ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ
ರತನ್ ಟಾಟಾ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ ವ್ಯಕ್ತಿ ಅವರ ಅಜ್ಜಿ ನವಾಜ್ ಬಾಯ್ ಟಾಟಾ… ಲೇಡಿ ರತನ್ ಟಾಟಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಕೆ ಟಾಟಾ ಉದ್ಯಮವನ್ನು ಸ್ಥಾಪಿಸಿದ ಜಮಶೇಡ್ ಜೀ ಟಾಟಾ ಅವರ ಕಿರಿಯ ಮಗನನ್ನು ವಿವಾಹವಾಗಿದ್ದರು.ಟಾಟಾ ಸಂಸ್ಥೆಯ ಅತ್ಯಂತ ಹಿರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಈಕೆ ಅತಿ ದೊಡ್ಡ ದಾನಿಯಾಗಿದ್ದರು.
1965ರ ಆಗಸ್ಟ್ ತಿಂಗಳಲ್ಲಿ ಆಕೆ ನಿಧನ ಹೊಂದಿದಾಗ ಮುಂಬೈಯ ಅಗಸ್ಟ್ 22ರ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಲ್ಲಿ ಪಾರ್ಸಿ ಜನಾಂಗದ ಅತ್ಯಂತ ಪ್ರಭಾವಿ ಉದ್ಯಮಿ ಮಾತ್ರವಲ್ಲದೇ ಸಮಾಜ ಕಲ್ಯಾಣ ವಲಯದಲ್ಲಿಯೂ ಹೆಸರಾದ ಮಹಿಳೆ ಎಂದು ಆಕೆಯ ಕುರಿತು ಹೇಳಲಾಗಿತ್ತು.
ರತನ್ ಟಾಟಾ ಅವರ ಉದ್ಯಮ ತರಬೇತಿ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಯುವತಿಯರು ವಿವಿಧ ಉದ್ಯಮಶೀಲತಾ ಕೆಲಸಗಳಲ್ಲಿ ತರಬೇತಿ ಹೊಂದಿದ್ದು ಅವರೆಲ್ಲರ ಜವಾಬ್ದಾರಿಯನ್ನು ಮತ್ತು ಸಂಸ್ಥೆಯ ಜವಾಬ್ದಾರಿಯನ್ನು ಖುದ್ದು ಆಕೆಯೇ ವಹಿಸಿದ್ದಳು. ಪಾರ್ಸಿ ಪಂಚಾಯಿತಿಯ ಮಹಿಳಾ ಟ್ರಸ್ಟಿಯಾಗಿದ್ದ ಆಕೆ 1939 ರಿಂದ 1946 ಅವಧಿಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜೀನಾಮೆ ನೀಡಿದಳು ಎಂದು ತನ್ನ ಶ್ರದ್ಧಾಂಜಲಿಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು.
ಮುಂಬೈಯ ನವಸಾರಿಯಲ್ಲಿ ಒಂದು ಸುಂದರವಾದ ಎಸ್ಟೇಟ್ ಆಕೆಯ ಹೆಸರಿನಲ್ಲಿದ್ದು ಇತ್ತೀಚಿಗಷ್ಟೇ ಕ್ರೀಡೆ ಮತ್ತು ಮನೋರಂಜನೆಗಾಗಿ ಕ್ಲಬ್ ಒಂದನ್ನು ಮಾಡಲಾಗಿದೆ.ಇತ್ತೀಚೆಗಷ್ಟೇ ‘ವೃದ್ಧರ ಮತ್ತು ಅಶಕ್ತರ ಸಚೇತನ ಕೇಂದ್ರ’ವನ್ನಾಗಿ ಪರಿವರ್ತಿಸಲಾಗಿರುವ ಮೆತೆರನ ಎಂಬ ನಿವಾಸ ಉದಕ ಮಂಡಲದಲ್ಲಿದೆ.
ಆಕೆಯ ಸಂಗ್ರಹದ ಅತ್ಯಮೂಲ್ಯ ಕರಕುಶಲ ವಸ್ತುಗಳು ಮುಂಬೈಯ ‘ಪ್ರಿನ್ಸ್ ಆಫ್ ವೇಲ್ಸ್’ ಮ್ಯೂಸಿಯಂನಲ್ಲಿವೆ. ಜಮ್ ಶೆಡ್ ಪುರದ ರಾಷ್ಟ್ರೀಯ ಮೆಟಲರ್ಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಅಂದಿನ ಕಾಲದಲ್ಲಿ 12 ಲಕ್ಷ ರೂಗಳನ್ನು ಟಾಟಾ ಸಂಸ್ಥೆಯು ಆಕೆಯ ಹೆಸರಿನಲ್ಲಿ ನೀಡಿದೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಉದ್ಯೋಗ ಕ್ಷೇತ್ರದಲ್ಲಿ ಮುಂದುವರೆದಿದ್ದ ರತನ್ ಟಾಟಾ ಅವರು ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಭಾರತದಲ್ಲಿ ವಾಸಿಸಲು ಇಚ್ಚಿಸಿದ್ದರು. ಇದಕ್ಕೆ ಆಕೆಯ ಸಮ್ಮತಿಯೂ ಇತ್ತು…. ಆದರೆ ಭಾರತ ಮತ್ತು ಚೀನಾ ದೇಶಗಳ ನಡುವೆ ನಡೆದ ಮಹಾ ಯುದ್ಧದ ಪರಿಣಾಮವಾಗಿ ರತನ್ ಟಾಟಾ ಪ್ರೀತಿಸಿದ ಯುವತಿಯ ಪಾಲಕರು ಭಾರತಕ್ಕೆ ಬಂದು ನೆಲೆಸಲು ಒಪ್ಪಲಿಲ್ಲ.ಅಜ್ಜಿಯನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಸಲುವಾಗಿ ರತನ್ ಟಾಟಾ ಮರಳುವುದು ಅತ್ಯವಶ್ಯಕವಾಗಿದ್ದು ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ ರತನ್ ಟಾಟಾ
ಭಾರತಕ್ಕೆ ಮರಳಿದ್ದಲ್ಲದೇ ತಮ್ಮ ಅಜ್ಜಿಯ ಜೀವಿತದ ಅಂತ್ಯದವರೆಗೂ ಆಕೆಯ ಸೇವೆಯಲ್ಲಿ ನಿರತರಾಗಿದ್ದರು. ಮುಂದೆ ಅವರು ವಿವಾಹವಾಗುವ ಯೋಚನೆಯನ್ನೇ ತೊರೆದರು.
