ಕಾವ್ಯ ಸಂಗಾತಿ
ಟಿಪಿ ಉಮೇಶ್
‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’
ಹಾಸಿಗೆಯಿಂದ ಎದ್ದೊಡನೆ ಮನೆದೇವರ ನೆನೆದು;
ಹೆಂಡತಿಯ ಪಾದಗಳ ಮುಟ್ಟಿ ನಮಸ್ಕರಿಸೋ ಭಯ ಭಕ್ತಿಯ ಅಗತ್ಯವಿಲ್ಲ!
ಆ ತಕ್ಷಣವೇ ನೆರಿಗೆ ಬಿದ್ದ ಹೊದಿಕೆ ಸಮಗೊಳಿಸಿ;
ಜಾರಿದ ಪಂಚೆ ಹಿಡಿದು ಅಡಿಗೆ ಮನೆಗೆ ಹೋಗುವ ಧಾವಂತವಿಲ್ಲ!
ಮನೆಯ ಎಲ್ಲ ಮೂಲೆ ಮುಂಕಟ್ಟು ಧೂಳ ಕೊಡವಿ;
ಕಸ ಗುಡಿಸಿ ಸಾರಿಸಿ ಒಪ್ಪ ಓರಣಗೊಳಿಸುವ ಅವಸರವಿಲ್ಲ!
ಮನೆಯ ವರಾಂಡಕ್ಕೆಲ್ಲ ನೀರು ಚಿಮುಕಿಸಿ;
ಮಟ್ಟಸವಾಗಿ ರಂಗೋಲಿ ಬಿಡುವ ಚಾಕರಿಯಿಲ್ಲ!
ಮನೆಯಾಕೆ ವಾಕಿಂಗ್ ಹೋಗಿಬರುವ ವೇಳೆಗೆ ಸ್ನಾನದ ಶಾಸ್ತ್ರ ಮಾಡಿ;
ಶುದ್ಧ ಮಡಿಯಲ್ಲಿ ಹಬೆಯಾಡೋ ಕಾಫಿ ಕೊಡುವ ಗೋಜಿಲ್ಲ;
ಸುಲಭ….
ಗಂಡಸಾಗಿ ಕವಿತೆ ಬರೆಯುವುದು!
ಮಕ್ಕಳು, ಅತ್ತೆ ಮಾವರ ಕೂಗು, ತಂಟೆ ತಟವಟ ಕಿರಿಕಿರಿಗಳಿಲ್ಲ!
ಹೂವು ಹಾಲು ಪೇಪರ್ ಸೊಪ್ಪು ತರಕಾರಿಯವರ ಕಿರಿಕಿರಿಗಳಿಲ್ಲ!
ಹಿತ್ತಲಿನ ಹಸುಕರುಗಳ ಗಂಜಳ ಬಳಿದಾಕಿ ಮೇವು ಹೊತ್ತಾಕುವ ಕಸುಬಂತೂ ಇಲ್ಲ;
ಹೂ ಗಿಡ ಮರಗಳಿಗೆ ನೀರಾಕಿ ನೇರ್ಪುಗೊಳಿಸಿ ಬೆಳೆಸುವ ಅನಿವಾರ್ಯತೆಗಳಿಲ್ಲ;
ನಾದಿನಿ ಮೈದುನರ ಸಲಹಿ ಸಾಕುವ ಹೊಣೆಗಾರಿಕೆಗಳಿಲ್ಲ;
ಬಂಧು ಬಳಗದವರ ಹುಟ್ಟು ನಾಮಕರಣ ಆರತಿ ಮದುವೆ ಬಾಣಂತನ ಗೃಹಪ್ರವೇಶ ಜಾತ್ರೆ ತಾಪತ್ರೆ ಸುಖ ದುಃಖಗಳ ಭಾಗಿದಾರರಾಗಬೇಕಿಲ್ಲ!
ದೂರು ದುಮ್ಮಾನ ಸಾವು ಸಮಾಧಿಗಳಿಗೆ ದಿನ ವಾರವಿಡೀ ತಲೆಹಿಡಿದು ಕೂರಬೇಕಿಲ್ಲ!
ಎಲ್ಲಕ್ಕಿಂತ ಹೆಚ್ಚಾಗಿ…
ತಿಂಗಳಿಗೆ ಆ ಮೂರು ದಿನಗಳ ನೋವು ಮುಲುಕಾಟಗಳ ಗುದ್ದಾಟ ಹೊಯ್ದಾಟಗಳಿಲ್ಲ!
ಸುಲಭ…
ಗಂಡಸಾಗಿ ಕವಿತೆ ಬರೆಯುವುದು!
ನಾ ಗಂಡಸು;
ಸದ್ಯ ಕವಿತೆ ಬರೆಯುತ್ತಿದ್ದೇನೆ!
ಒಂದಿಷ್ಟು ಬದುಕಿನ ಕತೆಗಳ ಜೊತೆಗೆ
ಬರೆವ ಹೆಮ್ಮೆಯನ್ನೆಲ್ಲ ಮನೆಯಾಕೆಗೆ ಹೊರಿಸುತ್ತಿದ್ದೇನೆ!
ಅವರು ಬರೆವ ಪ್ರತಿಭೆ, ಸಾಮರ್ಥ್ಯ, ಕೌಶಲಗಳಿದ್ದರೂ…
ನಾ ಬರೆಯುತ್ತಿದ್ದೇನೆ
ಅಲ್ಲಲ್ಲ….
ಅವರೇ ಬರೆಸುತ್ತಿದ್ದಾರೆ
ನಾ ಗಂಡಸಾಗಿರುವುದಕ್ಕೆ!
ಅವರು…
ಹೆಂಗರುಳಿನ ಹೆಂಗಸಾಗಿರುವುದಕ್ಕೆ!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಕನಸು ಕನವರಿಕೆ ಬಯಕೆ ನಿಟ್ಟುಸಿರುಗಳ ಪ್ರತಿಫಲನಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಮಯ ಸಾಮರ್ಥ್ಯ ಆರೋಗ್ಯ ಆಯಸ್ಸಿನ ಗುರುತುಗಳು!
ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಸಹನೆ ಸಮಾಧಾನ ಸ್ವಾಭಿಮಾನ ಘನ ಕೀರ್ತಿಯ ಶ್ರೇಷ್ಠತೆಗಳು!
ಗಂಡಸಾಗಿ….
ಕವಿತೆ ಬರೆಯುವುದು ಭಾರಿ ಸುಲಭ!
————————————
ಟಿಪಿ ಉಮೇಶ್
ಮಾನವ ಜನ್ಮ್ ವಿಧಿ ಲಿಖಿತ ಆದ್ರೂ ಕೂಡ ಪ್ರತಿಯೊಂದು ಮಹಿಳೆಯ ಸ್ಥಾನ ಅಮ್ಮನ
(ದೇವರ )ಸ್ಥಾನ.
ಹೆಂಗರುಳಿನ ಗಂಡೊಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಅದ್ಭುತ.