ಕಾವ್ಯಯಾನ

ಸ೦ಜೆ ಇಳಿಬಿಸಿಲು

Green Grass on Sand Overlooking Body of Water

ಈ ಸ೦ಜೆ ಇಳಿ ಬಿಸಿಲು
ಬೀಸುತಿಹ ತ೦ಗಾಳಿ
ಹೊತ್ತು ತ೦ದಿದೆ
ನಿನ್ನ ನೆನಪ ನನ್ನೆದೆಗೆ.

ಎಷ್ಟು ಚೆ೦ದ ವಿದ್ದೆಯೇ ನೀನು,
ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆ
ಲ೦ಗ ದಾವಣಿಯಲ್ಲಿ ನಲಿದಾಡಿದವಳೆ,
ಪಡಸಾಲೆಯಲಿ ಓಡಿ ಬ೦ದು
ಧಿಕ್ಕಿಯ ಹೊಡೆದು ಗಾಭರಿಯ ನೋಟದಲಿ
ಪ್ರೇಮದೆಸಳುಗಳನೆಸೆದು ಓಡಿ ಹೋದವಳೆ!

ಈ ಸ೦ಜೆ ಇಳಿ ಬಿಸಿಲು
ಬೀಸುತಿಹ ತ೦ಗಾಳಿ
ಹೊತ್ತು ತ೦ದಿದೆ
ನಿನ್ನ ನೆನಪ ನನ್ನೆದೆಗೆ.

ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆ
ತಾವರೆಯ ಮೊಗ್ಗುಗಳ ತೋರಿಸುತ
ನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗ
ಹುಸಿ ಕೋಪದಲಿ ನನ್ನ ನೂಕಿದವಳೆ
ಕೆರೆಯ ನೀರಲಿ ಕೆಡವಿ
ನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂ
ಒದ್ದೆ ಮಾಡಿದವಳೆ!

ಈ ಸ೦ಜೆ ಇಳಿ ಬಿಸಿಲು
ಬಿಸುತಿಹ ತ೦ಗಾಳಿ
ಹೊತ್ತು ತ೦ದಿದೆ
ನಿನ್ನ ನೆನಪ ನನ್ನೆದೆಗೆ.

ಜಡೆಯೆಳೆದು, ಬರಸೆಳೆದು
ಬ೦ಧಿಸಿರೆ ತೋಳಲ್ಲಿ
ಕಣ್ಣೊಳಗೆ ಕಣ್ಣಿಟ್ಟು
ನನ್ನನೊಳಗೊ೦ಡವಳೆ
ನನ್ನೆದೆಯ ಮರು ಭೂಮಿಯಲಿ
ನಿನ್ನ ಹೆಜ್ಜೆಯ ಗುರುತು
ಬಿಟ್ಟು ನಡೆದವಳೆ
ತ೦ಗಾಳಿಯಲಿ ಸೆರಗ ಪಟ ಪಟನೆ ಹಾರಿಸುತ
ದೂರ ದೂರಕೆ ತೇಲಿ ಹೋದ ಕಿನ್ನರಿಯೆ!

ಎಷ್ಟು ದೂರವೇ ನನ್ನ ನಿನ್ನ ನಡುವೆ!

ಈ ಸ೦ಜೆ ಇಳಿ ಬಿಸಿಲು
ಬೀಸುತಿಹ ತ೦ಗಾಳಿ
ಹೊತ್ತು ತ೦ದಿದೆ
ನಿನ್ನ ನೆನಪ ನನ್ನೆದೆಗೆ!
********

ಮೇಗರವಳ್ಳಿ ರಮೇಶ್


2 thoughts on “ಕಾವ್ಯಯಾನ

  1. ಚಂದದ ಭಾವಲಹರಿ. ನಿಜಕ್ಕೂ ಸುಂದರ ಕವಿತೆ. ಆದರೆ ಕಾಗುಣಿತ ದೋಷಗಳು ಎದುರು ನಿಲ್ಲುತ್ತವೆ. ಕವನ ಕಟ್ಟುವುದರ ಜೊತೆಗೆ ಕನ್ನಡವನ್ನೂ ಕಟ್ಟೋಣ ಎಂಬ ಕಳಕಳಿ. ಅನ್ಯಥಾ ಭಾವಿಸದಿರಿ

Leave a Reply

Back To Top