ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಅಕ್ಕಮಹಾದೇವಿಯವರ ವಚನ
ಗಂಗೆಯೊಡನಾಡಿದ ಗಟ್ಟಿ ಬೆಟ್ಟಂಗಳು ಕೆಟ್ಟ ಕೇಡ ನೋಡಯ್ಯ
ಅಗ್ನಿಯೊಡನಾಡಿದ ಕಾಷ್ಠಂಗಳು ಕೆಟ್ಟ ಕೇಡ ನೋಡಯ್ಯ
ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ
ಜ್ಞಾನಿಯೊಡನಾಡಿದ ಅಜ್ಞಾನಿ ಕೆಟ್ಟ ಕೇಡ ನೋಡಯ್ಯ
ಇಂತೀ ಪರಶಿವ ಮೂರ್ತಿ ಹರನೇ
ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿ ಭವಂಗಳು
ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ
12 ನೇ ಶತಮಾನದ ಶ್ರೇಷ್ಠ ಶರಣೆಯವರಾದ ಅಕ್ಕಮಹಾದೇವಿಯವರು ಎಂಥಹ ದಿಟ್ಟೆ ಶರಣೆ ಅಕ್ಕನವರು .
ಅಂದಿನ ಕಾಲದಲ್ಲಿ ದಿಟ್ಟೆಯಾಗಿ ಕೌಶಿಕ ರಾಜನನ್ನು ತಿರಸ್ಕರಿಸಿ ,ಒಂಟಿಯಾಗಿ ತುಳಿದ ಹೆಜ್ಜೆಗೆ ಅರಿವಿನ ಗುರು ಚನ್ನಮಲ್ಲಿಕಾರ್ಜುನನನ್ನು ಗಂಡನಾಗಿ ಕಂಡು, ಭವಬಂಧನದ ಕೊಂಡಿಯನ್ನು ಕಳುಚಿ ಹೆಜ್ಜೆ ಹಾಕುವ ಶರಣೆ ಅಕ್ಕನವರು. ನಮಗಿಂದು ಮಾದರಿಯಾಗಿ ನಿಲ್ಲುವ ವೀರ ವೀರಾಗಿಣಿ ಶರಣೆ ಅಕ್ಕಮಹಾದೇವಿಯವರು.ಒಂಟಿ ಪಯಣದಲ್ಲಿ ಸಾವಿರ ಸಮಸ್ಯೆಗಳನ್ನು ಎದುರಿಸುವ ನಿಲುವು .
ಗಂಗೆಯೊಡನಾಡಿದ ಗಟ್ಟಿ ಬೆಟ್ಟಂಗಳು ಕೆಟ್ಟ ಕೇಡ ನೋಡಯ್ಯ
ಎಂಥಹ ಕಲ್ಲು ಬಂಡೆಯಾದರೂ ,ಬೆಟ್ಟವಾದರೂ ಬೋರ್ಗರೆದು ಸುರಿಯುವ ಗಂಗೆಯೊಳಗೆ ಬಯಲಾಗಿ ಹೋಗುತ್ತದೆ .ಕಲ್ಲಿನಂಥಹ ಮನಸ್ಸನ್ನು ಕರಗಿಸುವ ದಿವ್ಯವಾದ ಶಕ್ತಿಯು ಲಿಂಗಕ್ಕೆ ಇದೆ .ಆ ಲಿಂಗವನ್ನು ಧರಿಸಿದ ಶಿವಶರಣರ ಸಂಗದಲ್ಲಿ ಇದೆ ಎನ್ನುವ ಅರ್ಥವನ್ನು ನಾನು ಕಂಡುಕೊಂಡಿರುವೆ .
ಅಗ್ನಿಯೊಡನಾಡಿದ ಕಾಷ್ಠಂಗಳು ಕೆಟ್ಟ ಕೇಡ ನೋಡಯ್ಯ
ಕಟ್ಟಿಗೆಯು ಬೆಂಕಿಯ ಉರಿಗೆ ಸುಟ್ಟು ಬೂದಿಯಾಗಿ ಹೋಗುತ್ತದೆ .
ಕಟ್ಟಗೆಗೆ ನಾನು ಬೆಂಕಿಯಿಂದ ಸುಟ್ಟು ಬೂದಿಯಾಗುವೆ ಎನ್ನುವ ಅರಿವಿನ ಜ್ಞಾನ ಇರದು .
ಹಾಗೇ ನಾವು ಕೂಡಾ ಅರಿವಿನ ಜ್ಞಾನವನ್ನು ತಿಳಿಯದೇ ಅವಿವೇಕಿಯಂತೆ ವರ್ತಿಸುತ್ತೇವೆ .ನಮ್ಮಲ್ಲಿರುವ ಅವಿವೇಕವು ಹೋಗಬೇಕಾದರೆ ನಾವು ಲಿಂಗವನ್ನು ಧರಿಸಿ ನಿಜದ ಅನುಭಾವ ಅರಿತು ಶಿವಶರಣರಾಗುವ ತತ್ವವನ್ನು ಈ ಒಂದು ವಚನದ ಸಾಲುಗಳು ತಿಳಿಯಪಡಿಸುತ್ತವೆ .
ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ
ನಮ್ಮಲ್ಲಿರುವ ಅಜ್ಞಾನ,ಜ್ಞಾನವೆಂಬ ಜ್ಯೋತಿಯ ಬೆಳಗನ್ನು ಕಂಡಾಗ .ಮನದಲ್ಲಿರುವ ಅಜ್ಞಾನವೆಂಬ ಕತ್ತಲೆಯು ಹೇಳ ಹೆಸರಿಲ್ಲದೇ ದೂರ ಆಗುವ ಸತ್ಯವನ್ನು,ಅಜ್ಞಾನವೆಂಬ ಕತ್ತಲೆಯು ಜ್ಞಾನವೆಂಬ ಬೆಳಗಿನಲ್ಲಿ ಬಟ್ಟ ಬಯಲಾಗಿ ಬೆಳಕು ಕಾಣುವಂತೆ, ದಿವ್ಯವಾದ ಜ್ಞಾನದ ಬೆಳಕನ್ನು ಈ ಒಂದು ವಚನದ ಸಾಲುಗಳಲ್ಲಿ ಕಾಣಬಹುದಾಗಿದೆ .ಜ್ಯೋತಿಯ ಬೆಳಕಿನಲ್ಲಿ ಕತ್ತಲೆಯು ಕರಗಿ ಬೆಳಕನ್ನು ಕಾಣುತ್ತದೆ .ಹಾಗೆ ನನ್ನ ಮನವೆಂಬ ಕತ್ತಲೆಯು ಲಿಂಗವೆಂಬ ಬೆಳಗಿನಲ್ಲಿ ಕತ್ತಲೆಯು ಕರಗಿ ಬೆಳಕನ್ನು ಕಂಡಿತು ಎನ್ನುವ ಸತ್ಯವನ್ನು ಅಕ್ಕಮಹಾದೇವಿಯವರ ಈ ಒಂದು ವಚನದ ಸಾಲುಗಳಲ್ಲಿ ಕಾಣಬಹುದಾಗಿದೆ .ಜ್ಯೋತಿಯ ಬೆಳಕಿನಲ್ಲಿ ಕತ್ತಲೆಯು ಕರಗಿ ಬೆಳಕನ್ನು ಕಾಣುತ್ತದೆ .ಹಾಗೆ ನನ್ನ ಮನವೆಂಬ ಕತ್ತಲೆಯು ಲಿಂಗವೆಂಬ ಬೆಳಗಿನಲ್ಲಿ ಕತ್ತಲೆಯು ಕರಗಿ ಬೆಳಕನ್ನು ಕಂಡಿತು ಎನ್ನುವ ಸತ್ಯವನ್ನು ಕಾಣಬಹುದಾಗಿದೆ .
ಜ್ಞಾನಿಯೊಡನಾಡಿದ ಅಜ್ಞಾನಿ ಕೆಟ್ಟ ಕೇಡ ನೋಡಯ್ಯ
ಶರಣರು ಜ್ಞಾನಿಗಳು .ಇಂಥಹ ಜ್ಞಾನವನ್ನು ಹೊಂದಿದ ಶರಣರ ಜೊತೆ ಸಂಗ ಮಾಡುವುದರಿಂದ ನನ್ನ ಮನದಲ್ಲಿರುವ ಕೆಟ್ಟ ಗುಣಗಳು ತೊಲಗಿ ಸುಜ್ಞಾನದ ಮಾರ್ಗ ನಡೆಯನ್ನು ಕಂಡುಕೊಂಡೆ.ಎನ್ನುವ ಅರ್ಥವನ್ನು ತಿಳಿಯಬಹುದಾಗಿದೆ .ಶರಣರು ಜ್ಞಾನಿಗಳು ಅವರ ಸಂಘದಲ್ಲಿ ನಾನು ಬೆರೆಯುವುದರಿಂದ ,ನನ್ನಲ್ಲಿರುವ ಅಜ್ಞಾನವು ತೊಲಗಿ ಬಿಡುವುದು .ಎನ್ನುವ ಅರ್ಥ.
ಇಂತಿ ಪರಶಿವ ಮೂರ್ತಿ ಹರನೇ ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿ ಭವಂಗಳು
ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ
ಹೇ ಪರಮಾತ್ಮ ಶ್ರೀ ಶೈಲ ಚೆನ್ನಮಲ್ಲಿಕಾರ್ಜುನಾ, ಹೇ ಹರ ಮೂರ್ತಿಯೇ ನಿಮ್ಮ ಜಂಗಮಲಿಂಗದಲ್ಲಿ ನಾನು ಮೈ ಮರೆತು, ಈ ಹುಟ್ಟು ಸಾವುಗಳ ಸಂಸಾರ ಎಂಬ ಭವಬಂಧನದಿಂದ ನಾನು ಮುಕ್ತ ಗೊಂಡೆ ಚನ್ನಮಲ್ಲಿಕಾರ್ಜುನಾ, ಎನ್ನುವ ಅಕ್ಕನವರ ವಚನದ ಅರಿವಿನ ಜ್ಞಾನವು ಗೋಚರಿಸುತ್ತದೆ .
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
Super