ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
![](https://sangaati.in/wp-content/uploads/2024/12/flower-7929505_640.webp)
ಬಾಜ್ ಕಾಫಿಯಾನ ಗಜಲ್ ೧೫(ಮಾತ್ರೆಗಳು ೨೪)
ಅನುರಾಗದ ಆಲಾಪವು ಅವನ ಹೃದಯ ತಟ್ಟಬೇಕು
ಸಮಾರಂಭದ ಶೋಭೆಗಾಗಿ ಚಪ್ಪಾಳೆ ತಟ್ಟಬೇಕು
ಪಕ್ಷಿಯಾಗಿ ಹಾರುತ ಈ ಜಗದ ಸೊಬಗು ಕಾಣವ ಬಯಕೆ
ಜೊತೆಯಲಿ ಶಿವ ಉಮೆಯರ ಕೈಲಾಸ ಶಿಖರ ಮುಟ್ಟಬೇಕು
ಬೆಸೆದ ತನುವಿನಲ್ಲಿ ಸಂಶಯದ ಗಾಳಿಯು ಸುಳಿಯದಿರಲಿ
ಎರಡು ಜೀವಿಯ ಮಧ್ಯೆ ಒಲವಿನ ಭರವಸೆ ಹುಟ್ಟಬೇಕು
ಬದುಕನು ಸಾಗಿಸಲು ಆಶ್ರಯಕೆ ಇರಲಿ ಪುಟ್ಟ ಗುಡಿಸಲು
ಇಳೆಯಲಿ ಜನ ಮೆಚ್ಚುವ ಪ್ರೀತಿಯ ಮಹಲು ಕಟ್ಟಬೇಕು
“ಪ್ರಭೆ”ಸಪ್ತಪದಿ ತುಳಿದು ಒಂದಾಗಿದ್ದೇವೆ ಭಯವೇಕೆ
ಅವನ ಕರುಣೆಯಲ್ಲಿ ಸಂಸಾರ ಸಾಗರ ದಾಟಬೇಕು
ಪ್ರಭಾವತಿ ಎಸ್ ದೇಸಾಯಿ
![](https://sangaati.in/wp-content/uploads/2022/10/prabhavathideasi.webp)