ಕಾವ್ಯ ಸಂಗಾತಿ
ಮಾಲಾ ಹೆಗಡೆ
ಕನವರಿಕೆ
ಆಹ್ಲಾದದ ಪೂರ್ಣಿಮೆಯಳಿದು
ವ್ಯಾಕುಲದಮವಾಸ್ಯೆ ನಿಕಟವಾಗುತ್ತಲೇ,
ಮಾನಸ ಘಟವು
ಬಿರುಕೊಡೆದು ಅಶೃ ತರ್ಪಣವಾಗುತ್ತಿದೆ.
ಅಂತರಂಗದಂಗಳದಿ ಅನುರಾಗದ
ಅರ್ಕ ಅಸ್ತಮಿಸುವಾಗಲೇ,
ಆಪ್ತ ಆಶಾ ತೃಷೆಯೊದಗಿ
ಇಮ್ಮಡಿಯಾಗಿದೆ.
ತುಮುಲದಿ ಭಾವ ಕೊಳದ
ತಿಳಿ ಕದಡುತ್ತಿರುವಾಗಲೇ,
ಬಂಧ ಸಾಗರದಲೆಗಳು
ಉಮ್ಮಳವಾಗುತ್ತಿದೆ.
ಕಸುವಿರದೇ ಕಾಯದ ಕೊರಳು
ಕುಸಿದಿರುವಾಗಲೇ,
ಕತ್ತ ಸಿಂಗರಿಸೋ ತೊಡವು
ಸನಿಹವಾಗುತ್ತಿದೆ.
ಸಂಕಟದಿ ಒಡಲು ಹಸಿದು
ಬಳಲುವಾಗಲೇ,
ಸಾಂತ್ವನದ ಕೈತುತ್ತು
ಕೈಜಾರಿ ಬೀಳುತ್ತಿದೆ.
ಬಾಳ ಬಂಡಿಯಲಿ ನೆಮ್ಮದಿಯ
ಚೀಲ ಬರಿದಾಗುವಾಗಲೇ,
ನಂಬಿಗೆಯ ಗಾಲಿಯ ಕೀಲುಗಳು
ಸಡಿಲಾಗುತ್ತಿದೆ.
ಉತ್ಸಾಹಕೆ ಕಾರ್ಮೋಡ ಕವಿದು
ಆಶಾಕಿರಣ ಇಳಿವಾಗಲೇ,
ಜೀವನದಿ ಒಲವ ಪ್ರದೀಪದ
ತೈಲ ಇಂಗುತ್ತಿದೆ.
ಹಾರೈಕೆಗಳ ಹನಿ ಸಿಂಚನವದು
ಹೆದರಿಕೆಯ ಶಮನಿಸುವಾಗಲೇ,
ಕಮರಿದ ಹಂಬಲದ ಸಸಿ ಹೊಸದಾಗಿ ಪಲ್ಲವಿಸುತಿದೆ.
ಮಾಲಾ ಹೆಗಡೆ.