ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಹನಿಗವನಗಳು
ದುಶ್ಯಾಸನ – ಶ್ರೀ ಕೃಷ್ಣ.
ಮರದ ಎಲೆಗಳನ್ನೆಲ್ಲಾ ಬರಸೆಳೆದು ನಿರ್ವಸ್ತ್ರಗೊಳಿಸುತ್ತಿದ್ದಾನೆ
ದುಶ್ಯಾಸನ ಹೇಮಂತ.!
ಮತ್ತೆ ಚಿಗುರಿನ ಹೊಸ ಸೀರೆ ಉಡಿಸಿ
ಮಾನ ಕಾಪಾಡಲು ಖಂಡಿತ ಬರುತ್ತಾನೆ
ಶ್ರೀಕೃಷ್ಣ ವಸಂತ.!!
ಕೂದಲು.
ಕವಿಗೋಷ್ಠಿ ಮುಗಿಸಿ ಬಂದ ಗಂಡನಲ್ಲಿ
ಜಗಳವಾಡಿ ಹೆಂಡತಿ ತವರಿಗೆ ಹೋದಳು!
ಕಾರಣ ಸನ್ಮಾನಕ್ಕೆ ಹೊದಿಸಿದ ಶಾಲಿನಲ್ಲಿ
ಸಿಕ್ಕಿತ್ತು ಬಣ್ಣ ಬಳಿದ ಉದ್ದ ಕೂದಲು.!!
ಸಮಯ.
ಏಕಕಾಲಕ್ಕೆ ಎಲ್ಲದಕ್ಕೂ
ನೀನೇ ಉತ್ತರಿಸಲು
ಎಲ್ಲಿದೆ ನಿನಗೆ ಸಮಯ.!
ಮಾತನಾಡಲು ಕಾಲಕ್ಕೂ
ಅವಕಾಶ ಕೊಡು
ಕಾರಣ ಅದು ನೊಂದವರ ಗೆಳೆಯ.!
ಮೋಡಗಳು
ನೋಡಿ ಬರೀ ಮಲೆನಾಡ
ಹಸಿರ ಗಿರಿ ಮೇಲೆ
ಸುತ್ತುವುವು ಮೋಡದ
ಹಿoಡು.!
ಹುಡುಗಿಯರ ಹಾಸ್ಟೆಲಿನ
ಸುತ್ತ ಪೋಲಿ ತಿರುಗುವಂತೆ
ಹುಡುಗರ ದಂಡು.!!
ಸ್ವಾರ್ಥ ಸಂಬಂಧಗಳು.
ಜಾರಿ ಬಿದ್ದ ಮೇಲೆ ಹೂ,
ಹಣ್ಣು, ಎಲೆ, ಕೊಂಬೆ
ಯಾವುದೂ ಅಗತ್ಯವಲ್ಲ
ಮರಕ್ಕೆ.!
ತೀರಾ ತಲೆ ಕೆಡಿಸಿಕೊಳ್ಳುವುದು ಯಾಕೆ
ತಿರಸ್ಕೃತವಾದ ಪ್ರೇಮಕ್ಕೆ.!
ತೊರೆದು ಹೋದ ಸ್ವಾರ್ಥ
ಸಂಬಂಧಕ್ಕೆ.!!
ಇಂದು ಶ್ರೀನಿವಾಸ್.
Super