ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ

ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.
ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ ತೆರೆದಿಡುವ ರೀತಿ ಅದ್ಭುತವಾದುದು. ೧೯೭೬ ರಲ್ಲಿ ಈ ಸಂಕಲನ ಬಂದಿದೆ.‌೧೯೬೮ ರಲ್ಲಿ ಅವರ ಮುಳ್ಳುಗಳು ಕತೆ ಪ್ರಕಟವಾದುದು.
ಆಗಲೇ ವೀಣಾ ಶಾಂತೇಶ್ವರ ಅವರ ಕತೆಯ ಶೈಲಿ, ದಿಟ್ಟತನ, ಕತೆ ಕಟ್ಟುವ ರೀತಿಯ ‌, ಹೆಣ್ಣಿನ‌ ಅಂತರಂಗವನ್ನು ಪ್ರಾಮಾಣಿಕವಾಗಿ, ಕಲಾತ್ಮಕವಾಗಿ ಕಟ್ಟುವ ವೀಣಾ ಅವರನ್ನು ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬರಗೂರು ರಾಮಚಂದ್ರ ಅವರು ಮೆಚ್ಚಿ ಬರೆದಿದ್ದಾರೆ.
ಅವರ ಕವಲು ಸಂಕಲನದ ಕತೆಗಳನ್ನು ‌ಓದಲು ಎತ್ತಿಕೊಂಡಾಗ, ಇವತ್ತಿನ ಬರಹಗಾರ್ತಿಯರು ಮುದ್ದಾಂ ‌ಓದಬೇಕು. ಅಬ್ಬಾ ವೀಣಾ ಶಾಂತೇಶ್ವರ ಅವರ ಧೈರ್ಯ ನನಗೆ ಇಷ್ಟವಾಯಿತು.‌ ಇವತ್ತಿನ ಕರ್ನಾಟಕಕ್ಕೆ ಅಂತಹ ಶಕ್ತಿಯುತ, ಸತ್ವಯುತು ಬರಹ ಪ್ರಕಟಿಸುವ ಧೈರ್ಯ ಇದೆಯಾ ಅಂತ ಅನ್ನಿಸಿತು ನನಗೆ. ಪ್ರಶ್ನಿಸುವ ಮನೋಭಾವವೇ ಹೊರಟು ಹೋಗುತ್ತಿದೆ. ಇಲ್ಲಿ ಕಾಯಿಲೆ ನೆಪದಲ್ಲಿ ಒಪ್ಪಿತ ಗುಲಾಮಗಿರಿ ಹೇರುವ ಮತ್ತು ಅದನ್ನು ಒಪ್ಪಿಸುವ ಮನಸ್ಥಿತಿಯ ಕರ್ನಾಟಕದಲ್ಲಿ ನಾವಿದ್ದೇವೆ.
ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ.
ಇನ್ನೂ ” ಹೋಟೆಲ್ ಬ್ಲೂ ” ೧೯೭೬ ರಲ್ಲಿ ಬಂದ ಸಂಕಲನ.‌ಎಮರ್ಜನ್ಸಿ ಪ್ರಾರಂಭದ ಕಾಲ.‌(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು…ಪ್ರತಿಭಟನೆ, ಸ್ತ್ರೀ‌ಶೋಷಣೆ ….ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು…ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾಳೆ.ಕತೆ ಓದುತ್ತಲೇ ಒಂದು ನಾಟಕಕೀಯ ದೃಶ್ಯ ನಮ್ಮ‌‌ ಕಣ್ಮುಂದೆ ಚಲಿಸುತ್ತದೆ.

ಅವರ ಮುಳ್ಳುಗಳು ಕತೆಯನ್ನು ಕನ್ನಡ ಯುವ ಬರಹಗಾರ್ತಿ ಯರು ಹಾಗೂ ಬರಹಗಾರರು ಓದಬೇಕು.
ಅದ್ಭುತ ಕತೆ. ಮನದ ಚಲನೆ ಅಲ್ಲಿದೆ. ೨೪ ತಾಸುಗಳಲ್ಲಿ ಚಲಿಸುವ ಕತೆ ಅದು. ಅವಳ ಸ್ವಾತಂತ್ರ್ಯ ಧ್ವನಿಪೂರ್ಣ ಕತೆ.‌
೧೯೯೪ ರಲ್ಲಿ ಬಂದ ಬಿಡುಗಡೆ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿ ಅಲ್ಲಿದೆ. ಕತೆ ಸಾಗುವ ದಾರಿ ನಿಮ್ಮನ್ನ ಅಚ್ಚರಿ‌ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..
ಈ ದೃಷ್ಟಿಯಿಂದ ಕತೆ ,ಕತೆಗಾರ್ತಿ ಬಹುತ್ವದ ಸಂಕೇತ. ‌

ಕವಿ ಬಹುತ್ವ‌ ಭಾವನೆಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಸರ್ವಾಧಿಕಾರಿಯಂತೆ, ಶಬ್ದಗಾರುಡಿಗನಂತೆ ಏಕತ್ರನಾಗಿ ಬರೆಯುತ್ತಾ ಸಾಗುತ್ತಾನೆ. ಬಹುತ್ವ ತನ್ನದಾಗಿಸಿಕೊಂಡ ಬೇಂದ್ರೆಯಂತೆ. ಬಹುತ್ವವನ್ನೇ ಮಾತಾಡಲು ಬಿಟ್ಟು ,ತಾನು ಕೃತಿಕಾರನಾಗಿ ಕಾನೂರು‌‌ ಸುಬ್ಬಮ್ಮ ಹೆಗ್ಗಡಿತಿಯಂತೆ ಬಹುತ್ವವೇ ಆಗುತ್ತಾರೆ ಕುವೆಂಪು.‌ ಹಾಗಾಗಿ ಕುವೆಂಪು ನನಗೆ ಬಹುತ್ವದ ಪ್ರತಿನಿಧಿ. ಬೇಂದ್ರೆ ಏಕತ್ವದ ಪ್ರತಿನಿಧಿ. ನನಗೆ ನನ್ನ ಅಪ್ತರರೊಬ್ಬರು ಹೇಳುತ್ತಿದ್ದರು ; ” ಪ್ರಯತ್ನಿಸಿದರೆ ಎಲ್ಲರೂ ಬರಿಯಬಹುದು.‌ಕತೆ ಕಷ್ಟ. ನಿನಗೆ ಕತೆ ಬರೆಯುವ ಶಕ್ತಿಯಿದೆ.‌ನೀ ಕತೆ ಬರೆಯೆಂದು
ಆ ಮಾತು ನನಗೆ ಈಚೆಗೆ ನಮ್ಮ ಕಥಾ ಪರಂಪರೆಯ ಹಿರಿಯರನ್ನು ಓದುವಾಗ ನಿಜ ಅನ್ನಿಸಿದೆ. ಲಂಕೇಶ್, ದೇವನೂರು, ವೀಣಾ ಶಾಂತೇಶ್ವರ, ಶಾಂತಿನಾಥ ದೇಸಾಯಿ ಅದ್ಭುತ ಕತೆಗಾರರು. ನೀವು ಸಹ ಕತೆ ಓದಿ. ಬಿಡುವಾದಾಗ.‌ ಪ್ರಶ್ನಿಸುವುದ‌ ಈ ಸಮಾಜ ಕಲಿಯುವಂತೆ ಕತೆ ಬರೆಯಿರಿ.

**************

ನಾಗರಾಜ ಹರಪನಹಳ್ಳಿ

Leave a Reply

Back To Top