ಚಿಂತನ ಸಂಗಾತಿ
ಡಾ. ಯಲ್ಲಮ್ಮ ಕೆ
ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ..!
ನೀವು ನೋಡೋಕೆ ತುಂಬಾ ಚೆನ್ನಾಗಿ ಇದ್ದೀರಾ, ನಿಮ್ಮ ಸರಳತೆ, ನೇರ ನಡೆ-ನುಡಿ, ನಿಮ್ಮ ಡ್ರೆಸ್ಸಿಂಗ್ ಸೆನ್ಸ್, ನೀವು ಇಗ್ಲೂ ಸ್ವೀಟ್ ಸಿಕ್ಸ್ಟಿನ್ ತರ ಕಾಣ್ತೀರಾ ನೋಡಿ! ಎಂಬಿತ್ಯಾದಿ ಮೂಗಿಗೆ ತುಪ್ಪ ಸವರುವ ಇಂತಹ ಹೊಗಳಿಕೆಯ ಮಾತುಗಳಿಗೆ ಸಾಮಾನ್ಯವಾಗಿ ಹೆಣ್ಮಕ್ಕಳು ಬಹು ಬೇಗ ಕರಗಿಬಿಡ್ತಾರೆ ಎಂಬ ಬಹುಜನ ಒಪ್ಪಿತ ಮಾತಿದೆಯಾದ್ರೂ, ಹಾಗೇ ನೋಡಿದರೆ ನಿಜಕ್ಕೂ ಬಲೆ ಬೀಸಿದವರಾರು? ‘ಇರುಳು ಕಂಡ ಬಾವಿಗೆ ಹಾಡಹಗಲೇ ಬಿದ್ರು ಎಂಬಂತೆ!’ ಬೀಸಿದ ಬಲೆಯಲ್ಲೇ ಸಿಕ್ಕಿಬಿದ್ದು ಒದ್ದಾಡುತ್ತಿರುವವರಾರು? ಅಂತ ಸ್ವಲ್ಪ ಆಲೋಚಿಸಬೇಕಿದೆ, ಇರಲಿ ಎಷ್ಟೇ ಆದರೂ ‘ಹೆಣ್ಮಕ್ಕಳು ಬುದ್ಧಿ ಮೊಣ ಕಾಲ್ಕೆಲಗೆ’ ಅಂತ ಗಾದೆಮಾತಿದೆ ಅಲ್ವೇ, ಹೊಗಳಿಕೆಗೆ ಕಿವಿಗೊಟ್ಟು ಕರಗಿ ನಾಚಿ ನೀರಾದಳು ಎನ್ನಿ! ಹಾಗಂತ ಬಹುತೇಕ ಜನ ಭಟ್ಟಂಗಿತನಕ್ಕೆ ಇಳಿದುಬಿಟ್ಟಿದ್ದಾರೆ!
ಪಾಪ ಅವರು ತುಂಬಾ ಒಳ್ಳೇ ಜನಾ ರೀ.., ಹಾಲಿಗೂ ನೀರಿಗೂ ವ್ಯತ್ಯಾಸ ತಿಳಿಯದ ಜನ, ಮುಗ್ಧರು, ಹಾಲಿನಂತಹ ಮನಸ್ಸು ಅವರದ್ದು! ಇಂತಹ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇವರು ಅವರನ್ನು ಹೊಗಳ್ತಾ ಇದ್ದಾರಾ, ಇಲ್ಲವೇ ತೆಗಳ್ತಾ ಇದ್ದಾರಾ? ವ್ಯತ್ಯಾಸ ತಿಳಿಯದವರು ಅಂದ್ರೆ ದಡ್ಡರು, ಹುಂಬರು, ಟ್ಯೂಬ್ ಲೈಟ್ ಅಂತಲೇ ಅರ್ಥ ಆಲ್ವಾ? ಇನ್ನು ಹಾಲಿನಂತಹ ಮನಸ್ಸು ಅಂದ್ರೆ?
