‘ಮಕ್ಕಳ ಭಾಗವಹಿಸುವ ಹಕ್ಕಿನ ಸಾಕಾರಕ್ಕೆ ದೊಡ್ಡ ವೇದಿಕೆ – ಮಕ್ಕಳ ಹಕ್ಕುಗಳ ಗ್ರಾಮ ಸಭೆ’ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಮಕ್ಕಳ ಭಾಗವಹಿಸುವ ಹಕ್ಕಿನ ಸಾಕಾರಕ್ಕೆ ದೊಡ್ಡ ವೇದಿಕೆ – ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಭಾರತ ಸಂವಿಧಾನದ ಅನುಚ್ಛೇದ 5(a) ನ ಅನುಸಾರ ಭಾರತ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರು ದೇಶದ ಪ್ರಜೆಗಳು ಎಂದು ತಿಳಿಸಲಾಗಿದೆ. ಇದರ ಅನುಸಾರ ಈಗಿನ ಮಕ್ಕಳೂ ಸಹಾ ಇಂದಿನ ಪ್ರಜೆಗಳೇ ಹೊರತು ಮುಂದಿನ ಪ್ರಜೆಗಳಲ್ಲಾ ಎಂಬುದು ನಿಜವಾಗಿದೆ. ಹಾಗಾಗಿ ಅವರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಅಧಿಕಾರವಿದೆ. ಅವರಿಗೂ ಅವರದ್ದೇ ಆದ ವಿಶೇಷ ಹಕ್ಕುಗಳಿವೆ. ಈ ಹಕ್ಕುಗಳನ್ನು ಭಾರತ 1992 ಡಿಸೆಂಬರ್ 11 ರಂದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ದೇಶದ ಎಲ್ಲಾ ಮಕ್ಕಳಿಗೂ ಸಿಗುವಂತೆ ಮಾಡಿದೆ.

ಇದರ ಅನುಸಾರ 54 ಪರಿಚ್ಛೇಧಗಳ ಹಕ್ಕುಗಳನ್ನು ಒಟ್ಟುಗೂಡಿಸಿ ಪ್ರಮುಖ 4 ಹಕ್ಕುಗಳಾಗಿ ಮಾರ್ಪಾಡು ಮಾಡಲಾಗಿದೆ. ಅವುಗಳೆಂದರೆ ಜೀವಿಸುವ ಹಕ್ಕು, ವಿಕಾಸ ಹೊಂದುವ ಹಕ್ಕು, ರಕ್ಷಣೆಯ ಹಕ್ಕು ಹಾಗೂ ಭಾಗವಹಿಸುವ ಹಕ್ಕು. ಮಕ್ಕಳು ಜನಿಸಿದ ಕ್ಷಣದಿಂದಲೇ ಉತ್ತಮ ರೀತಿಯಲ್ಲಿ ಜೀವಿಸುವ ಹಕ್ಕನ್ನು ಹೊಂದಿರುತ್ತಾರೆ. ಮಕ್ಕಳು ಬೆಳೆಯುತ್ತಾ ಹೋದಂತೆ ತಮ್ಮ ಜ್ಞಾನವನ್ನು ಹಲವು ರೀತಿಯಲ್ಲಿ ಪಡೆಯುತ್ತಾ ಹೋಗುತ್ತಾರೆ. ಇದರಿಂದ ಅವರ ಜ್ಞಾನ ವಿಕಾಸವಾಗುತ್ತದೆ. ಇದೂ ಕೂಡ ಅವರು ಹೊಂದಿರುವ ದೊಡ್ಡ ಹಕ್ಕಾಗಿದೆ. ಇನ್ನೂ ಮಕ್ಕಳಿಗೆ ಭ್ರೂಣದಿಂದ ಹಿಡಿದು ವಯಸ್ಕರಾಗುವವರೆಗೂ ಕುಟುಂಬ ಹಾಗೂ ಸಮಾಜದಿಂದ ರಕ್ಷಣೆ ಪಡೆಯುವ ಎಲ್ಲಾ ಹಕ್ಕುಗಳನ್ನು ಪಡೆದಿದ್ದಾರೆ.

