ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’

ಸುತ್ತೆಲ್ಲ ಕಪ್ಪನೆ ಕವಿದ ಕಾರ್ಮೋಡ
ಮುಂದ ನಿರ್ಭಾವುಕ ವೇದನೆ
ಜಗವೆಲ್ಲ ಮೂಕ ರೋಧನ
ಅನುಭವಿಸುತ್ತಿರುವ ಭಾವದ ನಡುವೆ

ಸುssಯ್ಯೆಂದು ಬೀಸಿದ ತಂಗಾಳಿ
ಮತ್ತೆಲ್ಲೊ ಗರಿಬಿಚ್ಚಿ ನರ್ತಿಸುವ ನವಿಲು
ನೊಂದ ಮನಕೆ ತಂಪೆರೆದ ಮೇಘ ಸ್ಪರ್ಶ
ಮುಗಿಲಂಚಿಗೆ ಬಣ್ಣ ಬಳಿದ ಬಿಲ್ಲು!

ಹೀಗೆ ಅಲ್ಲೊಂದು ಹೊಸ ಹೊಳಹು
ಇಲ್ಲೊಂದು ಮೃದು ಮಧುರ ಫಲುಕು
ಸರಿದ ಮುಗಿಲು ತೆರೆದ ಬಾನು
ಎಲ್ಲೆಲ್ಲೂ ಝಗಮಗ ಬೆಳಕು

ಹೀಗೆ ಸುತ್ತೆಲ್ಲ ತಲ್ಲಣ ! ಸಿನಿಕರ
ನಡುವೆ ಅಲ್ಲಲ್ಲಿ ಆಗಾಗ ಕೋಲ್ಮಿಂಚು!
ಮೈಕೊಡವಿ ಬರುವ ಅಕ್ಕ ಮರುಹುಟ್ಟುವ
ಗಾಂಧಿ, ಬುದ್ಧ, ಬಾಬಾಸಾಹೇಬ

ಅಣ್ಣ ಬಸವಣ್ಣ ತಾಯಿ ತೆರೇಸಾ
ಕಾಲಕಾಲಕೆ ಮತ್ತೆ ಮತ್ತೆ ಹುಟ್ಟುವರು
ಹೊಸ ರೂಹಿನಿಂದ ನವ ಭಾವದಿಂದ
ಕೊಳೆಯ ತೊಳೆಯಲು ಜಗವ ಬೆಳಗಲು ….


3 thoughts on “ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’

Leave a Reply

Back To Top