ಹಾಲು ಅಂದ್ರೆ ಹಾಲು, ಹಾಲಿನ ಬಿಳುಪು-ಹೊಳಪು ಪರಿಶುದ್ಧತೆಯ ಪ್ರತೀಕ! ಹಾಲಿನಂತಹ ಮನಸ್ಸು ಅಂದ್ರೆ ಪರಿಶುದ್ಧ , ನಿಷ್ಕಲ್ಮಶ ಮನಸ್ಸು ಎಂದೆಲ್ಲ ಅರ್ಥೈಸಿಕೊಂಡು ಬರಲಾಗಿದೆ, ಹಾಲಿನಂತಹ ಮನಸ್ಸು ಅಂದ್ರೆ ಸ್ಥಿರತೆ ಮತ್ತು ಧೃಢತೆ ಇಲ್ಲದ ಮನಃ ಸ್ಥಿತಿಯೂ ಆಗಬಹುದೇ?
ನಮ್ಮ ಕಡೆ ಹಳೇ ಜಂತಿಮನಿಗಳೇ ಹೆಚ್ಚು, ಒಲೀಮ್ಯಾಲೆ ಕಾಯಿಸಿಟ್ಟ ಹಾಲಿನ ಗಡಿಗೆಯೊಳಗೆ ಹೊಗ್ಗಿಂಡಿಯಲ್ಲಿನ ಕರ್ರನ್ ಕಿಟ್ಟ ಒಂಚೂರು ಬಿದ್ರೂ ಸಾಕು ಹಾಲು ಕೆಟ್ಟು ಹೋಗಿಬಿಡ್ತಿದ್ದವು! ಹೇಳಿಕೆ ಮಾತಿಗೆ ಕಿವಿಗೊಟ್ಟರ ಮನಿ-ಮಾರ ಹಾಳಾಗತ್ತೈತಿ ಇದನ್ನೇ ನಾನು ಸ್ಥಿರತೆ ಇಲ್ಲದ ಮನಸ್ಸು ಎಂದದ್ದು, ಇನ್ನು ಒಂದಿಷ್ಟು ಮುಂದುವರೆದು ನೋಡುವುದಾದರೆ ಗಡಿಗಿಯೊಳಗಿನ ಹಾಲು ಸಣ್ದಾಗಿ ಕುದ್ದು ಕುದ್ದು ತಣ್ಣಗಾದರ ಕೆನೆಗಟ್ತದೆ, ಉಗುರು ಬೆಚ್ಚಗಿನ ಹಾಲಿಗೆ ಒಂದಿಷ್ಟು ಹೆಪ್ಪು ಹಾಕಿದ್ರೆ ಗಟ್ಟಿ ಮೊಸರಾಗುತ್ತೆ, ಹೀಗೆ ಕೆನೆಗಟ್ಟಿದ ಮೊಸರನ್ನು ಕಡೆಗೋಲಿನಿಂದ ಕಡೆದಾಗ ಮಜ್ಜಿಗೆಯೊಂದಿಗೆ ಬೆಣ್ಣೆ ಮೇಲೆ ತೇಲ್ತದಾ, ಆ ಬೆಣ್ಣೆ ತೆಗದು ಒಂದು ಡಬರಿಯಾಗ ಹಾಕಿ ಕಾಸಿ ಸೋಸಿ ತೆಗದ್ರಾ ಘಮ ಘಮಿಸುವ ತುಪ್ಪಾ ಸಿಗತೈತಿ! ಇದು ಏನು ಹೊಸ ವಿಷಯ ಅಲ್ಲ ಅಂತನಿಸಿದ್ರೂ, ಹಾಲು ತುಪ್ಪವಾಗಲು ಸ್ಥಿರತೆ ಮತ್ತು ದೃಢತೆ ಬೇಕಾಗ್ತದ!
ಹೀಗ ಹೇಳ್ರೀ ನೋಡುವಾ ಹಾಲಿನಂತಹ ಮನಸ್ಸು ಅವರದ್ದು ಅಂದ್ರೆ ಒಳ್ಳೆಯದು ಅಂತಲೂ, ಹಾಗೆಯೇ ಹಳ್ಳುಕ ಸ್ವಭಾವದವರು, ಚಾಡಿ ಮಾತಿಗೆ ಕಿವಿಗೊಡುವವರು, ಹಿತ್ತಾಳೆ ಕಿವಿಯವರು, ತಾಳ್ಮೆ ಇಲ್ಲದ ಜನ ಅಂತಲೂ ಅರ್ಥೈಸಬಹುದು.
