ಏಕೆ ಹೀಗೆ?
ನೀ.ಶ್ರೀಶೈಲ ಹುಲ್ಲೂರು
ಅಧರದಲಿರುವ ಲಾಲಿ ರಂಗು
ಪದರು ಪದರಾಗೆರಗುತಿಹುದು
ಮರುಗುತಿರುವ ಮನದ ಮತಿಯು
ಅತಿಯ ಮೀರಿ ಕೊರಗುತಿಹುದು
ಕಣ್ಣಲಿಟ್ಟ ಒಲವ ಬಾಣ
ಎದೆಯನಿರಿದು ನರಳುತಿಹುದು
ಕಳೆದಿರುವ ಕಾಲ ಸಾಲು
ಪದವ ಕಿತ್ತು ಕೊರಗುತಿಹುದು
ಆಗಸದ ಸೊಗಸ ಮೋಡ
ನಕ್ಕು ತಾನೆ ಅಳುತಲಿಹುದು
ಚಕ್ರವಾಕ ಹೆದೆಯ ಮೆಟ್ಟಿ
ಮುದವನಪ್ಪಿ ನಗುತಲಿಹುದು
ಇರುವ ಸುಖದ ಕೊರಳ ಮುರಿದು
ದು:ಖ ಕೇಕೆಗೈಯುತಿಹುದು
ದಾರಿ ನಡೆವ ಧೀರನೆದೆಗೆ
ಒದ್ದು ಹಾಸಗೈಯುತಿಹುದು
ಮನುಜರಾಳದೊಡಲ ಬಗೆದ
ಕರುಳೆ ಸಿಳ್ಳೆಯೂದುತಿಹುದು
ಭವದಿ ತೇಲುತಿರುವ ಘಟದ
ಉಸಿರ ಗುಳ್ಳೆಯೊಡೆಯುತಿಹುದು
ಏಕೆ ಹೀಗೆ ದೇವ ಭಾವ ?
ತನ್ನ ತಾನೆ ತುಳಿಯುತಿಹುದು
ನರರ ನಡುವೆ ನರಕ ತೂರಿ
ಮರುಕವಿರದೆ ಅಳಿಯುತಿಹುದು
*******
ಚಂದ ಪದ್ಯ…
ಪತ್ರಿಕೆಯಲ್ಲಿ ನೋಡುತ್ತಿದ್ದ ಹಳೆಯ ಮುಖಗಳಲ್ಲಿ ನೀವು ಒಬ್ಬರು..
* ಫಾಲ್ಗುಣ ಗೌಡ ಅಚವೆ