ಕಾವ್ಯಯಾನ

ನೆನಪುಗಳ ಪಾಲೀಶ್ ಪಾಲಿಸಿ

ಬಸವರಾಜ ಕಾಸೆ

ಮರೆಯದ ನೆನಪುಗಳ
ತೊಳೆಯುವೆ ಕೊಳೆಯಲು ಕಣ್ಣೀರಲ್ಲಿ
ಅಚ್ಚಳಿಯದೆ ಸ್ವಚ್ಛ ಪಾಲಿಶ್ ಆಗಿ
ಫಳಪಳವೆಂದು ಬೆನ್ನೆತ್ತವುದು ಕ್ಷಣದಲ್ಲಿ

ಕಳಿಸಿ ಕೊಡಲು ಕಲಿಸಿದೆ
ಕೇಳಿ ನಗುವಿನ ಆಮಂತ್ರಣ
ಸಪ್ಪೆಯಾದರೂ ನಟಿಸಿದೆ
ನಿರಾಳವಾಗಲು ನಿನ್ನ ಮೈಮನ

ಹೇಳಿ ಹೋಗದ್ದಿದರೆ
ಚೆಂದವಿತ್ತು ಏನೋ ಕಾರಣ
ತಿಳಿ ಹೇಳಿ ರಮಿಸಿದ ಪರಿ
ಬಿಗಿಗೊಳಿಸಿತು ಭಾವ ಬಂಧನ

ಬಿಟ್ಟು ಕೊಡದ ಪ್ರೀತಿ
ಪಡೆಯಲಾಗದ ಬದುಕು
ಧಿಕ್ಕಾರ ಕಿರುಚಲು ನನ್ನೊಳಗೆ
ನನಗೆ ನಿರಂತರ ಕುಟುಕು

ಇಡಿ ಸಾಗರದ ಉಪ್ಪು
ತೆವಳಿಯೇ ಹಿಂದಿಕ್ಕುತ್ತೆ ನೋವಿನಾಳದಲ್ಲಿ
ತಡೆತಡೆದು ಬಿಕ್ಕಿ ಜಾರುವ
ಹನಿ ಹನಿ ನೀರಲ್ಲಿ

ಬಿಟ್ಟು ಹೋಗುವ ಮುನ್ನ
ಪ್ರೇಮದ ನಿನಾದ
ಗರಿಗೆದರಿ ತಬ್ಬಿ ಅಲವತ್ತಿತು
ನೆನೆದು ತವಕಿಸಿ ತಲ್ಲಣದ ಕದ

ಮುದ್ದಿಸಿ ಸಮಾಧಾನಿಸುವ
ಪರಿಪಕ್ವತೆಯಲ್ಲಿ ನೀನು
ಹಾಗೆ ಇರುವಂತೆ ತೋರಿಸುವ
ಅನಿವಾರ್ಯತೆಯಲ್ಲಿ ನಾನು

ತಟ್ಟಿ ಹೋದೆ ಯಾಕೆ
ಆ ಕೊನೆಯ ಕ್ಷಣದಲ್ಲೂ
ಇನ್ನಿಲ್ಲದಂತೆ ಹೃದಯ ಮೀಟಿ
ಆವರಿಸಿದೆ ಭೀತಿ ಹಿಂದೆಂದಿಗಿಂತಲೂ

=====================

Leave a Reply

Back To Top