ಭಾಗವಹಿಸುವ ಹಕ್ಕು ಎಲ್ಲಾ ಅಗತ್ಯ ಸ್ಥಳಗಳಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು, ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ.

ಈ ಹಕ್ಕಿನಲ್ಲಿ ಮಕ್ಕಳಿಗೆ ಸಿಕ್ಕಿರುವ ಒಂದು ದೊಡ್ಡ ಅವಕಾಶ ಎಂದರೆ ” ಮಕ್ಕಳ ಹಕ್ಕುಗಳ ಗ್ರಾಮ ಸಭೆ”. ನಮ್ಮ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳು ಮಕ್ಕಳ ಸಮಸ್ಯೆಗಳನ್ನು ಆಲಿಸಲೆಂದೇ ಈ ಸಭೆಯನ್ನು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಯೋಜಿಸುತ್ತಾರೆ. ಈ ಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿರಿಸುತ್ತಾರೆ ಹಾಗೂ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಮಕ್ಕಳು ಸವಾಲುಗಳನ್ನು ಕೇಳುವುದು ಮಾತ್ರವಲ್ಲದೆ, ಒಂದು ವೇದಿಕೆಯಲ್ಲಿ ನಿಂತು ದೃಢವಾಗಿ ಮಾತನಾಡುವ ಸ್ಥೈರ್ಯ ಮಕ್ಕಳಿಗೆ ಬರುತ್ತದೆ.

ನಮಗೆ ಮಕ್ಕಳು ಎಂದಾಕ್ಷಣ ಕಣ್ಣೆದುರಿಗೆ ಬರುವುದು ಕೇವಲ ಶಾಲೆ ಹಾಗೂ ಅಂಗನವಾಡಿ ಮಕ್ಕಳು ಮಾತ್ರ. ಆದರೆ ಈ ಗ್ರಾಮ ಸಭೆಯಲ್ಲಿ ಈಗ ಜನಿಸಿದ ಮಗುವಿನ ಸಮಸ್ಯೆಯಿಂದ ಹಿಡಿದು ದ್ವಿತೀಯ ಪಿಯುಸಿ ವರೆಗಿನವರ ಸವಾಲುಗಳನ್ನು ಚರ್ಚಿಸಬಹುದಾಗಿದೆ.0 – 6 ವರ್ಷದ ಮಕ್ಕಳ ಸಮಸ್ಯೆಗಳ ಪ್ರತಿನಿಧಿಯಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಬೇಕು. 6 – 18 ವರ್ಷದ ಮಕ್ಕಳು ಸ್ವತಹ ತಾವೇ ಸಭೆಯಲ್ಲಿ ಭಾಗವಹಿಸುವ ಅವಕಾಶವಿದೆ. ಇದಲ್ಲವೇ ನಿಜವಾದ ಪ್ರಜಾಪ್ರಭುತ್ವ. ಇದುವೇ ನೈಜ ಸಂವಿಧಾನದ ಶಕ್ತಿ. ಈ ಗ್ರಾಮ ಸಭೆಗಳು ನಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಗ ಮಕ್ಕಳ ಸಾಕಷ್ಟು ಸಮಸ್ಯೆಗಳು ಬಗೆಹರಿವ ಭರವಸೆ ಮೂಡುತ್ತದೆ. ಆದ್ದರಿಂದ ಈ ವರ್ಷದ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು ಇಡೀ ರಾಜ್ಯದಾದ್ಯಂತ ಸಕಾರಾತ್ಮಕವಾಗಿ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಗತರಾಗೋಣ.


One thought on “‘ಮಕ್ಕಳ ಭಾಗವಹಿಸುವ ಹಕ್ಕಿನ ಸಾಕಾರಕ್ಕೆ ದೊಡ್ಡ ವೇದಿಕೆ – ಮಕ್ಕಳ ಹಕ್ಕುಗಳ ಗ್ರಾಮ ಸಭೆ’ವಿಶೇಷ ಲೇಖನ-ಮೇಘ ರಾಮದಾಸ್ ಜಿ

  1. ನಿಜವಾಗಿ ಬದಲಾಯಿಸಬೇಕು. ಚರ್ಚೆ ಕೂಡ ಅವಶ್ಯಕವಾಗಿದೆ

Leave a Reply

Back To Top