ಆವಿಷ್ಕಾರ
ಡಾ.ಅಜಿತ್ ಹರೀಶಿ
ಗುಪ್ತಗಾಮಿನಿ ರಕುತ
ಹೃದಯದೊಡಲಿಂದ ಚಿಮ್ಮುತ
ಕೋಟಿ ಜೀವಕಣಗಳಿಗುಣಿಸುತ
ಜೀವಿತವ ಪೊರೆಯುವುದು
ಎಷ್ಟು ಸಹಸ್ರಕಾಲದ ನಡೆಯು
ಹೀಗೆ ಅರಿವಾದಂತೆ
ಹೊಸ ಕಾಯಕಲ್ಪ ಜೀವನಕ್ಕೆ…!
ಪರಮಾಣುಗಳಲಿ ಅದುಮಿಟ್ಟ
ಬಹಳ ಬಲವಾದ ಸ್ಫೋಟ
ಅಣ್ವಸ್ತ್ರಗಳೊಳಗೆ ಬಿಗಿದಿಟ್ಟು
ಲಕ್ಷ ಜೀವಗಳ ಮರಣಪಟ್ಟಿ
ರಣಕಹಳೆ ಊದುವ ಮೊದಲೇ
ಯುದ್ಧ ನಡೆಸುವ ರಣನೀತಿ
ಅಸ್ತ್ರಗಳು ಅಣುವಾದಂತೆ
ಬೃಹತ್ ದ್ವೇಷ ಜಗಕ್ಕೆ…!
ಧರಣಿ ಹೂಡದ ಧರೆಯ ಮೇಲೆ
ಹಸಿರುಟ್ಟು ನಿಂತ ಸಸ್ಯಶ್ಯಾಮಲೆ
ಕಾಡು, ನಾಡಿಗೆ ಜೀವಂತ ದೇವರೇ
ಇವು ಜೀವಿಸುತ್ತವೆ, ಎಂಬ ವಿಜ್ಞಾನ
ಈ ತಿಳಿವು ಬಂದಂತೆ
ಮುನ್ನಡೆಯಾಯಿತು ವಿನಾಶಕ್ಕೆ..!
**********
ಕವಿತೆ ಸೊಗಸಾಗಿದೆ
ಸೂಪರ್
ಕವಿತೆ ತುಂಬಾ ಚೆನ್ನಾಗಿದೆ.
ಚೆಂದದ ಕವಿತೆ
ಸೊಗಸಾದ ಕವಿತೆ
ಚೆನ್ನಾಗಿದೆ ಕವನ