ಅನಸೂಯ ಜಹಗೀರದಾರ ಅವರ ಕವಿತೆ-‘ಮಾತು ಪ್ರೀತಿಯಾಗಬೇಕು’

ಖಾಯಮ್ ಆಗಿ
ಪ್ರೀತಿಸುವುದೆಂದರೆ ‌.
ಸುಲಭದ ಮಾತಲ್ಲವದು
ಮಾತು ಮಾತಿಗೂ
ನೂರೆಂಟು ಅರ್ಥ ಕಲ್ಪಿಸದೆ
ಮಾತಿನೊಳಗಣ ಮಾತಿನಂತೆ ನಡೆದು
ಮಾತಿಗೆ ಬದ್ಧರಾಗಬೇಕು

ಮುಗುಮ್ಮಾಗಿ ಇಲ್ಲದೆ
ಯತೇಚ್ಛವಾಗಿ ಬೇಕಾದಾಗ
ನಲ್ಮಾತು ಮೆಲ್ವಾತು ಸುರಿಯಬೇಕು

ಘಳಿಗೆ ಘಳಿಗೆಯೂ
ಉಪಸ್ಥಿತಿ ಅನುಪಸ್ಥಿತಿಯೂ
ಪರಸ್ಪರ ಬಿಸಿಯುಸಿರು ತಾಗುವ
ಮಾತಾಗಬೇಕು.

ಹುಸಿಯಿಲ್ಲದ ಹಸನಾದ
ಲಲ್ಲೆಯ ಪಿಸುಮಾತು
ಅಂಗ ಅಂಗದಲಿ ಸಂಗ ಸಂಗದಿ
ಸಂಪೂರ್ಣಗೊಳ್ಳಬೇಕು

ನವಿರು ಹಾಸ್ಯವೂ
ಒಳಗೊಂಡ ಸಮರಸವೂ
ಮೈ ಮನದ ಕಣ ಕಣದಲಿ
ಹರಡಬೇಕು
ರಾಗ ರಸ ಚಿಮ್ಮಬೇಕು

ಮುಂಗುರುಳು ಕಚಗುಳಿಯಲಿ
ಓಕುಳಿಯಾಗಬೇಕು ಮೊಗ
ನರ್ತಿಸಬೇಕು ನವಿಲು
ಒಡಲ ಒಲವಿನಲಿ
ಹೊತ್ತಬೇಕು ಬೆಂಕಿ ಅರಣಿ
ಬೆನ್ನ ಹುರಿಯಲಿ

ಹರಿಬಿಡಬಾರದು
ಗುಸು ಗುಸು ಗಾಳಿಮಾತು
ಸುಳಿಯಬಾರದು
ಕಳ್ಳ ಮಳ್ಳಮಾತು

ಕೆನ್ನೆ ಗದ್ದಗಳ ಹೊಲದಲಿ
ಚಿಗುರಬೇಕು ಹಸಿರು
ಮಾತಿನ ಕಾಳು ಚೆಲ್ಲಬೇಕು

ಸ್ಪರ್ಶ ಹರ್ಷ ಉನ್ಮಾದ ಉತ್ಕರ್ಷ
ಭಾಷೆಯಲ್ಲಿ ಭಾವದಲ್ಲಿ
ತಾನಾಗಿಯೇ ಒಲಿಯಬೇಕು
ಲಾಲಿತ್ಯ ನಾದವಾಗಬೇಕು

ಮಾತಿನ ಮುತ್ತುಗಳು ಚಿಪ್ಪು ಸಡಿಲಿಸಿ
ಕಣ್ಣು ಬಿಡಬೇಕು
ಸ್ಫಟಿಕದ ಹಾಗೆ ಹೊರಬೀಳಬೇಕು
ಬೆಳ್ಳನೆಯ ದೀಪ್ತಿ ಹರಡಬೇಕು

ವರಸೆಯ ಭರವಸೆಯ ಒಲವೂ
ಇನಿ ರವದ ಒಗಟುಗಳ ಒನಪೂ
ಒಂದಿನಿತೂ ಬಿಡದ
ಅಂಟಿದ ನಂಟಿನಲಿ
ಗಾಢತೆಯ ದಾರದಲಿ ಬೆಸೆದಿರಬೇಕು
ಕೋಡು ಡಿಕೋಡುಗಳಿಲ್ಲದ
ಮಾತುಗಳು
ಅನಾವರಣಗೊಳ್ಳಬೇಕು

ಯಂತ್ರ ಕುತಂತ್ರ ಸುಳಿಯದೆ
ಪರತಂತ್ರದ ಸನಿಹವಿರದೇ
ಬಂಧಿಸಬೇಕು ಆಡಿದ ಮಾತು
ಹದಿನಾರಾಳೆಯ ನೂಲಿನಲಿ

ಹಸಿಗೋಡೆಯ ಹರಳು
ಬೇಕಾರಾಗದೇ ಒತ್ತಿಕೊಳ್ಳಬೇಕು
ಉಭಯರಲಿ

ಹೊತ್ತೇರಿದಂತೆ ತುಟಿಯಂಚಿನ
ಚಿಲಕ ಸರಿಸಿ ಕಾರಂಜಿಯಾಗಬೇಕು
ಮಾತು ಪ್ರೀತಿಯಾಗಬೇಕು
ಪ್ರೀತಿ ಅನ್ನುವ ಮಾತಾಗದೇ..!!


Leave a Reply

Back To Top