ಕವಿತೆ ಕಾರ್ನರ್

ಕವಿತೆಯಂತವಳು

(ಕವಿತೆಯಂತವಳು ಕವಿತೆಯಾದಾಗ)

We can 'hair-dly' believe how this woman transforms hairstyles ...

1.
ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದು
ಹಳೆಯ ಮನೆಯೊಳಗೆ ಕೂತು
ಬರೆಯುತ್ತಾಳೆ
ಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದು
ತನ್ನ ಒಂಟಿತನದ ಕಣ್ಣೀರಿನಿಂದ ಅವನ್ನು ತೊಳೆದುಒಣಗಿಸಿ
ತನ್ನ ಲೋಕದ ಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿ
ಕಟ್ಟುತ್ತಾಳೆ
ಕವಿತೆಯ ಹಾರ,
ತನ್ನ
ಅವಮಾನ
ಅಸಹಾಯಕತೆ
ಹತಾಶೆಗಳ ಪೋಣಿಸಿ!
ಓದುತ್ತೇನೆ.


ತಲೆದೂಗುತ್ತೇನೆ
ಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿ
ನಕ್ಕು ನಕ್ಕೇ ದು:ಖ ಮರೆಸಿ
ಮರುಳು ಮಾಡುವ ಅವಳ ಬದುಕುವ ಕಲೆಗಾರಿಕೆಯನ್ನು!
ಅವಳಿಗೂ ಬದುಕೆಂಬುದಿದೆ ಕವಿತೆಯ
ಹೊರತಾಗಿಯೂ
ಎಂಬುದು ನೆನಪಾದಾಗೆಲ್ಲ
ನಾನು ಕಣ್ಣೀರಾಗುತ್ತೇನೆ.
===================


2
ಕಂಡೆ:
ಶಬುದಗಳ ಒಡನಾಟದೊಳಗೆ ತಾನೇ ಒಂದು
ಹೊಸ ಶಬುದವಾದವಳ


ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂ
ಗಾಯದ ಗುರುತು
ಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲ
ಬಹಳಷ್ಟು ಸಾರಿ ಗಾಜಿನ ತುಂಡುಗಳು
ಕಭ್ಭಿಣದ ಮೊಳೆಗಳು!


ಹಾಗೆ ಮೆಲ್ಲಗವಳ ಪಾದಗಳನೆತ್ತಿ ನನ್ನ
ತೊಡೆಯ ಮೇಲಿಟ್ಟುಕೊಂಡು ಸವರಬೇಕು
ಪ್ರೇಮದ ಮುಲಾಮೆಂದು ಕೊಂಡಾಗೆಲ್ಲ
ಅವಳ ಮುಖ ಮಾತ್ರ ಕಾಣುತ್ತದೆ
ಪಾದಗಳನದೆಲ್ಲಿ ಬಿಟ್ಟು ಬರುತ್ತಾಳೋ!
==========
3
ಅವಳ ಮಲ್ಲಿಗೆಯ ಪಾದಗಳ
ಮುಂದೆ ಮಂಡಿಯೂರಿ ಕೂತು
ನಿವೇಧನೆ ಮಾಡಿಕೊಳ್ಳಬೇಕು.


ನಿನ್ನ ಕರುಣಾಳು ಕಂಗಳಿಂದ ನನ್ನನ್ನೊಮ್ಮೆ ನೋಡು
ನಿನ್ನ ಅಭಯಹಸ್ತದಿಂದ ನನ್ನ ತಲೆಯನ್ನೊಮ್ಮೆ ನೇವರಿಸು
ನಿನ್ನ ಮಧುರಕಂಠದಿಂದೊಮ್ಮೆ ನನ್ನ ಹೆಸರನುಸಿರಿಸು


ನಿನ್ನ ಕಾಣುವವರೆಗೂ ಕಂಡಿರಲಿಲ್ಲ
ನನ್ನೊಳಗಿನ ನಾನು


ತಗೋ ನಿನ್ನಾಯುಧಗಳಿಂದೆನ್ನ
ಅಹಂಕಾರದ ರೆಕ್ಕೆ ಕತ್ತರಿಸು
ನನ್ನ ವಿಷದ ಹಲ್ಲುಗಳನ್ನು ಕಿತ್ತು ಹಾಕು
ನನ್ನೆಲ್ಲ ಪಾಪಗಳನ್ನೂ ಮನ್ನಿಸು.


ಸಾದ್ಯವಾದರೆ ನನ್ನ
ಪ್ರೀತಿಸು!

***********

ಕು.ಸ.ಮಧುಸೂದನ

6 thoughts on “ಕವಿತೆ ಕಾರ್ನರ್

  1. ಮನೋಜ್ಞ ಕವಿತೆ
    ಎದೆಗೆ ನಾಟುತ್ತಿವೆ
    ಸಾಲುಗಳು

  2. ಕವಿತೆ ಯಾಚೆಗಿನ ಬದುಕನ್ನು ಕವಿತೆ ಯ ಸಹವಾಸದಲ್ಲಿ ಸಾಗಿಸುವ ಬದುಕಿನ ಕಲೆ ಅದ್ಭುತ. ಚೆನ್ನಾಗಿದೆ ಸರ್ ಪದ್ಯ

  3. ಕವಿತೆ ಓದಿದ ಮೇಲೆ ಕಾಡುತ್ತದೆ ಎಂದರೆ ಅದು ಗೆದ್ದಿದೆ ಅಂತಲೇ..ಕವತೆಯೊಲಿದ ಮನಕೆ ಶರಣು.

Leave a Reply

Back To Top