ಇಂದು ಶ್ರೀನಿವಾಸ್ ಅವರ ಕವಿತೆ-ನನ್ನ ನಿಲುವು..

ಯಾರನ್ನೋ ಹೊಗಳೇರಿಸಿ ಬರೆದು ಬದುಕುವುದು ನನಗೆ ಇಷ್ಟವಿಲ್ಲ.
ಮಾತುಗಳ ಬಣ್ಣದೋಕುಳಿಯಲ್ಲಿ  ನಿಮ್ಮ ಬಂಡೆ ಮನಸ್ಸು ತೋಯಿಸಿ ರಂಜಿಸುವ ಇರಾದೆಯೂ ಇಲ್ಲ.

ಆದರೂ ನನ್ನ ವ್ಯಂಗ್ಯ ಮಾತಿನ ಚೂಪುಗಳಿಂದ ನಿಮ್ಮ ಎದೆಗೆ ಇರಿದು ನಗುವ ಸ್ವಭಾವದವನಲ್ಲ.!

ಮಾತಿಗೆ ಮಾತು ಸೇರಿಸಿ ಹೊಗಳಿಕೆಯ ಬೃಂದಾವನ ನಡೆಸಿ ಅದರೊಳಗೆ ನಿಮ್ಮನ್ನು ಪ್ರತಿಷ್ಠಾಪಿಸಿ ಪೂಜಿಸಿ,ಭಜಿಸಿ ವರವ ಪಡೆಯುವ ಭಕ್ತ ನಾನಲ್ಲ.!

ಅಥವಾ
ನಿಮ್ಮ ಹಿಂದೆ ಮುಂದೆ ಸುತ್ತಿ
ನಿಮ್ಮ ಕೈಕಾಲುಗಳಿಗೆ ಸಿಕ್ಕಿ ನೀವೆಸೆಯುವ ತುಂಡು ಬಿಸ್ಕೆಟಿಗೆ ಬಾಲ ಅಲ್ಲಾಡಿಸುತ್ತ ಕಾಲ ಕಳೆಯುವುದಿಲ್ಲ!

ನಿಮ್ಮ ಬಳಿಸುಳಿದು  ನಿಮ್ಮ ಕಟವಾಯಿಯಿಂದ ಸೋರುವ  ಮಾತುಗಳಿಗೆ ಬಕೆಟ್ಟು, ಸಿಂಟೆಕ್ಸು
ಗಳನ್ನಿಡಿದು ಯಾವುದೋ ಸ್ವಾರ್ಥ ಕಾರ್ಯ ಸಾಧಿಸಬೇಕಿಲ್ಲ.!

ನಿಮ್ಮ ಕೀರಲು ಗಂಟಲಿನ  ಭರವಸೆಗಳನ್ನು ದಿಕ್ಕುದಿಕ್ಕುಗಳಿಗೆ ದಿನಕ್ಕೆ ನೂರು ಬಾರಿ ಪ್ರತಿದ್ವನಿಸುವ  ಮೈಕು ನಾನಲ್ಲ.!

ನನಗೆ ಗೊತ್ತು
ನಾನು ಬರೆಯದಿದ್ದರೆ
ಬೀಸುವ ಗಾಳಿಗೆ ತನ್ನೊಡ್ಡಿಕೊಳ್ಳದಿದ್ದರೆ
ನನ್ನ ಜೊಳ್ಳುಗಳು ಹಾರಿಹೋಗುವುದಿಲ್ಲ.
ನನ್ನ ಗಟ್ಟಿತನ ತಿಳಿಯುವುದೇ ಇಲ್ಲ.!

ಆದರೂ ಪ್ರವಾಹದ ವಿರುದ್ಧವಾಗಿ ಈಜಲು ನಿಮ್ಮ ಹೊಲಸು ನದಿಗಿಳಿಯಲು ನಾನು ಸಿದ್ದನಿಲ್ಲ.!

ನನ್ನಷ್ಟಕ್ಕೆ ನಾನಿದ್ದೇನೆ. ಬರೆಯುತ್ತೇನೆ.

ಈ ಜಗದೆಲ್ಲ ಕೊಳೆಯ ಕೊಚ್ಚಿ ತೊಳೆವೆನೆಂಬ ಭ್ರಮೆಯಿಂದಲ್ಲ.

ಬರಡು ಉತ್ತು, ಕ್ರಾಂತಿ ಬೀಜವ ಬಿತ್ತು ಮುಗಿಲ ನೋಡಿ ನೊಂದ ಕಣ್ಣಲ್ಲಿ ಕೊಂಚ ಹೊಸ ಅಸೆ ಮೂಡಿಸಲು.!
ಬೀದಿಗೆ ಬಿದ್ದ  ಅದೆಷ್ಟೋ ನನ್ನಂತವರಿಗೆ ನೆರಳಿನ ಸಣ್ಣ ಗರಿಯ ಜೋಪಡಿ ಕಟ್ಟಿಕೊಡಲು.!

ಅಲ್ಲಿ ಸಣ್ಣ ದೀಪವೊಂದು ಬೆಳಗಿಸಿಟ್ಟು
ಅದರ ಬೆಳಕಲ್ಲಿ ಅವರ ಒಣ ಮುಖದ ನಗುವನ್ನೊಮ್ಮೆ ನೋಡಲು.

ಅಲ್ಲಿ ಅವರು
ನಿಮ್ಮ ಸುಳ್ಳುಗಳ ದೌರ್ಜನ್ಯದ ಭೂಕಂಪಳಿಗೆ ಸಿಲುಕಿ ಮಣ್ಣಾದ ತನ್ನವರ ಇತಿಹಾಸ ಓದಿದರೆ ಸಾಕು.
ಅದಕ್ಕಿಂತ ನನಗಿನ್ನೇನು ಬೇಕು?.

———————-

One thought on “ಇಂದು ಶ್ರೀನಿವಾಸ್ ಅವರ ಕವಿತೆ-ನನ್ನ ನಿಲುವು..

Leave a Reply

Back To Top