ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಹಾರುವ ಹಕ್ಕಿಗೂ ಗೊತ್ತಿಲ್ಲ ನೀನ್ಯಾರೆಂದು
ಹರಿವ ನೀರಿಗೂ ಗೊತ್ತಿಲ್ಲ ನೀನ್ಯಾರೆಂದು
ಕ್ಲುಪ್ತಭಾವದಿ ಸನಿಹ ಬಂದಿರುವ ರಮಣೀ
ಅರಳುವ ಮೊಗ್ಗಿಗೂ ಗೊತ್ತಿಲ್ಲ ನೀನ್ಯಾರೆಂದು
ಕಲ್ಪನೆಯ ಲೋಕಕ್ಕೂ ಸಿಗದೆ ಹೋದೆಯಲ್ಲ
ಅಲೆವ ದುಂಬಿಗೂ ಗೊತ್ತಿಲ್ಲ ನೀನ್ಯಾರೆಂದು
ಬೊಗಸೆ ಕಂಗಳಿನ ಅನುಪಮ ಚೆಲುವೆ
ಇರುಳ ಶಶಿಗೂ ಗೊತ್ತಿಲ್ಲ ನೀನ್ಯಾರೆಂದು
ಅಭಿನವನ ವರಿಸಿದ ಮೋಹಕ ಮದನಾರಿ
ಶುಕ್ತಿಯ ಮುತ್ತಿಗೂ ಗೊತ್ತಿಲ್ಲ ನೀನ್ಯಾರೆಂದು
ಶಂಕರಾನಂದ ಹೆಬ್ಬಾಳ