ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೆ
ಅಳಿಸದ ಚಿತ್ತಾರ
“ನೀನು ಹೂವಾದಮೇಲೆ ನಾನು ದುಂಬಿಯಾಗಲೆ?”
ಎಂದು ನೀ ಕೇಳಿದ ಪ್ರಶ್ನೆಗೆ ನನ್ನ ಮೌನವೇ ಉತ್ತರ
ಅನುರಕ್ತೆಯಾಗುವೆ ರಾಧೆ ಶ್ಯಾಮನೊಳಡಗಿದಂತೆ
ನಿನ್ನೊಲವು ನನ್ನೆದೆಯ ಅಂಗಳದಿ ಅಳಿಸದ ಚಿತ್ತಾರ
ನಿನ್ನ ಬೆರಳುಗಳ ಒಡನಾಟವಿದೆ ಮುಂಗುರುಳಿಗೆ
ಇಂದೇಕೋ ಹಟಮಾಡುತ್ತಿವೆ ಮರೆತೆಯಾ ಇನಿಯಾ
ದೂರದಿ ನಿಂತು ಬರಿ ಮಾತಲಿ ಕಾಲ ಹರಣವದೇಕೆ?
ನುಡಿಯದೆ ಹೇಳು ಬಾ ಸಾವಿರದ ಪ್ರೇಮದ ಕಥೆಯಾ
ನಾನು ನೀನಾದ ಪರಿಯ ಹೇಗೆ ವಿವರಿಸಲಿ
ಕಣ್ಣಲ್ಲೇ ಚೆಲ್ಲಿರುವೆ ಉತ್ತರವ ಎಂತಾದರೂ ಬಾ
ಆಸೆಯ ಎಲೆಗಳನಾಯ್ದು ತೋರಣ ಕಟ್ಟಿರುವೆ
ನನಸುಗಳ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಸು ಬಾ
ಪ್ರೇಮದ ಪಲ್ಲವಿಗೆ ಚರಣ ಜೋಡಿಸಿ ಹಾಡುವೆ
ರಾಗ,ತಾಳಗಳನೂಡಿ ಭಾವ ತಂತಿಯ ಮೀಟು
ಬಾಳೊಂದು ಭಾವಗೀತೆ ಯಾಗುವುದು ಚೆಲುವ
ಅಜರಾಮರ ಆಖ್ಯಾನಕೆ ಎಲ್ಲ ಎಲ್ಲೆಗಳ ದಾಟು
ಬಾಳಿನ ನೀಲಿಯಲಿ ಚಂದ್ರಮ ನೀನಾಗಿ ಬಾ
ಬೆಳದಿಂಗಳ ಸುಧೆಯಲಿ ನಾ ನೆನೆಯುವೆ
ಬಿಡಿಸದ ನಂಟು ಆತ್ಮಗಳ ಬೆಸೆದಿರಲು
ಏಳೇಳು ಜನುಮದಲೂ ಜೊತೆಯಾಗುವೆ
———————————————————————–
ಶಕುಂತಲಾ ಎಫ್ ಕೆ
ಸುಂದರ ಭಾವದ ಕವಿತೆ