ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ

ಆ ತರುಣ ತನ್ನ ವೃದ್ಧ ತಂದೆಯನ್ನು ಜನರಿಂದ ತುಂಬಿ ತುಳುಕುತ್ತಿದ್ದ ಪ್ರಸಿದ್ಧ ರೆಸ್ಟೋರೆಂಟ್ಗೆ ಕರೆದುಕೊಂಡು ಬಂದಿದ್ದನು. ತಂದೆಗೆ ಸಾಕಷ್ಟು ವಯಸ್ಸಾಗಿದ್ದು ಕೈ ಕಾಲುಗಳಲ್ಲಿನ ಶಕ್ತಿ ಉಡುಗಿ ಹೋಗಿತ್ತು. ಚಮಚವನ್ನು ಕೈಯಲ್ಲಿ ಹಿಡಿದು ಊಟ ಮಾಡಲು ಕೂಡ ಆತ ಒದ್ದಾಡುತ್ತಿದ್ದ. ಮಗ ಕೂಡಲೇ ತನ್ನ ತಂದೆಗೆ ಕೈಯಿಂದಲೇ ಊಟ ಮಾಡಲು ಸಲಹೆ ನೀಡಿದ. ಅಷ್ಟಾಗಿಯೂ ತಂದೆ ಊಟ ಮಾಡುವಾಗ ತನ್ನ ಶರ್ಟಿನ ಮೇಲೆ ಆಹಾರವನ್ನು ಚೆಲ್ಲಿಕೊಂಡನು.
ವೃದ್ಧನ ಕಣ್ಣುಗಳಲ್ಲಿ ಸಂತಸದ, ತೃಪ್ತಿಯ ನಗೆ ಚಿಮ್ಮುತ್ತಿತ್ತು. ತಂದೆಯ ಮುಖದಲ್ಲಿನ ತೃಪ್ತಿಯ ಭಾವವನ್ನು ಕಂಡ ಮಗ ಸಾರ್ಥಕ ಭಾವವನ್ನು ಅನುಭವಿಸುತ್ತಿದ್ದನು.

 ರೆಸ್ಟೋರೆಂಟಿನ ಒಳಭಾಗಕ್ಕೆ  ವೃದ್ಧನನ್ನು ಕೈ ಹಿಡಿದು ಕರೆದುಕೊಂಡು ಬರುವಾಗಲಿಂದ ಆತ ಊಟ ಮಾಡುವವರೆಗೆ ಆಗುತ್ತಿದ್ದ ಆಭಾಸವನ್ನು ಅಪಸವ್ಯವನ್ನು! ತುಸು ಅಸಹನೆಯಿಂದಲೇ ವೀಕ್ಷಿಸುತ್ತಿದ್ದ ಉಳಿದ ಗ್ರಾಹಕರ ಕಣ್ಣುಗಳಲ್ಲಿ ಅಸಹನೆ,ಅತೃಪ್ತಿ. ಕೆಲವರಂತೂ ಎಷ್ಟು ವಯಸ್ಸಾದವರನ್ನು ಏಕೆ ಕರೆ ತರಬೇಕು ಎಂದು ಗೊಣಗುತ್ತಿದ್ದರು ಕೂಡ. ಮತ್ತೆ ಕೆಲ ಜನರು ಅಯ್ಯೋ ಪಾಪ! ಎಂಬಂತೆ ಕನಿಕರದಿಂದ ನೋಡುತ್ತಿದ್ದರು. ಜನರ ಅಸಹನೆಯ ಭಾವ, ಗುಸು ಗುಸು ಮಾತುಗಳು ಮಗನಿಗೆ ಕೇಳಿಸುವಂತಿದ್ದರೂ ಆತ ಅತ್ಯಂತ ಶಾಂತವಾಗಿ ತನ್ನ ತಂದೆಯ ಸೇವೆಯಲ್ಲಿ ತಲ್ಲೀನನಾಗಿದ್ದ.  

 ತನ್ನ ತಂದೆಗೆ ಸಂಪೂರ್ಣ ಸಹಕಾರ ನೀಡಿದ ಆತ ಅತ್ಯಂತ ಮೃದುವಾಗಿ ತನ್ನ ತಂದೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಒಂದು ಬಾರಿಯೂ ಆತ ಅಸಹನೆ, ಅಸಮಾಧಾನ ಮತ್ತು ಮುಜುಗರದಿಂದ ವರ್ತಿಸದೆ ಅತ್ಯಂತ ಪ್ರೀತಿಪೂರ್ವಕವಾಗಿ ತನ್ನ ತಂದೆಯ ಕಾಳಜಿ ಮಾಡುತ್ತಿದ್ದ.

