ಕಾವ್ಯಯಾನ

ಸೊಡರು

ಚಂದ್ರಪ್ರಭ .ಬಿ.


ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ
ಅದ್ದಿ ಬಂದವಳೆ…ಸಖಿ
ಅನುಪಮ..ಅಪಾರ
ನಿನ್ನ ಮಮತೆ..ಹೃದಯವಂತಿಕೆ..!

ಹಲವು ಮೈಲುಗಲ್ಲುಗಳಿಗೆ ಸಾಕ್ಷಿ
ನಿನ್ನ ನಿರ್ಗಮನ
ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ
ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ
ಏನೆಲ್ಲಕೆ ತೆರೆದುಕೊಳುವಾಸೆಗೆ
ಬಲಿತ ರೆಕ್ಕೆ
ನೀ ಹೊತ್ತು ತರುತ್ತಿದ್ದ ವೇದನೆ ಈಗ
ಕಾಡುತ್ತಿದೆ ಮಧುರ ನೆನಪಾಗಿ!

ಅಜ್ಜಿ ಅವ್ವನ ಕಾಲದಲಿ
ಅರವತ್ತರ ವರೆಗೂ
ಜತೆಯಾದವಳು ನೀ
ಅವರ ಹಿಂದೆ ಹಿಂದೆ ನಾ…
ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ?
ಮೂವ್ವತ್ತರ ಬಳಿಕ ಗೃಹಸ್ಥಾಶ್ರಮ ಸೇರಿ
ಕಳ್ಳುಬಳ್ಳಿಯಲಿ ಹೂಗಳ ನಿರೀಕ್ಷೆಯಲಿ
ಇರುವವರ ಗತಿಯೇನೆ?

ಕರುಳ ಕುಡಿಗಳಲಿ ನಿನಗದೆಷ್ಟು ಕಳಕಳಿ!
ಒಡಲಲ್ಲಿ ನಿನ್ನ ಹೊತ್ತುಕೊಂಡೇ ಹುಟ್ಟುವ ಜೀವ
ತನಗೆ ತಾನೇ ಒಂದು ಘನತೆ
ಜಗವ ಲಾಲಿಸಿ ಪಾಲಿಸುವ ಜಗನ್ಮಾತೆ ಪ್ರಕೃತಿ

ನಿನ್ನ ಸ್ರಾವ ನಿಂತು
ತಾಯ ಮಡಿಲಿಗೆ ಬಂದವರು
ಅವಳೆದೆಯ ಅಮೃತದ
ಸವಿಯುಂಡು‌ ಬೆಳೆದವರು
ಹಳಿಯುವರಲ್ಲೇ ನಿನ್ನ..!
ಪಾಪ, ಅವರ ನೋಟ ಅಷ್ಟು ಕಿರಿದು…
ನಿನಗದರ ಗೊಡವೆಯಿಲ್ಲ
ಅನಂತ ಸೃಷ್ಟಿಯ ಪೊರೆವ ಜೀವದಾಯಿನಿ
ಅತ್ತ ಗಮನಿಸಲೂ ಬಿಡುವಿಲ್ಲ ನಿನಗೆ

ನಿನ್ನ ಮಮತೆಯು ಹಾಡಿ
ತೂಗುತಿರುವ ತೊಟ್ಟಿಲು ಈ ಲೋಕ
ನಿನ್ನ ಅಂತಃಕರಣ ಹಚ್ಚಿಟ್ಟ ಸೊಡರು ಈ ಭೂಮಿ
ಅನುಗಾಲವೂ ಆಭಾರಿ ಜೀವ ಸಂಕುಲ ನಿನಗೆ

=========================

Leave a Reply

Back To Top