೊಳಕನ್ನು ಹಚ್ಚಿಕೊಳ್ಳದೇ ,ಸುಂದರವಾಗಿ ಅರಳಿ ಭಗವಂತನ ಪಾದಕ್ಕೆ ಅರ್ಪಿತಗೊಳ್ಳುವ ಅಪರೂಪದ ಕಮಲದ ಗುಣ ಕಮಲಕ್ಕೆ. ಇಂಥಹ ನೋಡಲು ಅಪರೂಪವಾದ ಈ ಕಮಲ ,
ನದಿಯ ಆಳವನ್ನು ಅದರ ಅಗಲವನ್ನು ಕಮಲವೇ ಬಲ್ಲುದೇ ಹೊರತು ನದಿಯ ದಡದಲ್ಲಿದ್ದ, ತಂಗಡಿ ಎನ್ನುವ ಹೂವಿನ ಗಿಡವು ತಿಳಿಯಲಾರದು .
ಅಂದರೆ ಶರಣರ ಗುಣ ಶರಣರಿಗೆ ಮಾತ್ರ ತಿಳಿಯುತ್ತದೆ .ಶರಣರಲ್ಲದವರಿಗೆ ಶರಣರ ಮಹಿಮೆ ಶರಣರ ವ್ಯಕ್ತಿತ್ವದ ಗುಣವನ್ನು ಅರಿತು ಅವರ ಜೊತೆ ಬೆರೆತು ನಡೆಯುವ ಜನ ತೀರ ಕಡಿಮೆ .
ಪುಷ್ಪದ ಪರಿಮಳವ ದುಂಬಿ ಬಲ್ಲುದಲ್ಲದೇ ಕಡೆಯಲಿದ್ದಾಡುವ ನೊರಜು ಬಲ್ಲುದೇ ಅಯ್ಯ ಚನ್ನಮಲ್ಲಿಕಾರ್ಜುನಯ್ಯ
ಪುಷ್ಪದ ಮರಿಮಳವನ್ನು ದುಂಬಿ ಮಾತ್ರ ಬಲ್ಲುದು .ಆ ಹೂವಿನ ಪಕ್ಕ ಕುಳಿತು ,ಅಲ್ಲೇ ಹಾರಾಡುವ ನೊರಜಿಗೆ ಆ ಹೂವಿನ ಪರಿಮಳವ ಅರಿಯಲು ಆಗಲಾರದು .
ಶಿವಶರಣರ ಮನವನ್ನು ಶಿವ ಶರಣರು ಮಾತ್ರ ಬಲ್ಲರು .ಶರಣರಲ್ಲದವರು ಅಲ್ಲ. ಶರಣರ ತತ್ವ ,ಸಿದ್ಧಾಂತ ,ಅವರ ಅನುಭಾವದ ಮಾತುಗಳನ್ನು ಶರಣರು ಅನುಸ್ವಾದಿಸುವರೇ ಹೊರತು, ಬೇರೆಯವರು ಅಲ್ಲ. ಅವರು ಶರಣರ ಪಕ್ಕ ಸುಳಿದಾಡುವ ನೊರಜುಗಳು .
ನಿಮ್ಮ ಶರಣರ ನಿಲುವು ನೀವೇ ಬಲ್ಲಿರಲ್ಲದೇ ಈ ಕೋಣನ ಮೈಯ ಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
ಶರಣರು ಶುದ್ಧ ಮನದ ಕಾಯಕ ಜೀವಿಗಳು ,ಆಚಾರ ವಿಚಾರ ತತ್ವ ಸಿದ್ಧಾಂತವನ್ನು ಪರಿಪಾಲಿಸಿ ನಡೆಯುವ ನಿಷ್ಕಲ್ಮಷ ಭಾವ ವನ್ನು ಅರಿತು ಸಾಗುವ ಶರಣ ಜೀವಿಗಳು . ಓ ಚನ್ನಮಲ್ಲಿಕಾರ್ಜುನಾ ಕೋಣನ ಮೈಮೇಲೆ ಕುಳಿತುಕೊಳ್ಳುವ ಸೊಳ್ಳೆಗಳು ಹೇಗೆ ಬಲ್ಲವು .? ಈ ಭವ ಬಂಧನದ ಸಂಸಾರದ ಜಂಜಾಟದಲ್ಲಿ ಇರುವ ಅಜ್ಞಾನಿಗಳನ್ನು ನೊರಜು ಹಾಗೂ ಸೊಳ್ಳೆಗಳು ಎಂದು ಅಕ್ಕಮಹಾದೇವಿಯವರು ಉದಾಹರಣೆಗಳನ್ನು ಕೊಟ್ಟಿದ್ದು ಕಂಡು ಬಂದಿದೆ ..
ಸಾವಿತ್ರಿ ಮಹಾದೇವಪ್ಪ ಕಮಲಾಪೂರ