‘ಕೆಟ್ಟದ್ದನ್ನು ಅಟ್ಟು ಉಂಡವನೆ ಜಾಣ!’ ಎಂಬ ಮಾತಿನಂತೆ ನೀವು ಯುವ್ಟ್ಯೂಬ್ ನಲ್ಲಿ ಸವಿರುಚಿಯಲ್ಲಿ ನೋಡಿರಬಹುದಾದ ಹಾಲು ಒಡೆದು ಹೋಯ್ತೆ? ಚಿಂತಿಸಬೇಡಿ, ಕೆಟ್ಟುಹೋದ ಇಲ್ಲವೇ ಒಡೆದು ಹಾಲಿನಿಂದ ನಾವು ಪನ್ನೀರ್ ಮಾಡಬಹುದು, ಹೇಗೆ ಅಂತ ನಾನು ಈ ವಿಡಿಯೋನಲ್ಲಿ ತೋರಿಸಿ ಕೊಡ್ತೀನಿ, ಸ್ಕಿಪ್ ಮಾಡದೆ ಕೊನೆವರೆಗೂ ನೋಡಿ, ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ, ಹೇಗಿದೆ ಅಂತ ಕಾಮೆಂಟ್ ಬಾಕ್ಸ್ ನಲ್ಲಿ ಚಾಟ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, ಹಾಗೇ ಪಕ್ಕದಲ್ಲಿರೋ ಬೆಲ್ ಬಟನ್ ಒತ್ತೋದನ್ನು ಮರೀಬೇಡಿ! ಎಂದು ತಳುಕು ಬಳುಕಿನ ಲಾಲನಾಮಣಿ ಮಾತಿಗೆ ಮರುಳಾಗದವರು ಯಾರು ಹೇಳಿ? ಒಡೆದುಹೋದ ಹಾಲನ್ನು ಕಾಸಿಕಾಸಿ ನೀರಿನಿಂದ ಬೇರ್ಪಟ್ಟ ಪಿಸರುಪಿಸುರಿನ ಮುದ್ದೆಯೇ ಪನ್ನೀರ್! ಅದಕ್ಕೆ ಒಂದಿಷ್ಟು ಮಸಾಲಾ ಖಾರ ಉಪ್ಪು ಸೇರಿಸಿ ಬಿಟ್ಟರೆ ಪನ್ನೀರ್ ಮಸಾಲಾ ರೆಡಿ! ಸವಿ ಸವಿ ಸವಿರುಚಿ! ಆದರೂ ಪನ್ನೀರ್ ಪನ್ನೀರೇ ತುಪ್ಪ ತುಪ್ಪವೇ ಎನ್ನುವುದು ಎಲ್ಲರೂ ಒಪ್ಪುವ ಮಾತೇ ಆಗಿದೆ.
ಹಾಲು ತುಪ್ಪವಾಗುವ, ಬೀಜ ವೃಕ್ಷವಾಗುವ, ಎಳೆಗರು ಎತ್ತಾಗುವ , ನೀರು ಮೋಡವಾಗಿ ಮತ್ತೆ ಮಳೆಯಾಗಿ ಧುಮ್ಮಿಕ್ಕಿ ಹರಿಯುವಲ್ಲಿ ತಾಳ್ಮೆಯಿದೆ, ಸ್ಥಿರತೆ ಮತ್ತು ದೃಢತೆಯೊಂದಿಗೆ ಮುನ್ನಡೆದಾಗಲೇ ಬದುಕು ಹಸನಾಗಿ ರುಚಿಸುವುದು.
-ಡಾ. ಯಲ್ಲಮ್ಮ ಕೆ
Nice
ವಂಡರ್ಫುಲ್ ಲೈನ್ಸ್ ಮೇಡಂ god bless u mam