ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…?

ಒಡಲಾಳದಿ ಸುಳಿಯೊಡೆದು
ಕಡಲಿನಗಲಕು ಕವಲೊಡೆದು
ಅಲೆಯುವಲೆಗಳ ತಲೆಮಾರಿನ ನೋವು
ಅಂಚಿನಲಿ ಕಾಲಿಳೆಬಿಟ್ಟು ಆಟವಾಡಿದ
ಅವನಿಗೇನು ಗೊತ್ತು…?

ಪಾದದಡಿಯಲೆ ಸುಳಿದಾಡಿ
ಅನುಕ್ಷಣವೂ ಮುದ ನೀಡಿ
ಅವನಡಿಯೇ ಮಡಿದ ಪಾಪದಲೆಗಳ ನೋವು
ದಡದಲಿ ತಿರುಗಾಡಿ ಬೆನ್ತಿರುವಿದ
ಅವನಿಗೇನು ಗೊತ್ತು…?

ಅಂತರಾತ್ಮವನೇ ಹುದುಗಿಟ್ಟು
ಅವನಿಚ್ಛೆಯನೇ ಎದೆಯೊಳಿಟ್ಟು
ಅವನಾಸಿನಲೆ ಅವಸಾನವಾದಲೆಗಳ ನೋವು
ಉಸುಕಿನಲಿ ಹುಸಿ ಹುಡುಗಾಟವಾಡಿದ
ಅವನಿಗೇನು ಗೊತ್ತು…?

ತೋಳ್ತೆರೆದೆಲ್ಲವ ಬಿಗಿದಪ್ಪಿ
ನೀಲ್ತೆರೆಗಳೆಲ್ಲವು ನೆಲೆದಪ್ಪಿ
ಕಾಲ್ತುಳಿತದಿ ಕಾಲವಾದಲೆಗಳ ನೋವು
ಕಾಲಕಳೆಯಲೆಂದೆ ನೀಲಿಯಲಿ ಕಾಲ್ತೊಳೆದ
ಅವನಿಗೇನು ಗೊತ್ತು…?


20 thoughts on “ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…?

  1. ತುಂಬಾ ಚೆನ್ನಾಗಿದೆ ಸರ್

    ಧನಪಾಲ ನಾಗರಾಜಪ್ಪ
    ಮೊ : 7892546523

  2. ಗಂಡಿನೊಳಗಿರುವ ಹೆಂಗರುಳೊಂದು
    ಹೆಣ್ಣಿನ ಮನದಾಳದಲಿ ಇಳಿದು
    ಅವಳ ನೋವಿನಲೆಗಳ ಅಳೆದು
    ತಿಳಿದು ಹೇಳುವುದು ಅತ್ಯದ್ಭುತ

Leave a Reply

Back To Top