 ಊಟವಾದ ನಂತರ ವೃದ್ಧನನ್ನು ಹೋಟೆಲಿನ ರೆಸ್ಟ್ ರೂಮ್ ಗೆ ಕರೆದೊಯ್ದ ಮಗ ಆತನು ಶರ್ಟಿನ ಮೇಲೆ ಬಿದ್ದಿದ್ದ ಎಲ್ಲಾ ಆಹಾರದ ಕಣಗಳನ್ನು ಜಾಡಿಸಿ ಕಲೆಗಳನ್ನು ಇಲ್ಲವಾಗಿಸಿ ತನ್ನ ತಂದೆಯ ಮುಖ ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆದು ಆತನ ಅಂಗಿಯ ಕಾಲರನ್ನು ಸರಿಪಡಿಸಿ ಕೂದಲನ್ನು ಕೈಯಿಂದಲೇ ಬಾಚಿ ಆತನ ಕನ್ನಡಕವನ್ನು ಸರಿಪಡಿಸಿದ. ಆತನ ಪ್ರತಿಯೊಂದು ಕಾರ್ಯವು ತನ್ನ ತಂದೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇತ್ತು.

 ನಂತರ ತನ್ನ ತಂದೆಯ ಕೈ ಹಿಡಿದು ಅವರನ್ನು ಕರೆದುಕೊಂಡು ರೆಸ್ಟೋರೆಂಟಿನ ಹೊರಗೆ ಹೊರಟಾಗ
ಇದುವರೆಗೆ ಅಲ್ಲಿ ತಾಂಡವವಾಡುತ್ತಿದ್ದ ಗುಸು-ಗುಸು ಮಾತುಗಳು ನಿಂತು ಹೋಗಿ ಒಂದು ನಿಶ್ಯಬ್ದ ಮೌನ ಆವರಿಸಿತು. ಊಟ ಮಾಡಲು ಬಂದ ಇನ್ನಿತರ ಜನರ
ಮುಖದಲ್ಲಿ ಮೃದುತ್ವ ಮತ್ತು ಕಣ್ಣುಗಳಲ್ಲಿ ಪ್ರೀತಿಪೂರ್ವಕ ಭಾವವಿದ್ದುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
 ಮಗ ರೆಸ್ಟೋರೆಂಟ್ನ ಬಿಲ್ಲನ್ನು ಕಟ್ಟಿ ತನ್ನ ತಂದೆಯ ಕೋಟನ್ನು ಹಾಕಿ ಅಲ್ಲಿಂದ ಇನ್ನೇನು ಹೊರಟು ಹೋಟೆಲಿನ ಹೊರ ಆವರಣಕ್ಕೆ ಕಾಲಿಡುತ್ತಿದ್ದ, ಅಷ್ಟರಲ್ಲಿಯೇ ಓರ್ವ ವ್ಯಕ್ತಿ ಅವರನ್ನು ಸಮೀಪಿಸಿದ. ಆತನ ಕಣ್ಣುಗಳಲ್ಲಿನ ಭಾವನಾತ್ಮಕತೆ  ಇಣುಕುತ್ತಲಿದ್ದು ‘ಸ್ವಲ್ಪ ಕೇಳಿ ಇಲ್ಲಿ” ಎಂದು ಆತ  ಮಗನನ್ನು ಮಾತನಾಡಿಸಿ ‘ನೀವು ಇಲ್ಲಿ ಏನನ್ನೋ ಬಿಟ್ಟು ಹೋಗುತ್ತಿರುವಿರಿ ಎಂದು ನಿಮಗೆ ಅನ್ನಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದ.
ತುಸು ಗಲಿಬಿಲಿಗೊಂಡ ಆ ತರುಣ ತನ್ನ ಟೇಬಲ್ನ ಬಳಿ ಹೋಗಿ ಎಲ್ಲವನ್ನು ಪರಿಶೀಲಿಸಿ ಆ ಅಪರಿಚಿತ ವ್ಯಕ್ತಿಯ ಬಳಿ ಬಂದು ‘ಇಲ್ಲವಲ್ಲ’ ಎಂದು ಉತ್ತರಿಸಿದ.

