ಕಾವ್ಯಯಾನ

ತುಡಿತ

photos of lantern in village house के लिए इमेज परिणाम

ವಿಜಯ್ ಶೆಟ್ಟಿ

ಎಲ್ಲ ಮರೆತ ಒಂದು ಹಳೆಯ
ಊರಕೇರಿಯ ದಾರಿಗುಂಟ
ಸತತ
ಸೈಕಲ್ ತುಳಿಯುವ ತುಡಿತ
ನನಗೆ.

ಇನ್ನೇನು ದಿನ ಕಳೆದು,
ಉದಯಕ್ಕೆ ಸಿದ್ದವಾದ ರಾತ್ರಿಗೆ,
ಸಂಜೆಯ ಹುಂಜದ ಹಂಗಿಲ್ಲ
ಅಪರಿಚಿತ ಊರಕೇರಿಯ ದಿಕ್ಕು
ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು!

ತುಸುವೇ ಹೊತ್ತಿನ ಬಳಿಕ
ನಾನು ತಲುಪುವ ಕೇರಿಯಾದರೂ ಎಂಥದು?

ಮುದಿ ಲಾಟೀನಿನ ಮಂದ ಬೆಳಕಲ್ಲಿ
ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ
ಆ ಊರಿನಲ್ಲಿ?
ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ
ಆ ಊರಿನಲ್ಲಿ?
ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ
ಆ ಊರಿನಲ್ಲಿ?

ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆ
ಒಂದೋ
ಅಪರಿಚಿತ ಗುಡಿಸಲೊಂದರಲ್ಲಿ
ಮಂಕು ದೀಪದ ಸುತ್ತ ಕೆಲವರ ಮುಂದೆ
ಪ್ರಕಟಗೊಳ್ಳುವೆ

ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ
ಗಹ ಗಹಿಸಿ ನಗುವೆ, ಪವಡಿಸುವೆ
ಇಲ್ಲವೋ

ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು
ಅತ್ತಿಂದಿತ್ತ ಅಲೆವೆ,ಸವೆಯುವೆ ಒಂದೇ ಸಮನೆ
ಮಟ ಮಟ ರಾತ್ರಿಯು ನೆತ್ತಿಗೇರುವ ತನಕ

ಹಳತು ಮರೆತ ಕೇರಿಯ
ದಾರಿಗುಂಟ ಸತತ ಸೈಕಲ್ ತುಳಿವ ತುಡಿತ

ಎದುರು ಸಪೂರ ಕಾಲುಗಳ ಮೇಲೆ
ಬಂದ ಎಷ್ಟೋಂದು ಗಂಟುಗಳೂ, ಮೂಟೆಗಳು,
ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆ
ಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು

ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ
ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ?
ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ.

ಹಳತು, ಮರೆತ ಕೇರಿಯ ದಾರಿಗುಂಟ
ಸತತ ಸೈಕಲ್ ತುಳಿವ ತುಡಿತ.

***********

Leave a Reply

Back To Top