ಮತ್ತೊಂದು ಬಾರಿ ರತನ್ ಟಾಟಾ ಅವರ ಪರೋಪಕಾರ ಗುಣಕ್ಕಾಗಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ಲಂಡನ್ ನ ಬಕಿಂಗ್ ಹ್ಯಾಮ್ ಪ್ಯಾಲೇಸ್ ನಲ್ಲಿ ಪ್ರಿನ್ಸ್ ಚಾರ್ಲ್ಸ್ ಅವರು ಔತಣ ಕೂಟವೊಂದನ್ನು ಏರ್ಪಡಿಸಿದ್ದರು. ಇನ್ನೇನು ಕಾರ್ಯಕ್ರಮಕ್ಕೆ ಎರಡು ದಿನಗಳು ಬಾಕಿ ಇರುವಾಗ ರತನ್ ಟಾಟಾ ಅವರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ತಮ್ಮ ನಾಯಿಗಳಾದ ಟೀಟೋ ಮತ್ತು ಟ್ಯಾಂಗೋಗಳಲ್ಲಿ ಒಂದು ನಾಯಿ ತೀವ್ರ ಅನಾರೋಗ್ಯ ಹೊಂದಿದ್ದು ತಾವು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಆ ಕಾರ್ಯಕ್ರಮಕ್ಕೆ ಆಗ ತಾನೇ ಲಂಡನ್ ನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರ ಸ್ನೇಹಿತ ಈ ವಿಷಯವನ್ನು ತುಸು ಹಿಂಜರಿಯುತ್ತಲೇ ಪ್ರಿನ್ಸ್ ಚಾರ್ಲ್ಸ್ ಅವರಿಗೆ ಹೇಳಿದಾಗ,ಚಾರ್ಲ್ಸ್ ಅವರು
” ಅದಕ್ಕೆ ಅವರನ್ನು ಟಾಟಾ ಎಂದು ಕರೆಯುವುದು. ಮಾನವೀಯತೆ ಮತ್ತು ಅಂತಃಕರಣದ ಸೆಲೆ ಟಾಟಾ
ಹೌಸ್ ನಲ್ಲಿ ಸ್ಥಿರವಾಗಿ ನೆಲೆಗೊಂಡಿದೆ” ಎಂದು ನಸುನಗುತ್ತಾ ಹೇಳಿದರು.
ಇಂಗ್ಲೆಂಡ್ ದೇಶದ ಅತ್ಯಂತ ಪ್ರತಿಷ್ಠಿತವಾದ ಪ್ರಶಸ್ತಿಯನ್ನು ಸ್ವೀಕರಿಸಲು ಮತ್ತು ರಾಜಮನೆತನದ ಔತಣ ಕೂಟವನ್ನು ನಿರಾಕರಿಸುವಷ್ಟು ಸ್ಥಿರತೆ ಟಾಟಾ ಅವರ ಮಾನವೀಯ ಅಂತಃಕರಣದಲ್ಲಿ ಇತ್ತು ಎಂಬುದು ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ..
ನೋಡಿದಿರಾ ಸ್ನೇಹಿತರೆ, ಟಾಟಾ ಕೇವಲ ಒಂದು ಉದ್ದಿಮೆಯ ಹೆಸರಲ್ಲ. ಭಾರತದ ಹಿರಿಮೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದ ಶಕ್ತಿಯ ನಾಮಧೇಯವದು. ಉಪ್ಪಿನಿಂದ ಹಿಡಿದು ಯುದ್ಧ ವಾಹನಗಳವರೆಗೆ, ಕಾರಿನಿಂದ ಹಿಡಿದು ವಿಮಾನಯಾನ ಸಂಸ್ಥೆಯವರೆಗೆ ಉಕ್ಕು ಉದ್ಯಮದಿಂದ ಡೀಸೆಲ್ ಭಾರತ ಮತ್ತು ಆಫ್ರಿಕಾದ ಶೇಕಡ 95 ರಷ್ಟು ಡೀಸೆಲ್ ವಿತರಣೆಯಲ್ಲಿ… ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತ ಟಾಟಾ ಸಂಸ್ಥೆಯು ತೊಡಗಿಸಿಕೊಂಡಿದೆ.
ಆದ್ದರಿಂದಲೇ ಟಾಟಾ ಎಂಬ ಹೆಸರು ಹೇಳುವಾಗ ಅಭಿಮಾನ ಮತ್ತು ಹೆಮ್ಮೆಯಿಂದ ಎದೆಯುಬ್ಬಿ ಮನ ರೋಮಾಂಚನಗೊಳ್ಳುತ್ತದೆ.
ಹೌದಲ್ಲವೇ ಸ್ನೇಹಿತರೇ?
ವೀಣಾ ಹೇಮಂತ್ ಗೌಡ ಪಾಟೀಲ್