 ಆಗ ಆ ಅಪರಿಚಿತ ವ್ಯಕ್ತಿ ನಸುನಗುತ್ತಾ ‘ಇಲ್ಲ, ನೀನು
 ಇಲ್ಲಿ ನೆರೆದಿರುವ ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಪಾಠವನ್ನು ಮತ್ತು ಎಲ್ಲಾ ಪಾಲಕರಿಗೂ ಒಂದು ಭರವಸೆಯನ್ನು ಬಿಟ್ಟು ಹೋಗುತ್ತಿರುವೆ’ ಎಂದು ಹೇಳಿದನು.

 ಆ ಸಮಯದಲ್ಲಿ ಇಡೀ ರೆಸ್ಟೋರೆಂಟ್ನಲ್ಲಿ ಒಂದು ಸ್ಥಬ್ಧತೆ ಆವರಿಸಿತ್ತು.ಕಾಲವೇ ಉಸಿರು ಬಿಗಿ ಹಿಡಿದಂತಹ ನೀರವ ಮೌನ ಅಲ್ಲಿ ಆವರಿಸಿತ್ತು. ಹೋಟೆಲ್ನಲ್ಲಿ ಇರಬಹುದಾದಂತಹ ತಟ್ಟೆ, ಲೋಟ ಚಮಚಗಳ ಶಬ್ದ ಕೂಡ ಇಲ್ಲದೆ ಎಲ್ಲರೂ ಈ ತಂದೆ ಮಗನ ಜೋಡಿಯನ್ನು ವೀಕ್ಷಿಸುತ್ತಿದ್ದರು.

 ನಾನು ಚಿಕ್ಕವನಿದ್ದಾಗ ನನ್ನ ತಂದೆ ನನ್ನ ಎಲ್ಲ ಕೆಲಸಗಳನ್ನು ಅತ್ಯಂತ ಪ್ರೀತಿ ಮತ್ತು ಅಕ್ಕರೆಯಿಂದ ಮಾಡಿದ್ದಾರೆ, ಇದೀಗ ನನ್ನ ಸರದಿ. ಬದುಕಿನ ಮುಸ್ಸಂಜೆಯಲ್ಲಿರುವ ನನ್ನ ತಂದೆಗೆ ಸಾಧ್ಯವಾದಷ್ಟು ಕಾಳಜಿ ಮಾಡಬೇಕೆಂಬುದು ನನ್ನ ಮಹದಾಸೆ ಎಂದು ಅತ್ಯಂತ ನಮ್ರವಾಗಿ ಉತ್ತರಿಸಿದ ಆತ ಅವರಿಗೆ ಕೈ ಮುಗಿದು ಅಲ್ಲಿಂದ ತನ್ನ ತಂದೆಯನ್ನು ಕರೆದುಕೊಂಡು ಹೊರಟುಹೋದನು.

 ಜೀವನದ ಅತಿ ದೊಡ್ಡ ಸತ್ಕಾರ್ಯ ಎಂದರೆ ಈ ಹಿಂದೆ ನಮ್ಮನ್ನು ಪ್ರೀತಿ ಮತ್ತು ಅಕ್ಕರೆಯಿಂದ  ಬೆಳೆಸಿದವರನ್ನು ಅಷ್ಟೇ ಕಾಳಜಿಯಿಂದ ನೋವಾಗದಂತೆ ನೋಡಿಕೊಳ್ಳುವುದು. ನಮ್ಮ ಒಳ್ಳೆಯ ಬದುಕನ್ನು ರೂಪಿಸಲು ಹಾತೊರೆದ ಅವರು ಮಾಡಿದ ತ್ಯಾಗಕ್ಕೆ ನಿಜವಾಗಿಯೂ ನಾವು ನೀಡಬಹುದಾದದ್ದು ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು ಮಾತ್ರ. ತಂದೆ ಮಗುವಿನಂತೆ ಅಸಹಾಯಕರಾಗಿ ಮಗ ತಂದೆಯಾಗಿ ಪಾತ್ರಗಳು ಅದಲು ಬದಲಾದ ಸನ್ನಿವೇಶಗಳಲ್ಲಿ ಮಕ್ಕಳು ತಮ್ಮ ಪಾಲಕರಿಗೆ ಶಕ್ತಿಯಾಗಿ, ಆಸರೆಯಾಗಿ ಅವರ ಗೌರವಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕಾಗಿರುವುದು ಮಕ್ಕಳ ಕರ್ತವ್ಯ.
 ಇದುವೇ ಮಕ್ಕಳಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಬಿಟ್ಟು ಹೋಗುವ ಅಮೂಲ್ಯವಾದ ಸಂದೇಶವಾಗಬೇಕು.
 ಏನಂತೀರಾ ಸ್ನೇಹಿತರೆ?


Leave a Reply

Back To Top