ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಒಡೆದ ಹೃದಯದಲೊಂದು
ಒಡೆದ ಕನ್ನಡಿಯಲಿ ನೂರು ಪ್ರತಿಬಿಂಬ
ಮನದಲ್ಲೊಂದು ಹೊಂಗನಸು ಮೂಡಿಸಿ
ಹುಳಿಗಟ್ಟಿ ಹಳಸದೆ ಹೆಪ್ಪಾಗಿಸಿದೆ….!
ಗಾಳಿಸೀಳಿ ಹೊರಟ ಹಕ್ಕಿಯಾಗಿ
ಹಚ್ಚಿಟ್ಟ ಹಣತೆಯಾಗುರಿದು
ಬೇಗುದಿಯ ಬಾಣಲೆಯಲಿ ಬೆಂದು
ಸುಡುವ ಸೂರ್ಯನಂತಾಗಿದೆ….!
ಹರಿವ ತೊರೆಯಲ್ಲಿ ತೇಲುವ ನೌಕೆ
ದಟ್ಟಡವಿಯಲಿ ಇಣುಕುವ ಮರೀಂಚಿ
ಒಲವಯಾನದಿ ವಿರಹದ ತಾಪ
ಕೈಗೂಡದ ಅಭೀಪ್ಸೆಗಳ ಸಾಲು…!
ಇಂಚಿಂಚು ಬಿಡದೆಕೊಲ್ಲುವ ಚಾಳಿಗೆ
ಭಗ್ನಗೊಂಡು ಉದ್ವಿಗ್ನ ಸ್ಥಿತಿಯಲ್ಲಿ
ಭಾವಗಳ ಕಡಲು ವ್ಯಗ್ರ ಪ್ರಕ್ಷುಬ್ದವಾಗಿದೆ
ಒಡೆದ ಹೃದಯದಲೊಂದು ಹಸಿಕನಸು..!
ಶಂಕರಾನಂದ ಹೆಬ್ಬಾಳ